ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕರ್ತವ್ಯ ಲೋಪ: ಕಂದಾಯ ಅಧಿಕಾರಿ ಜಯಶೀಲ ಅಮಾನತು

ನಗರಸಭೆ: ಇ-ಸ್ವತ್ತು, ಖಾತೆ, ಹಕ್ಕು ಬದಲಾವಣೆ ಮಾಡಿಕೊಡಲು ವಿಳಂಬ, ತನಿಖೆಯಿಂದ ಸಾಬೀತು
Last Updated 4 ಮೇ 2022, 15:33 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯ ವ್ಯಾಪ್ತಿಯ ಸಾರ್ವಜನಿಕರಿಗೆ ಇ–ಆಸ್ತಿ, ಇ-ಸ್ವತ್ತು, ಖಾತೆ, ಹಕ್ಕು ಬದಲಾವಣೆ ಮಾಡಿಕೊಡಲು ಎಂಟು ತಿಂಗಳುಗಳಿಂದ ವರ್ಷಕ್ಕೂ ಹೆಚ್ಚು ಕಾಲ ವಿಳಂಬ ಮಾಡಿ ಕರ್ತವ್ಯ ಲೋಪ ಎಸಗಿದ ಕಂದಾಯ ಅಧಿಕಾರಿ ಜಯಶೀಲ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಆದೇಶ ಹೊರಡಿಸಿದ್ದಾರೆ.

ಏಪ್ರಿಲ್‌ 30ರಂದೇ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರತಿ ಬುಧವಾರ ಲಭ್ಯವಾಗಿದೆ.

‘ನಗರಸಭೆಯಲ್ಲಿ ಖಾತೆ ಬದಲಾವಣೆ, ಇ–ಸ್ವತ್ತು ಸೇರಿದಂತೆ ಕಂದಾಯ ಇಲಾಖೆಗೆ ಸೇರಿದ ಕೆಲಸಗಳು ವಿಳಂಬವಾಗುತ್ತಿದೆ. ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ’ ಎಂಬ ಬಗ್ಗೆ ಹಲವು ದೂರುಗಳು ಬಂದಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೂ ಹಲವರು ದೂರು ನೀಡಿದ್ದರು. ಈ ಸಂಬಂಧ ಅಧಿಕಾರಿಗಳ ಸಭೆಗಳಲ್ಲೂ ಅವರು ಪ್ರಸ್ತಾಪಿಸಿದ್ದರು.

ಆರೋಪಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತವು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್‌ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.

‘ತನಿಖಾ ತಂಡವು ತಪಾಸಣೆ ನಡೆಸಿದಾಗಕಂದಾಯಾಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು ಸಾರ್ವಜನಿಕರಿಗೆ ಇ-ಆಸ್ತಿ, ಹಕ್ಕು ಬದಲಾವಣೆ, ಇ-ಸ್ವತ್ತು ನೀಡಲು ವಿಳಂಬ ಮಾಡಿರುವುದು ದೃಢಪಟ್ಟಿದೆ. ಪ್ರತಿಯೊಂದು ಕಡತದ ವಿಲೇವಾರಿಯಲ್ಲಿಯೂ ನಿಗದಿತ ಸಮಯಕ್ಕಿಂತ 8 ರಿಂದ 10 ತಿಂಗಳು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಳಂಬ ಮಾಡಿರುವುದು ಸ್ಪಷ್ಟವಾಗಿದೆ.ಖಾತೆ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ನಿಯಮಗಳ ಅನ್ವಯ ವಿಷಯ ವಹಿಯ ನಿರ್ವಹಣೆಯನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸದೆ ಇರುವುದೂ ಕಂಡು ಬಂದಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 10(2)ರಲ್ಲಿ ದತ್ತವಾಗಿರುವ ಅಧಿಕಾರದ ಅಡಿಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು, ಜಯಶೀಲ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.

‘ಸಕಾಲ ಉದ್ದೇಶವೇ ಬುಡಮೇಲು'
‘ಸಕಾಲ ಯೋಜನೆಯಡಿಯಲ್ಲಿ ಕಂದಾಯ ಶಾಖೆಗೆ ಸ್ವೀಕೃತವಾಗಿರುವ ಅರ್ಜಿಗಳು ಹಾಗೂ ತಂತ್ರಾಂಶದಲ್ಲಿ ವಿಲೇವಾರಿಗೊಂಡ ಅರ್ಜಿಗಳ ಸಂಖ್ಯೆಗಳನ್ನು ಪರಿಶೀಲಿಸಿದಾಗ, 1,192 ಅರ್ಜಿಗಳನ್ನು ಸೇವೆ ನೀಡದೆಯೇ ಬೈಪಾಸ್ ಮಾಡಿರುವುದು ತನಿಖಾ ವರದಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಸಕಾಲ ತಂತ್ರಾಂಶದ ಉದ್ದೇಶವನ್ನೇ ಬುಡಮೇಲು ಮಾಡಿ ಸಾರ್ವಜನಿಕರಿಗೆ ಸೇವೆ ನೀಡದಿದ್ದರೂ ಸಕಾಲ ತಂತ್ರಾಂಶದಲ್ಲಿ ಸೇವೆ ನೀಡಿರುವುದಾಗಿ ಆನ್‌ಲೈನ್ ತಂತ್ರಾಂಶದಲ್ಲಿ ಅರ್ಜಿಗಳನ್ನು ಮುಕ್ತಾಯಗೊಳಿಸಿ, ಘೋರ ಕರ್ತವ್ಯಲೋಪ ಎಸಗಲಾಗಿದೆ’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT