ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಪುನರ್ವಸತಿಗೆ ಒತ್ತು: ಸಚಿವ ಆರ್‌.ಅಶೋಕ

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರೊಂದಿಗೆ ಸಚಿವರ ಊಟ, ಎಲ್ಲ ನೆರವಿನ ಭರವಸೆ
Last Updated 5 ಆಗಸ್ಟ್ 2022, 16:12 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ/ಯಳಂದೂರು: ಕಂದಾಯ ಸಚಿವ ಆರ್‌.ಅಶೋಕ ಅವರು ಶುಕ್ರವಾರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರ ತಾಲ್ಲೂಕಿನ ವಿವಿಧ ಕಡೆಗಳಿಗೆ ಭೇಟಿ ನೀಡಿ ನೆರೆ ಹಾಗೂ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳನ್ನು ಪರಿಶೀಲಿಸಿದರು. ಸಂತ್ರಸ್ತರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಪ‍ರಿಹಾರದ ಚೆಕ್‌ಗಳನ್ನೂ ವಿತರಿಸಿದರು.

‘ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುತ್ತದೆ. 15 ದಿನಗಳಲ್ಲಿ ಅವರ ಖಾತೆಗಳಿಗೆ ನೇರವಾಗಿ ನೆರೆ ಪರಿಹಾರ ಸೇರಲಿದೆ’ ಎಂದರು.

ಯಳಂದೂರು ತಾಲ್ಲೂಕಿನ ಗಣಿಗನೂರು ಗ್ರಾಮದಲ್ಲಿ ಸುವರ್ಣಾವತಿ ನದಿ ಉಕ್ಕೇರಿದ ಕಾರಣದಿಂದ ಸಂತ್ರಸ್ತರಾದ ಕುಟುಂಬಗಳ ಮನೆಗಳನ್ನು ವೀಕ್ಷಿಸಿ, ಗ್ರಾಮದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ಗ್ರಾಮದ ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇವರ ಪುನರ್ವಸತಿಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಸೂರು ಕಳೆದುಕೊಂಡವರಿಗೆ ಸ್ಪಂದಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.

ಆಗಿರುವ ನಷ್ಟವನ್ನು ಅಂದಾಜಿಸಲು ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲಿದ್ದಾರೆ. ಮನೆ ಕಳೆದುಕೊಂಡರೆ ₹ 5 ಲಕ್ಷ, ಹೊಲ, ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾದರೆ ಎಕರೆಗೆ ₹ 13,800, ಗೋಡೆ ಕುಸಿದರೆ ₹50 ಸಾವಿರ ಪರಿಹಾರ ವಿತರಿಸಲಾಗುವುದು’ ಎಂದು ಹೇಳಿದರು.

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು, ‘ಪ್ರವಾಹ ಪರಿಸ್ಥಿತಿ ಇಳಿದ ಬಳಿಕ ಮನೆಗೆ ತೆರಳುವಾಗ ನಿಮಗೆ 15 ದಿನಗಳಿಗೆ ಬೇಕಾದ ದಿನಸಿ ಕಿಟ್‌ಗಳನ್ನು ಜಿಲ್ಲಾಡಳಿತ ನೀಡಲಿದೆ’ ಎಂದು ಹೇಳಿದ ಅಶೋಕ, ಕಿಟ್‌ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಸೂಚಿಸಿದರು.

ಬಳಿಕ ಸಚಿವರು ಕಾಳಜಿ ಕೇಂದ್ರದಲ್ಲೇ ಸಂತ್ರಸ್ತರೊಂದಿಗೆ ಮಧ್ಯಾಹ್ನದ ಊಟ ಮಾಡಿದರು.ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು.

ಶಾಸಕ ಎನ್.ಮಹೇಶ್ ಮಾತನಾಡಿ, ‘2018–19ನೇ ಸಾಲಿನಲ್ಲಿ ಸಾಲಿನಲ್ಲಿ ಪ್ರವಾಹ ತಲೆದೋರಿತ್ತು. ಪ್ರಸ್ತುತ ಪ್ರವಾಹದಿಂದ ಜಮೀನಿನಲ್ಲಿ ನಾಶವಾದ ಬೆಳೆ, ಮನೆ ಸರ್ವೆ ಮಾಡಿಸಲಾಗುತ್ತಿದೆ. ತೊಂದರೆಗೊಳಗಾದ ಕುಟುಂಬಗಳನ್ನು ಕಾಳಜಿ ಕೇಂದ್ರದಲ್ಲಿ ಇರಿಸಿದ್ದೇವೆ. ಪರಿಹಾರ ಹಣವನ್ನು ಹೆಚ್ಚಳ ಮಾಡಲಾಗಿದೆ. ನಿಮ್ಮ ಜೊತೆ ನಾವಿದ್ದೇವೆ’ ಎಂದು ಧೈರ್ಯ ತುಂಬಿದರು.

ದಾಸನಪುರಕ್ಕೆ ಭೇಟಿ: ಇದಕ್ಕೂ ಮೊದಲು ಸಚಿವರು, ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ತೀರದ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಸ್ಥಿತಿಯನ್ನು ವೀಕ್ಷಿಸಿದರು.

ಮಳೆಯ ಪ್ರಮಾಣ, ನೀರು ಹೆಚ್ಚಾದರೆ ನೆರೆ ಉಂಟಾಗುವ ಗ್ರಾಮಗಳು, ಮಳೆಗಾಲದಲ್ಲಿ ಆ ಭಾಗದ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ದಾಸನಪುರ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ನೀರು ಹೆಚ್ಚಾದಾಗ ಗ್ರಾಮಗಳಿಗೆ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಮಧ್ಯಾಹ್ನ ಮೇಲೆತಾಲ್ಲೂಕಿನ ಚಂದಕವಾಡಿ, ಕೋಡಿಮೋಳೆಗೆ ಭೇಟಿ ನೀಡಿದ ಕೋಡಿಮೋಳೆ ಗ್ರಾಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಿದರು.

ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರರಾದ ಆನಂದಪ್ಪ ನಾಯಕ ಇತರರು ಇದ್ದರು.

‘ಪರಿಹಾರಕ್ಕೆ ಇನ್ನೂ ₹500 ಕೋಟಿ’
ರಾಜ್ಯದಲ್ಲಿ ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್‌.ಅಶೋಕ, ‘ಈವರೆಗೆ 60 ಜನ ಮೃತಪಟ್ಟಿದ್ದಾರೆ. 1.63 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 10,373 ರಸ್ತೆಗಳು, 923 ಸೇತುವೆಗಳು, 4,338 ಶಾಲಾ ಕಟ್ಟಡಗಳು, 16,301 ವಿದ್ಯುತ್ ಕಂಬಗಳು, 15,690 ಮನೆಗಳು ಹಾಳಾಗಿವೆ. 64 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. 8,057 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಮಳೆ ಹಾನಿ ಪರಿಹಾರಕ್ಕೆ ಈಗಾಗಲೇ ₹300 ಕೋಟಿ ಪರಿಹಾರ ನೀಡಲಾಗಿದೆ. ಶನಿವಾರದೊಳಗೆ ಮತ್ತೆ ₹500 ಕೋಟಿ ಬಿಡುಗಡೆ ಮಾಡಲಾಗುವುದು. ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹800 ಕೋಟಿ ಇಡಲಾಗಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ’ ಎಂದರು.

ತಮಿಳುನಾಡಿನ ಕಾಟ ತಪ್ಪಿದೆ: ‘ಬಿಜೆಪಿ ಸರ್ಕಾರ ಬಂದ ಬಳಿಕ ಸತತ ಮಳೆಯಾಗುತ್ತಿದೆ. ಬೇಸಿಗೆಯಲ್ಲೂ ಕೆರೆಗಳು ತುಂಬಿ ತುಳುಕುತ್ತಿವೆ. ನಿರಂತರ ಮಳೆಯಿಂದಾಗಿ ತಮಿಳುನಾಡಿನವರ ಶನಿಕಾಟ ಮೂರು ವರ್ಷಗಳಿಂದ ತಪ್ಪಿದೆ. ಮೇಕೆದಾಟು ಯೋಜನೆಯ ಬಗ್ಗೆ ಅವರ ತಕರಾರು ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT