ಶುಕ್ರವಾರ, ಡಿಸೆಂಬರ್ 13, 2019
26 °C

ಬೈಕ್‌ ಮೇಲೆ ಉರುಳಿದ ಲಾರಿ: ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ ಬಳಿ, ಬ್ರೇಕ್‌ ವೈಫಲ್ಯದಿಂದ ನಿಯಂತ್ರಣ ತಪ್ಪಿದ ಲಾರಿಯೊಂದು, ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಉರುಳಿಬಿದ್ದ ಪರಿಣಾಮ ಚಾಲಕ ಹಾಗೂ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ತಾಲ್ಲೂಕಿನ ಶಿವಪುರ ಗ್ರಾಮದ ಶಿವಪ್ಪ, ಕಾಳಪ್ಪ ಹಾಗೂ ಚಾಲಕ ಈಶ್ವರಪ್ಪ ಮೃತಪಟ್ಟವರು. ಈಶ್ವರಪ್ಪ ಅವರು ಎಲ್ಲಿಯವರು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. 

ಶಿವಪ್ಪ ಹಾಗೂ ಕಾಳಪ್ಪ ಅವರು ಟಿವಿಎಸ್ ಎಕ್ಸೆಲ್‌ನಲ್ಲಿ ಬಂಡೀಪುರದ ಕಡೆಗೆ ಹೋಗುತ್ತಿದ್ದರು. ಪ್ಲೈವುಡ್‌ ಶೀಟ್‌ಗಳನ್ನು ಹೊತ್ತಿದ್ದ ಲಾರಿಯು ತಮಿಳುನಾಡು ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿತ್ತು. ಬಂಡೀಪುರದ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ಬ್ರೇಕ್‌ ಕೈಕೊಟ್ಟಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ, ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಉರುಳಿ ಬಿದ್ದು ಹಳ್ಳಕ್ಕೆ ಬಿದ್ದಿದೆ. 

ನಾಲ್ಕೈದು ತಿಂಗಳ ಹಿಂದೆ, ಇದೇ ಜಾಗದಲ್ಲಿ ಎರಡು ಲಾರಿ ಹಾಗೂ ಆಂಧ್ರಪ್ರದೇಶದ ಪ್ರವಾಸಿಗರ ಬಸ್ ಉರುಳಿ ಬಿದ್ದಿದ್ದವು.

‘ಇಳಿಜಾರಿನಲ್ಲಿ ತಿರುವು ಇರುವುದರಿಂದ ಭಾರಿ ವಾಹನಗಳು ನಿಯಂತ್ರಣ ಕಳೆದುಕೊಂಡು ಇಂತಹ ಘಟನೆ ನಡೆಯುತ್ತದೆ. ರಸ್ತೆ ನೇರವಾಗಿ ಇದ್ದರೆ ಅಪಘಾತ ಸಾಧ್ಯತೆ ಕಡಿಮೆಯಾಗುತ್ತದೆ’ ಎಂದು ಚಾಲಕರು ತಿಳಿಸಿದರು.

ನಜ್ಜುಗುಜ್ಜಾದ ಲಾರಿಯಲ್ಲಿ ಸಿಲುಕಿಕೊಂಡ ಚಾಲಕನ ಮೃತದೇಹವನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು