ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ- ನಿರಂತರ ಮಳೆ; ನಲುಗಿದ ರಸ್ತೆಗಳು

ಜಿಲ್ಲಾಡಳಿತದಿಂದ ಹಾಳಾದ ರಸ್ತೆಗಳ ಮಾಹಿತಿ ಸಂಗ್ರಹ, 638 ಕಿ.ಮೀ ರಸ್ತೆ ರಿಪೇರಿ ಅಗತ್ಯ
Last Updated 26 ಸೆಪ್ಟೆಂಬರ್ 2022, 4:47 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮೂರ್ನಾಲ್ಕು ತಿಂಗಳುಗಳಿಂದ ಸುರಿದ ನಿರಂತರ ಮಳೆ, ನೆರೆಯಿಂದಾಗಿ ಜನಜೀವನ ಮಾತ್ರವಲ್ಲ; ರಸ್ತೆಗಳೂ ನಲುಗಿ ಹೋಗಿವೆ.

ಮೊದಲೇ ಹಾಳಾಗಿದ್ದ ರಸ್ತೆಗಳು ಮಳೆಯ ಹೊಡೆತಕ್ಕೆ ಸಿಕ್ಕಿ ಪೂರ್ಣವಾಗಿ ಹಾಳಾಗಿದ್ದು, ಅಲ್ಪ ಸ್ವಲ್ಪ ಚೆನ್ನಾಗಿದ್ದ ರಸ್ತೆಗಳಲ್ಲೂ ಗುಂಡಿಗಳು ಬಿದ್ದು, ಸುಗಮ ಸಂಚಾರ ಸಾಧ್ಯವಾಗದಂತಹ ಸ್ಥಿತಿ
ನಿರ್ಮಾಣವಾಗಿದೆ.

ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ ಕೇಳುವುದೇ ಬೇಡ. ಒಳ್ಳೆಯ ರಸ್ತೆಗಳು ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ, ಜಿಲ್ಲಾಡಳಿತ ಶೀಘ್ರವಾಗಿ ರಸ್ತೆ ದುರಸ್ತಿ ಅಥವಾ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.

ಮಳೆಯ ಅಬ್ಬರ ನಿಂತ ಬಳಿಕ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆಯ ಬಗ್ಗೆ ಮಾಹಿತಿ
ಕಲೆ ಹಾಕಿವೆ.

ಜಿಲ್ಲಾಡಳಿತದ ಪ್ರಕೃತಿ ವಿಕೋಪ ನಿರ್ವಹಣಾ ಘಟಕ ನೀಡಿರುವ ಮಾಹಿತಿ ಪ್ರಕಾರ, ರಾಜ್ಯ, ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆಗಳು, ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 638.72 ಕಿ.ಮೀ ಉದ್ದದಷ್ಟು ರಸ್ತೆ ಹಾಳಾಗಿದೆ. ಜೊತೆ 38 ಸೇತುವೆ, ಮೋರಿಗಳೂ ಜಖಂಗೊಂಡಿವೆ.

ತಾಲ್ಲೂಕುವಾರು ಲೆಕ್ಕ ಹಾಕಿದರೆ, ಚಾಮರಾಜನಗರ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ 29.1 ಕಿಮೀ ನಷ್ಟು, ಜಿಲ್ಲಾ ಪ್ರಮುಖ ರಸ್ತೆಗಳು 119.8 ಕಿ.ಮೀ, ಗ್ರಾಮೀಣ ರಸ್ತೆಗಳು 57.5 ಕಿ.ಮೀನಷ್ಟು ಹಾಳಾಗಿದೆ.

ಹನೂರು ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ 96.95 ಕಿ.ಮೀ, ಜಿಲ್ಲಾ ರಸ್ತೆ 38.3 ಕಿ.ಮೀ, ಗ್ರಾಮೀಣ ಭಾಗಗಳಲ್ಲಿ 19.45 ಕಿ.ಮೀನಷ್ಟು ಹಾನಿಯಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜಿಲ್ಲಾ ರಸ್ತೆಗಳು 3.4 ಕಿ.ಮೀ, ಗ್ರಾಮೀಣ ರಸ್ತೆಗಳು 23.5 ಕಿ.ಮೀನಷ್ಟು ಕಿತ್ತು ಹೋಗಿದೆ.ಯಳಂದೂರು ತಾಲ್ಲೂಕಿನಲ್ಲಿ 26.32 ಕಿ.ಮೀನಷ್ಟು ಗ್ರಾಮೀಣ ರಸ್ತೆ ಹಾಳಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 165 ಕಿ.ಮೀ ನಷ್ಟು ರಸ್ತೆ ಹಾನಿಗೊಂಡಿದೆ. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 30 ಕಿ.ಮೀ, ಕೊಳ್ಳೇಗಾಲದಲ್ಲಿ 75 ಕಿ.ಮೀ, ಗುಂಡ್ಲುಪೇಟೆಯಲ್ಲಿ 4‌2 ಕಿ.ಮೀ, ಯಳಂದೂರಿನಲ್ಲಿ12 ಹಾಗೂ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5.8 ಕಿ.ಮೀ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಹಾರ ಕಡಿಮೆ: ರಸ್ತೆ ಹಾಳಾಗಿರುವುದಕ್ಕೆ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಅಡಿಯಲ್ಲಿ ಪರಿಹಾರ ಸಿಗುತ್ತದೆ. ಆದರೆ, ಅದು ತುಂಬಾ ಕಡಿಮೆ. ರಾಜ್ಯ ಹೆದ್ದಾರಿಗೆ ಒಂದು ಕಿ.ಮೀಗೆ ₹1 ಲಕ್ಷ ಹಾಗೂ ಜಿಲ್ಲಾ ರಸ್ತೆಗೆ ಒಂದು ಕಿ.ಮೀಗೆ ₹60 ಸಾವಿರ ಸಿಗುತ್ತದೆ. ಈ ಮೊತ್ತದಲ್ಲಿ ರಸ್ತೆಯನ್ನು ಪೂರ್ಣವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಕಳಪೆ ಕಾಮಗಾರಿ

ಕೊಳ್ಳೇಗಾಲ ವರದಿ: ಮಳೆಯಿಂದ ತಾಲ್ಲೂಕಿನಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಅದರಲ್ಲೂ ಸಣ್ಣ ಪುಟ್ಟ ಮಣ್ಣಿನ ರಸ್ತೆಗಳು ನೀರಿನಿಂದ ಕೊಚ್ಚಿ ಹೋಗಿದೆ. ತಾಲ್ಲೂಕಿನ ಅರೆಪಾಳ್ಯ ಗ್ರಾಮದಲ್ಲಿ ಮಳೆ ನೀರಿನ ರಭಸಕ್ಕೆ ಮುಖ್ಯ ಸೇತುವೆಯೇ ಕೊಚ್ಚಿ ಹೋಗಿದೆ. ಹಂಪಾಪುರ, ಕುಣಗಳ್ಳಿ ಕಚ್ಚಾ ರಸ್ತೆಗಳು ಹಾಗೂ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸುವರ್ಣಾವತಿ ನದಿ ಆರ್ಭಟಕ್ಕೆ ಜೀರ್ಣಗೊಂಡಿವೆ.

ಕಳಪೆ ಕಾಮಗಾರಿ ರಸ್ತೆ ಹಾಳಾಗುವುದಕ್ಕೆ ಕಾರಣ ಎಂಬುದು
ಜನರ ಆರೋಪ.

ಅಡ್ಡಾದಿಡ್ಡಿ ಸಂಚಾರ

ಯಳಂದೂರು ವರದಿ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯಲ್ಲಿ ಕಲ್ಲು ಕಿತ್ತು ಬಂದಿದ್ದು, ಸಂಚಾರ ದುಸ್ತರವಾಗಿದೆ. ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆಗಳು ಕೆಲವು ದೃಢತೆ ಕಳೆದುಕೊಂಡಿದೆ. ಬಿಳಿಗಿರಿರಂಗನ ಬೆಟ್ಟದ ರಸ್ತೆ ಅಲ್ಲಲ್ಲಿ ಕುಸಿದಿದೆ. ಮದ್ದೂರು ಮಹದೇಶ್ವರ-ಮಹಾಲಕ್ಷ್ಮಿ ಸುವರ್ಣಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬದಿ ಕುಸಿದಿದ್ದು ಇನ್ನು ದುರಸ್ತಿ ಬಗ್ಗೆ ಕಂಡಿಲ್ಲ.

ಆತಂಕದಲ್ಲಿ ಸವಾರರು

ಹನೂರು ವರದಿ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಮಳೆಯಿಂದಾಗಿ ಹಾಳಾಗಿದ್ದು, ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಿದೆ.ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಎಲ್ಲ ರಸ್ತೆಗಳು ಕಿತ್ತು ಬಂದಿವೆ. ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯೂ ಹಾಳಾಗಿದೆ. ಜಾತ್ರೆ ಕಾರಣಕ್ಕೆ ಅಲ್ಲಲ್ಲಿ ದುರಸ್ತಿ ಮಾಡಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರಸ್ತೆಯ ಪರಿಸ್ಥಿತಿ ಭಿನ್ನವಾಗಿಲ್ಲ. ತಾಲ್ಲೂಕಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಹಾಗಿದ್ದರೂ ಭಾರಿ ಮಳೆಗೆ ರಸ್ತೆಗಳು ಹಾಳಾಗಿವೆ.

‘ಹಾನಿ ವರದಿ ಸರ್ಕಾರಕ್ಕೆ ಸಲ್ಲಿಕೆ’

ಮಳೆಯಿಂದಾಗಿ ಜಿಲ್ಲೆಯಾದ್ಯಂತ ರಸ್ತೆಗಳಿಗೆ ಆಗಿರುವ ಹಾನಿಯನ್ನು ಅಂದಾಜಿಸ
ಲಾಗಿದೆ. ಈ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮದ ಪ್ರಕಾರ ಬರುವ ನಷ್ಟ ಪರಿಹಾರದ ಮೊತ್ತ ಕಡಿಮೆ. ಹೆಚ್ಚು ಹಾನಿಯಾಗಿರುವ ಕಡೆ ದುರಸ್ತಿ ಮಾಡಬಹುದು. ಹೊಸ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದಲೇ ಅನುದಾನ ಬರಬೇಕಾಗಿದೆ.

–ಚಾರುಲತಾ ಸೋಮಲ್‌,ಜಿಲ್ಲಾಧಿಕಾರಿ

–––––––––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಮಹದೇವ್‌ ಹೆಗ್ಗವಾಡಿಪುರ, ಬಿ.ಬಸವರಾಜು, ಅವಿನ್‌ ಪ್ರಕಾಶ್‌ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT