ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ಗೆ ₹499, ರೋಟರಿ ಕೊಡುಗೆ!

ಎಲ್ಲೆಡೆಯೂ ಶುಲ್ಕ ಹೆಚ್ಚಾದರೆ ಇಲ್ಲಿ ಕಡಿಮೆ, ಬಡವರಿಗೆ ಅನುಕೂಲ ಮಾಡುವ ಉದ್ದೇಶ
Last Updated 13 ಮೇ 2022, 15:59 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಕ್ಷೇಮ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಯು ಕಿಡ್ನಿ ಫೌಂಡೇಷನ್‌, ಮೈಸೂರಿನ ಐವರಿ ಸಿಟಿ ಹಾಗೂ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ–3190ಯ ಸಹಕಾರದಲ್ಲಿ ಕಳೆದ ವರ್ಷದ ಜುಲೈನಲ್ಲಿ ಆರಂಭಿಸಿದ್ದ ಡಯಾಲಿಸಿಸ್‌ ಕೇಂದ್ರದಲ್ಲಿ ಇನ್ನು ಮುಂದೆ ಡಯಾಲಿಸಿಸ್‌ಗಾಗಿ ರೋಗಿಗಳು ₹499 ಕೊಟ್ಟರೆ ಸಾಕು.

ಇದುವರೆಗೂ ಈ ಶುಲ್ಕ ₹800 ಇತ್ತು. ಬಡವರಿಗೆ ಡಯಾಲಿಸಿಸ್‌ ಚಿಕಿತ್ಸೆ ಇನ್ನಷ್ಟು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು ರೋಟರಿ ಸಂಸ್ಥೆಯು ಶುಲ್ಕವನ್ನು ಕಡಿತ ಮಾಡಿದೆ. ಶನಿವಾರದಿಂದ ಹೊಸ ಶುಲ್ಕ ಅನ್ವಯವಾಗಲಿದೆ. ಈ ಕೇಂದ್ರದಲ್ಲಿ ಈ ಹಿಂದೆ ಮೂರು ಡಯಾಲಿಸಿಸ್‌ ಯಂತ್ರಗಳಿದ್ದವು. ಈಗ ಮತ್ತೊಂದು ಯಂತ್ರವನ್ನು ಸೇರ್ಪಡೆ ಮಾಡಲಾಗಿದೆ. ದಿನವೊಂದಕ್ಕೆ 12 ಮಂದಿಗೆ ಡಯಾಲಿಸಿಸ್‌ ಮಾಡುವ ಸಾಮರ್ಥ್ಯವನ್ನು ಈ ಕೇಂದ್ರ ಹೊಂದಿದೆ.

ರೋಟರಿಯನ್‌ ಹಾಗೂ ಡಯಾಲಿಸಿಸ್‌ ಕೇಂದ್ರದ ಸಂಚಾಲಕ ಡಾ.ಆರ್‌.ಎಸ್‌.ನಾಗಾರ್ಜುನ್‌ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

‘ಜಿಲ್ಲಾಸ್ಪತ್ರೆ, ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾಧ್ಯವಾಗದೆ ಈಗಲೂ ಜಿಲ್ಲೆಯಿಂದ ಹಲವರು ಮೈಸೂರಿಗೆ ಹೋಗುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಜನರಿಗೆ ಅದರಲ್ಲೂ ಬಡವರಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸುವುದಕ್ಕಾಗಿ ರೋಟರಿ ಸಂಸ್ಥೆಯು ಈ ಕೇಂದ್ರ ಸ್ಥಾಪಿಸಿದೆ. ನಾವು ಈವರೆಗೆ ₹800 ಕನಿಷ್ಠ ಶುಲ್ಕವನ್ನು ಪಡೆಯುತ್ತಿದ್ದೆವು. ಕೆಲವರಿಗೆ ಆ ಶುಲ್ಕವನ್ನೂ ಕೊಡುವ ಶಕ್ತಿ ಇಲ್ಲ ಎಂಬುದು ನಮಗೆ ತಿಳಿದಿದೆ. ಹಾಗಾಗಿ, ಇನ್ನಷ್ಟು ಕಡಿಮೆ ಶುಲ್ಕಕ್ಕೆ ನೀಡಲು ಯೋಜನೆ ರೂಪಿಸಿದೆವು’ ಎಂದರು.

‘ಇದೇ ಉದ್ದೇಶಕ್ಕೆ ಡಾ.ಪಿ.ಬಿ.ಶ್ರೀನಿವಾಸ್‌ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದೆವು. ಅದರಲ್ಲಿ ಸ್ವಲ್ಪ ಹಣ ಸಂಗ್ರಹವಾಗಿದೆ. ಜೊತೆಗೆ ನಮ್ಮ ಸದಸ್ಯರು, ಮೈಸೂರಿನ ರೋಟರಿ ಐವರಿ ಸಿಟಿಯವರ ಸಹಕಾರದಲ್ಲಿ ಹಣ ಸಂಗ್ರಹಿಸಿ ಡಯಾಲಿಸಿಸ್‌ ಶುಲ್ಕವನ್ನು ₹499ಕ್ಕೆ ನಿಗದಿ ಪಡಿಸಲಾಗಿದೆ. ನಮಗೆ ತಿಂಗಳಿಗೆ ಹೆಚ್ಚುವರಿಯಾಗಿ ₹1 ಲಕ್ಷ ಹೊರ ಬರುತ್ತದೆ. ಒಂದು ವರ್ಷದ ಅವಧಿಗೆ ಬೇಕಾದಷ್ಟು ದುಡ್ಡು ನಮ್ಮ ಬಳಿ ಈಗ ಇದೆ’ ಎಂದು ಅವರು ಮಾಹಿತಿ ನೀಡಿದರು.

‌‘ಮೈಸೂರಿನ ರೋಟರಿ ಐವರಿ ಸಿಟಿಯು ಚಾರಿಟೇಬಲ್‌ ಟ್ರಸ್ಟ್‌ ನೋಂದಣಿ ಮಾಡುತ್ತಿದ್ದು, ದಾನಿಗಳು ಆ ಸಂಸ್ಥೆಗೆ ಹಣ ನೀಡಬಹುದು. ಅದಕ್ಕೆ 80ಜಿ ತೆರಿಗೆ ವಿನಾಯಿತಿಯೂ ಇದೆ’ ಎಂದರು.

ಡಯಾಲಿಸಿಸ್ ಕೇಂದ್ರದ ಖಜಾಂಚಿ ಪ್ರಕಾಶ್, ಕಾರ್ಯದರ್ಶಿ ಸುಭಾಷ್, ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.‌ಶ್ರೀನಿವಾಸನ್, ಕಾರ್ಯದರ್ಶಿ ನಾಗರಾಜು ಇದ್ದರು.

ಉಚಿತ ಡಯಾಲಿಸಿಸ್‌ ಗುರಿ

‘ಜನರಿಗೆ ಉಚಿತವಾಗಿ ಡಯಾಲಿಸಿಸ್‌ ಸೌಲಭ್ಯ ಕಲ್ಪಿಸಬೇಕು ಎಂಬುದು ನಮ್ಮ ಉದ್ಧೇಶ. ಅದಕ್ಕೆ ಸಾಕಷ್ಟು ದುಡ್ಡು ಬೇಕು. ಖಂಡಿತವಾಗಿ ಮುಂದೊಂದು ದಿನ ಉಚಿತವಾಗಿ ಈ ಸೌಲಭ್ಯವನ್ನು ನೀಡಲಿದ್ದೇವೆ. ಈ ಗುರಿಗೆ ಸಮಯ ಮಿತಿ ಹಾಕಿಕೊಂಡಿಲ್ಲ’ ಎಂದು ಡಾ.ನಾಗಾರ್ಜುನ್‌ ಅವರು ಹೇಳಿದರು.

‘ಚಾಮರಾಜನಗರದಲ್ಲಿ ಡಯಾಲಿಸಿಸ್ ಆಸ್ಪತ್ರೆಯಲ್ಲಿ ತೆರೆಯಬೇಕು ಎಂಬ ಉದ್ದೇಶವೂ ನಮಗಿದೆ. 10ರಿಂದ 12 ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಿ ವ್ಯವಸ್ಥಿತವಾಗಿ ಆಸ್ಪತ್ರೆಯನ್ನು ನಿರ್ವಹಿಸುವ ಯೋಚನೆ ಇದೆ’ ಎಂದು ಹೇಳಿದರು.

ಜನರು ಕೈಜೋಡಿಸಿ: ‘ಡಯಾಲಿಸಿಸ್‌ ಕೇಂದ್ರದ ಉಪಾಧ್ಯಕ್ಷ ಆರ್.‌ಎಂ.ಸ್ವಾಮಿ ಅವರು ಮಾತನಾಡಿ, ‘ಡಯಾಲಿಸಿಸ್ ಶುಲ್ಕ ಕಡಿಮೆ ಮಾಡಿರುವುದರಿಂದ ಸಂಸ್ಥೆಗೆ ಆರ್ಥಿಕವಾಗಿ ಹೊರೆ ಬೀಳುತ್ತದೆ. ಇದನ್ನು ನಿಭಾಯಿಸಲು ನಾವು ಬೇರೆ ಬೇರೆ ಕ್ರಮಗಳನ್ನು ಕೈಗೊಂಡಿದ್ದೇವೆ. ಬಡವರಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್‌ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು ಕೈಜೋಡಿಸಬೇಕು. ಹುಟ್ಟುಹಬ್ಬದ ಆಚರಣೆ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಇತರೆ ಶುಭ ಸಂದರ್ಭಗಳಲ್ಲಿ ಕಿಡ್ನಿ ವೈಫಲ್ಯ ಎದುರಿಸುತ್ತಿರುವ ರೋಗಿಗಳ ಡಯಾಲಿಸಿಸ್‌ಗೆ ಪ್ರಾಯೋಜಕತ್ವ ವಹಿಸಲು ಮುಂದೆಬರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT