ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಗಳ ಈಡೇರಿಕೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಆಗ್ರಹ

Last Updated 21 ಸೆಪ್ಟೆಂಬರ್ 2022, 16:26 IST
ಅಕ್ಷರ ಗಾತ್ರ

ಚಾಮರಾಜನಗರ: ವರ್ಷದಲ್ಲಿ ಒಂದು ಕುಟುಂಬಕ್ಕೆ ಕನಿಷ್ಠ 200 ದಿನಗಳ ಕೆಲಸ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ‌ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರಸ್ವಾಮಿ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ನಂತರ ಅಲ್ಲಿ ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿ ಸ್ವಾಭಿಮಾನ ಹಾಗೂ ಘನತೆಯಿಂದ ಬದುಕುತ್ತಿದ್ದೇವೆ. ಆದರೆ, ಇತ್ತೀಚೆಗೆ ಸರ್ಕಾರ ಹೊಸ ತಂತ್ರಜ್ಞಾನ ಹಾಗೂ ನೀತಿ ಅಳವಡಿಸಿರುವುದರಿಂದ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ದೂರಿದರು.

‘ಒಂದು ಕುಟುಂಬಕ್ಕೆ ವರ್ಷದಲ್ಲಿ 200 ದಿನಗಳ ಕೆಲಸ ನೀಡಬೇಕು. ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಆಗಿ ಕೂಲಿ ಕಾರ್ಮಿಕರಿಗೆ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಇದೆ. ಅಧಿಕಾರಿಗಳು ಕೆಲಸ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದನ್ನು ನಿಲ್ಲಿಸಬೇಕು. ಕೆಲಸಕ್ಕೆ ಅರ್ಜಿ ಹಾಕಿದ ತಕ್ಷಣ ಕೆಲಸ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಕೆಲಸ ನಿರ್ವಹಿಸಲು ಸಾಮಗ್ರಿಗಳ ಬಳಕೆ ಹಾಗೂ ರಿಪೇರಿಗಾಗಿ ಪ್ರತಿ ದಿನ ₹10 ಕೂಲಿಯ ಜೊತೆ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರ ಅದನ್ನು ಈಗ ಸ್ಥಗಿತಗೊಳಿಸಿದೆ. ಹಾಗಾಗಿ, ನಮಗೆ ಗ್ರಾಮ ಪಂಚಾಯತಿಯಿಂದ ಸಾಮಗ್ರಿಗಳನ್ನು ಪೂರೈಸಬೇಕು. ಇಲ್ಲದಿದ್ದರೆ ಈ ಹಣವನ್ನು ₹20ಕ್ಕೆ ಹೆಚ್ಚಿಸಿ ಖಾತೆಗೆ ಜಮೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲದ ಸಂದರ್ಭದಲ್ಲಿ, 5 ಕಿ.ಮೀ ಗಿಂತಲೂ ಹೆಚ್ಚಿನ ದೂರದಲ್ಲಿ ಕೆಲಸ ನೀಡಿದರೆ ಕೂಲಿ ಹಣದ ಶೇ 10ರಷ್ಟು ಹೆಚ್ಚು ಹಣ ನೀಡಲಾಗುತ್ತಿತ್ತು. ಅದನ್ನು ₹20ಕ್ಕೆ ಹೆಚ್ಚಿಸಬೇಕು. ಕೆಲಸ ಮಾಡಿದ ಐದು ದಿನಗಳ ಒಳಗಾಗಿ ಕೂಲಿ ಪಾವತಿ ಆಗಬೇಕು. ಹಲವು ಬಾರಿ ಒಂದೆರಡು ತಿಂಗಳು ಕಳೆದರೂ ಕೂಲಿ ಪಾವತಿ ಆಗಿರುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ವಿಳಂಬ ಭತ್ಯೆ (ಶೇ 0.5) ನೀಡುವ ಅವಕಾಶವಿದ್ದರೂ ಇಲ್ಲಿಯವರೆಗೆ ನೀಡಿಲ್ಲ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಪುಟ್ಟಮ್ಮ, ಚೆನ್ನಾಜಮ್ಮ, ಜ್ಯೋತಿ, ರೇಣುಕಾ, ರುಕ್ಮಿಣಿ, ಜಯಲಕ್ಷ್ಮಿ, ಭಾಗ್ಯ, ಸುಜಾತ, ಸುಶೀಲ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT