ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗ್ರಾಮ ದೇವತೆ ಶಾಪ ಇದೆ, ನ್ಯಾಯ ದೇವತೆಯ ತೀರ್ಪಿದೆ; ಅವರು ಮಂತ್ರಿ ಹೇಗೆ ಆಗ್ತಾರೆ'

Last Updated 13 ಜನವರಿ 2021, 12:18 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅವರಿಗೆ ಗ್ರಾಮ ದೇವತೆ ಶಾಪ ಇದೆ. ನ್ಯಾಯ ದೇವತೆಯ ತೀರ್ಪಿದೆ. ಯಡಿಯೂರಪ್ಪ ಅವರಿಗೆ ಏನು ಮಾಡುವುದಕ್ಕಾಗುತ್ತದೆ? ಕಾನೂನಿಗಿಂತ ಅವರು ದೊಡ್ಡವರಾ? ಅದಕ್ಕೆ ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದಾರೆ’ ಎಂದುಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರು ಅಡಗೂರು ಎಚ್‌.ವಿಶ್ವನಾಥ್‌ ಅವರನ್ನು ಕುಟುಕಿದರು.

ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಿಮ್ಮ ಇಷ್ಟ ಬಂದ ಹಾಗೆ ತೀರ್ಮಾನ ತೆಗೆದುಕೊಂಡು, ಜನತಾದಳದ ಕಾರ್ಯಕರ್ತರು, ನಾಯಕರು ಹಾಗೂ ಹುಣಸೂರು ಮತದಾರರನ್ನು ಮುಂಬೈಗೆ ಹೋಗಿ ಮಾರಾಟ ಮಾಡಿ ಬಂದು ಇವತ್ತು ಯಾಕೆ ಯಡಿಯೂರಪ್ಪ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತೀರಿ?ಹುಣಸೂರು ಅಭ್ಯರ್ಥಿ ಆಗಬೇಡ ಎಂದು ಅವರು ಹೇಳಿರಲಿಲ್ಲವೇ? ಈಗ ಮಾಡಿದ್ದುಣ್ಣೋ ಮಹರಾಯ’ ಎಂದು ವಿಶ್ವನಾಥ್‌ ಹೆಸರು ಹೇಳದೆಯೇ ವ್ಯಂಗ್ಯವಾಡಿದರು.

ಕೋಗಿಲೆ ಅಲ್ಲ ಕಾಗೆ: ಮಂತ್ರಿ ಮಾಡದ ಯಡಿಯೂರಪ್ಪ ಅವರನ್ನು ಅವರ ಮನೆ ದೇವರು ಸಿದ್ಧಲಿಂಗೇಶ್ವರನೂ ಕ್ಷಮಿಸುವುದಿಲ್ಲ ಎಂಬ ವಿಶ್ವನಾಥ್‌ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇವರನ್ನು ತಾಯಿ ಚಾಮುಂಡೇಶ್ವರಿ ಕ್ಷಮಿಸದೇ ಇರುವುದಕ್ಕೆ ಈ ಗತಿ ಬಂದಿದೆ’ ಎಂದು ಉತ್ತರಿಸಿದರು.

‘ಮೊದಲು ಕಾಂಗ್ರೆಸ್‌ನವರು ಅವರನ್ನು ಮದುವೆಯಾಗಿದ್ದರು. 40 ವರ್ಷಗಳ ಬಳಿಕ ವಿಚ್ಛೇದನ ಆಯಿತು. ಅವರು, ‘ಇದು ನಿಮಗೆ ಬೇಡ’ ಎಂದು ನಮಗೆ ಹೇಳಿದ್ದರು. ಹಾಗಿದ್ದರೂ, ಇರಲಿ ನೋಡೋಣ ಎಂದು ನಾವು ಕೂಡಾವಳಿ ಮಾಡಿಕೊಂಡೆವು. ಬಿಜೆಪಿಯವರು ದಿನ ಲೆಕ್ಕದಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಅವರ ಪರಿಸ್ಥಿತಿ ಏನಾಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದೆ. ಇವತ್ತು ಅದೇ ರೀತಿ ಆಗಿದೆ’ ಎಂದು ವ್ಯಂಗ್ಯವಾಡಿದರು.

‘40 ವರ್ಷಗಳಿಂದ ಮೈಸೂರು ಹಾಗೂ ಚಾಮರಾಜನಗರದ ಜಿಲ್ಲೆ ಜನ ಅವರನ್ನು ನೋಡಿದ್ದಾರೆ. ಅವರ ನಿಜಬಣ್ಣ ಈಗ ಎಲ್ಲರಿಗೂ ಅರಿವಾಗಿದೆ. ಕೋಗಿಲೆ ಅಲ್ಲ, ಕಾಗೆ ಎಂಬುದು ಗೊತ್ತಾಗಿದೆ’ ಎಂದು ಸಾ.ರಾ.ಮಹೇಶ್‌ ಟೀಕಿಸಿದರು.

‘ನಂಬಿಕೆ ದ್ರೋಹಿಗಳು ಯಾರು? ಮಾತಿಗೆ ತಪ್ಪಿದವರು ಯಾರು? ಅಧಿಕಾರಕ್ಕಾಗಿ, ವೈಯಕ್ತಿಕ ಆಸೆಗಳಿಗಾಗಿ ಚಳಿಗಾಲಕ್ಕೊಂದು, ಮಳೆಗಾಲಕ್ಕೊಂದು, ಬೇಸಿಗೆಕಾಲಕ್ಕೊಂದು ಗೂಡು ಹುಡುಕಿಕೊಂಡು ಹೋಗುವವರು ಯಾರು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT