ಬುಧವಾರ, ಅಕ್ಟೋಬರ್ 28, 2020
29 °C
ವೇತನ ತಾರತಮ್ಯ ಆರೋಪ; ವಿದ್ಯಾರ್ಹತೆಗೆ ಸಮನಾದ ಸಂಬಳ ನೀಡಲು ಆಗ್ರಹ

ಮತ್ತೆ ಕೆಎಟಿ ಮೊರೆ ಹೋದ ಡಿಆರ್‌ಎಫ್‌ಒಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯ ಅಧಿಕಾರಿಗಳ (ಡಿಆರ್‌ಎಫ್‌ಒ) ವೇತನವನ್ನು ಪರಿಷ್ಕರಣೆ ಮಾಡುವಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಆದೇಶ ನೀಡಿ ಒಂಬತ್ತು ತಿಂಗಳು ಕಳೆದರೂ ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. 

ಮೂಲ ಅರ್ಜಿದಾರರಾದ ಡಿಆರ್‌ಎಫ್‌ಒ ಲಕ್ಷ್ಮಣ ಕಟ್ಟೀಮನಿ ಹಾಗೂ ಇತರ ಆರು ಮಂದಿ ಕಳೆದ ತಿಂಗಳು (ಸೆ.11) ಮತ್ತೆ ಕೆಎಟಿಯ ಮೊರೆ ಹೋಗಿದ್ದು, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. 

ರಾಜ್ಯದಲ್ಲಿ ‌2,374 ಡಿಆರ್‌ಎಫ್ಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಇವರ ವೇತನ ಶ್ರೇಣಿ ₹23,500ರಿಂದ ₹47,650 ಇದೆ. 2011ರವೆಗೂ ಡಿಆರ್‌ಎಫ್ಒ ನೇಮಕಾತಿಯ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಆಗಿತ್ತು. 2012ರಲ್ಲಿ ವಿದ್ಯಾರ್ಹತೆಯನ್ನು ಬಿ.ಎಸ್ಸಿ (ವಿಜ್ಞಾನ) ಹಾಗೂ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವಿ ಎಂದು ನಿಗದಿಪಡಿಸಲಾಗಿದೆ. 

ಪದವಿ ವಿದ್ಯಾರ್ಹತೆ ಹೊಂದಿರುವ ಇತರೆ ಅಧಿಕಾರಿ ವೃಂದಗಳ ವೇತನ ಶ್ರೇಣಿ ₹37,900 ರಿಂದ ₹70,850ವರೆಗೆ ಇದೆ. ಡಿಆರ್‌ಎಫ್‌ಒಗಳಿಗೆ ಹಳೆಯ ವೇತನ ಶ್ರೇಣಿಯನ್ನೇ ಮುಂದುವರಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಡಿಆರ್‌ಎಫ್‌ಒಗಳು, ವೇತನದ ತಾರತಮ್ಯವನ್ನು ನಿವಾರಿಸುವಂತೆ ಹಲವು ವರ್ಷಗಳಿಂದ ಇಲಾಖೆಯ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. 

ಲಕ್ಷ್ಮಣ ಕಟ್ಟೀಮನಿ ಹಾಗೂ ಇತರ ಆರು ಮಂದಿ ಈ ಸಂಬಂಧ 2016ರಲ್ಲಿ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೆಎಟಿ, 2019ರ ಡಿಸೆಂಬರ್‌ 3ರಂದು ಆದೇಶ ಹೊರಡಿಸಿ, ಆರು ತಿಂಗಳ ಒಳಗೆ ವೇತನ ಪರಿಷ್ಕರಿಸುವಂತೆ ಸೂಚಿಸಿತ್ತು. ಈ ಆದೇಶವನ್ನು ನಿರ್ಲಕ್ಷಿಸಿರುವ ಸರ್ಕಾರ ಇದುವರೆಗೂ ವೇತನ ಪರಿಷ್ಕರಣೆ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬುದು ಡಿಆರ್‌ಎಫ್‌ಗಳ ಆರೋಪ.

‘20 ವರ್ಷಗಳಿಂದ ವೇತನ ತಾರತಮ್ಯವನ್ನು ಎದುರಿಸುತ್ತಿದ್ದೇವೆ. ನಮ್ಮ ವೃಂದಕ್ಕೆ ಸಮಾನಾಗಿರುವ ಗೃಹ ಇಲಾಖೆಯ ಸಬ್‌‌ ಇನ್‌ಸ್ಪೆಕ್ಟರ್‌, ಸಹಾಯಕ ತೋಟಗಾರಿಕಾ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ, ಪಿಡಿಒ ಹುದ್ದೆಗಳಿಗೆ ಹೆಚ್ಚು ವೇತನ ನೀಡಲಾಗುತ್ತಿದೆ. ನಮಗೆ ಇನ್ನೂ ಚಾಲಕರ ವೃಂದದ ವೇತನ ಸಿಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಡಿಆರ್‌ಎಫ್‌ಒ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮ್ಮದು ಅತ್ಯಂತ ಕಷ್ಟದ ಕೆಲಸ. ಅಪಾಯವನ್ನು ಲೆಕ್ಕಿಸದೇ ಅರಣ್ಯ ಸಂಪತ್ತನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಇಡೀ ರಾಜ್ಯದಲ್ಲಿ 2,374 ಡಿಆರ್‌ಎಫ್‌ಒಗಳು ಇದ್ದಾರೆ. ವೇತನ ಪರಿಷ್ಕರಣೆ ಮಾಡುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಏನೂ ಆಗುವುದಿಲ್ಲ. ಈ ವಿಚಾರವಾಗಿ ಹಲವು ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ಕಡತಗಳು ಕಚೇರಿಯಿಂದ ಕಚೇರಿಗೆ ಹೋಗುತ್ತಿದೆಯೇ ವಿನಾ, ಆದೇಶವಾಗುತ್ತಿಲ್ಲ’ ಎಂದು ಮತ್ತೊಬ್ಬ ಡಿಆರ್‌ಎಫ್‌ ಅಸಮಾಧಾನ ಹೊರಹಾಕಿದರು.  

ವೇತನ ಪರಿಷ್ಕೃಕರಿಸಿದರೆ ಸರ್ಕಾರಕ್ಕೆ ವಾರ್ಷಿಕವಾಗಿ ₹30ಕೋಟಿಯಿಂದ ₹40 ಕೋಟಿ ಹೆಚ್ಚು ಹಣ ಬೇಕಾಗುತ್ತದೆ ಎಂದು ಇಲಾಖೆ ಅಂದಾಜಿಸಿದೆ. 

ಮುಷ್ಕರದ ಎಚ್ಚರಿಕೆ: ‘ಈ ಹಿಂದೆ ಹಲವು ಬಾರಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆಯ ಹಾದಿ ಹಿಡಿದಿರಲಿಲ್ಲ. ವೇತನ ತಾರತಮ್ಯವನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ, ಮುಷ್ಕರದ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ’ ಎಂದು ಅವರು ಎಚ್ಚರಿಸಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌ ಅವರು, ‘ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಹಣಕಾಸು ಇಲಾಖೆಯೂ ಸಮ್ಮತಿಸಬೇಕಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ನೇತೃತ್ವದ ಸಮಿತಿ ಈ ಬೇಡಿಕೆಯನ್ನು ಪರಿಶೀಲಿಸುತ್ತಿದೆ. ಡಿಆರ್‌ಎಫ್‌ಒಗಳ ವೇತನ ಪರಿಷ್ಕರಣೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಮಿತಿ ತಿಳಿಸಿದೆ. ಒಂದೇ ವೃಂದದ ಬೇರೆ ಬೇರೆ ಇಲಾಖೆಗಳಿಗೆ ಅಧಿಕಾರಿಗಳಿಗೆ ಭಿನ್ನ ವೇತನ ಶ್ರೇಣಿ ಇರಲು ಸಾಧ್ಯವಿಲ್ಲ. ಹಾಗಾಗಿ, ಡಿಆರ್‌ಎಫ್‌ಒಗಳ ಬೇಡಿಕೆಯೂ ಈಡೇರಲಿದೆ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು