ಶನಿವಾರ, ಫೆಬ್ರವರಿ 22, 2020
19 °C
ಸಂವಿಧಾನ ಓದು ಕಾರ್ಯಕ್ರಮ

ಸಂವಿಧಾನವೇ ಜೀವನ ಆದರ್ಶವಾಗಲಿ: ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಯಾವುದೇ ಸಂವಿಧಾನವು ಸಾಮಾಜಿಕ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಜಾರಿಗೊಂಡರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಆಗ ಮಾತ್ರ ಅದರ ಆಶಯ ಈಡೇರಿದಂತಾಗುತ್ತದೆ’ ಎಂದು ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಪ್ರತಿಪಾದಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ನಗರದ ಕೇಂದ್ರದ ನಿಜಗುಣ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಓದು ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಯಾವುದೇ ಸಂವಿಧಾನ ಉತ್ತಮ ವಿಚಾರಗಳಿಂದ ಮಾತ್ರ ಶ್ರೇಷ್ಠವಾಗುವುದಿಲ್ಲ. ಅದರಲ್ಲಿನ ಅಂಶಗಳು ವ್ಯವಸ್ಥಿತ ರೀತಿಯಲ್ಲಿ ಜಾರಿಗೆ ಬರಬೇಕು. ಇದಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯಗಳನ್ನು ತಪ್ಪದೇ ಪಾಲಿಸಬೇಕು. ಸಂವಿಧಾನವನ್ನೇ ಜೀವನದ ಆದರ್ಶವಾಗಿ ಅಳವಡಿಸಿಕೊಂಡು ಬದುಕಬೇಕು’ ಎಂದರು.

‘ಭಾರರದ ಸಂವಿಧಾನ ದೇಶದ ಅಖಂಡತೆಯನ್ನು ಎತ್ತಿ ಹಿಡಿಯಲು ರಚಿತವಾಗಿದೆ. ಆದರೆ, ಅವುಗಳ ಪಾಲನೆ ಆಗಬೇಕಿದೆ. ಸಾಮಾಜಿಕ ತಾರತಮ್ಯ ಹಾಗೂ ಗಡಿಗಳ ವೈಷಮ್ಯ ತೊರೆದು ದೇಶ ಮೊದಲು ಎಂಬ ದೃಷ್ಟಿ ಎಲ್ಲರಲ್ಲೂ ಮೂಡಬೇಕು’ ಎಂದು ತಿಳಿಸಿದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ಮಾತನಾಡಿ, ‘ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳೇ ಕಳೆದರೂ, ಪೂರ್ಣ ಪ್ರಮಾಣದ ಸಾಮಾಜಿಕ ಸಮಾನತೆ ಸಾಧಿಸಲು ಇನ್ನೂ ಬಹಳ ದೂರ ಕ್ರಮಿಸಬೇಕಿದೆ. ಈ ಅಸಮಾನತೆ, ವೈಮನಸ್ಸುಗಳನ್ನು ತಳಮಟ್ಟದಿಂದ ನಿವಾರಿಸುವಲ್ಲಿ ಯುವ ಜನರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ವಿಚಾರಗಳು ದಾರಿ ದೀಪವಾಗಲಿವೆ’ ಎಂದರು. 

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಮೂರ್ತಿ ಹನೂರು ಮಾತನಾಡಿ, ‘ಸಮಾಜದಲ್ಲಿರುವ ತಾರತಮ್ಯಗಳನ್ನು ಹತ್ತಿಕ್ಕುವ ಉದ್ದೇಶದಿಂದ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದರು. ಸಂವಿಧಾನದ ಪ್ರತೀ ಭಾಗದಲ್ಲೂ ಮನುಕುಲದ ಒಳಿತಿನ ಆಶಯವನ್ನು ನಾವು ಕಾಣಬಹುದಾಗಿದ್ದು, ಅದು ಎಲ್ಲರಿಗೂ ಮಾದರಿಯಾಗಬೇಕು' ಎಂದು ಹೇಳಿದರು.

ಇದೇ ವೇಳೆ, ಕೃಷ್ಣಮೂರ್ತಿ ಚಮರಂ ಅವರು ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಬರೆದಿರುವ ‘ಭಾರತ ಭಾಗ್ಯ ವಿದಾತ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಕೇಂದ್ರದ ಉಪನ್ಯಾಸಕರಾದ ಡಾ.ಸುನಿಲ್ ಕುಮಾರ್, ಡಾ.ಸೌಮ್ಯಾ, ಡಾ.ನಿಂಗರಾಜು, ಮಲ್ಲಿಕಾರ್ಜುನಸ್ವಾಮಿ, ಸವಿತಾ, ಮಹದೇವಮೂರ್ತಿ, ಡಾ.ಪಿ.ಮಹೇಶ್ ಬಾಬು, ಬಿ.ಗುರುರಾಜು, ಎಂ.ಎಸ್. ಬಸವಣ್ಣ ಇದ್ದರು.

‘ಒಂದು ವರ್ಗಕ್ಕೆ ಸೀಮಿತ ಬೇಡ’

‘ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶಾಲ ವ್ಯಕ್ತಿತ್ವದವರಾಗಿದ್ದು, ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವ ಪರಿಪಾಠ ನಿಲ್ಲಬೇಕು. ದೇಶದಲ್ಲಿ ಮಹತ್ವದ ಬದಲಾವಣೆಯಾಗಬೇಕಾದರೆ ಅಂಬೇಡ್ಕರ್‌ ಅವರ ಉದಾತ್ತ ವಿಚಾರಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಬೇಕು’ ಎಂದು ಕೃಷ್ಣಮೂರ್ತಿ ಚಮರಂ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು