ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Last Updated 25 ಸೆಪ್ಟೆಂಬರ್ 2020, 15:23 IST
ಅಕ್ಷರ ಗಾತ್ರ

ಚಾಮರಾಜನಗರ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಡೀವಿಯೇಷನ್‌ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿರುವ ಲಾರಿ ನಿಲ್ದಾಣದಲ್ಲಿ ಸೇರಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಈ ದುಷ್ಟ ನೀತಿಯು ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ ಇನ್ನಷ್ಟು ಬಡತನಕ್ಕೆ ತಳ್ಳುವ ಹಾಗೂ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಖರೀದಿಸಲು ಅನುವುಮಾಡಿಕೊಡುತ್ತದೆ. ಎರಡೂ ಕಡೆಗಳಲ್ಲಿರುವ ಬಿಜೆಪಿ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಹೊರಟಿದೆ. ಗ್ರಾಮೀಣ ಪ್ರದೇಶದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಬಿಜೆಪಿ ರೈತರನ್ನು ಜೀತದಾಳುಗಳನ್ನಾಗಿ ಮಾಡಲು ಪಣತೊಟ್ಟಿದೆ’ ಎಂದು ಪ್ರತಿಭಟನನಿರತರು ಆರೋಪಿಸಿದರು.

ಹೊಸ ತಿದ್ದುಪಡಿ ಕಾಯ್ದೆಯಲ್ಲಿಕೃಷಿಭೂಮಿಯನ್ನು ಖರೀದಿಸುವ ಮಿತಿಯನ್ನು ತೆಗೆದು ಹಾಕಿರುವುದರಿಂದ ಕೃಷಿ ಜಮೀನುಗಳು ದೊಡ್ಡ ಜಮೀನುದಾರ ಹಾಗೂ ಶ್ರೀಮಂತರ ಪಾಲಾಗುವುದು ಖಚಿತ. ಸಾಲದ ಸುಳಿಯಿಂದ ತತ್ತರಿಸಿರುವ ಬಡ ರೈತರು ತಮ್ಮ ಜಮೀನುಗಳನ್ನು ಬಲಾಢ್ಯರಿಗೆ ಮಾರುವುದರಿಂದ ರೈತರು ಕೃಷಿಕ್ಷೇತ್ರವನ್ನು ತ್ಯಜಿಸುವುದರೊಂದಿಗೆ ಜೀತದಾಳುಗಳು ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದರು.

‘ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವುದರ ಜೊತೆಗೆ ವಿದ್ಯುತ್ ಕಾಯ್ದೆಗೂ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ, ರೈತರ ಗಾಯದ ಮೇಲೆ ಬರೆ ಎಳೆದಿದೆ. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿ ಖಾಸಗಿ ಉದ್ಯಮಿಗಳಿಗೆ ಕೃಷಿ ಉತ್ಪನ್ನ ಮಂಡಿ ಮತ್ತು ಮಾರುಕಟ್ಟೆಗಳಲ್ಲಿ ಹಿಡಿತ ಸಾಧಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕಾಯ್ದೆಯನ್ನು ಜಾರಿಗೆ ತಂದಿದೆ. ದೇಶದಾದ್ಯಂತ ರೈತ ಸಮುದಾಯದಿಂದ ತೀವ್ರ ಆಕ್ಷೇಪಗಳು ಹಾಗೂ ಪ್ರತಿಭಟನೆಗಳು ವ್ಯಕ್ತವಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಸೂದೆಯನ್ನು ಅಂಗೀಕಾರಗೊಳಿಸಿರುವುದು ಅವುಗಳ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎತ್ತಿ ತೋರಿಸಿದೆ’ ಎಂದು ಆರೋಪಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ,ಉಪಾಧ್ಯಕ್ಷ ಸಮಿಉಲ್ಲಾ ಖಾನ್,ಪ್ರಧಾನ ಕಾರ್ಯದರ್ಶಿ ಮಹೇಶ್ ಗಾಳಿಪುರ,ಕಾರ್ಯದರ್ಶಿ ಜಬೀನೂರ್,ನಗರಸಭಾ ಸದಸ್ಯ ಮೊಹಮ್ಮದ್ ಅಮೀಖ್, ಜಿಲ್ಲಾ ಸಮಿತಿ ಸದಸ್ಯ ಸಿ.ಎಸ್.ಸೈಯದ್ ಆರೀಫ್,ಇಸ್ರಾರ್ ಪಾಷ ಹಾಗೂ ಕಿಜರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT