ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿಯ ಒಂದು ಭಾಗ ಮುಚ್ಚುವ ಕೋರ್ಟ್ ಆದೇಶಕ್ಕೆ ಎಸ್‌ಡಿಪಿಐ ಖಂಡನೆ

Last Updated 17 ಮೇ 2022, 15:57 IST
ಅಕ್ಷರ ಗಾತ್ರ

ಚಾಮರಾಜನಗರ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚುವ ಸ್ಥಳೀಯ ನ್ಯಾಯಾಲಯದ ಆದೇಶವು 1991ರ ಆರಾಧನಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಎಸ್‌ಡಿಪಿಐ, ಕಾಯ್ದೆಯನ್ನು ಜಾರಿಗೊಳಿಸಲು ಆಗ್ರಹಿಸಿ ನಗರದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿತು.

ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌ ಅವರು ಮಾತನಾಡಿ, ‘ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪವು 1947ರಆಗಸ್ಟ್ 15ರಂದು ಇದ್ದಂತೆಯೇ ಇರಬೇಕು ಹಾಗೂ ಯಾವುದೇ ಧಾರ್ಮಿಕ ಪಂಥದ ಪವಿತ್ರ ಸ್ಥಳವನ್ನು ಯಾರೂ ಇನ್ನೊಂದು ಪಂಗಡ ಅಥವಾ ವಿಭಾಗಕ್ಕೆ ಪರಿವರ್ತಿಸಬಾರದು ಎಂದು 1991ರ ಆರಾಧನಾ ಸ್ಥಳಗಳ ಕಾಯ್ದೆ ಪ್ರತಿಪಾದಿಸುತ್ತದೆ. ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ವಿವಾದ ಹೊಸದೇನಲ್ಲ. ಆದರೆ ಇತರ ಧಾರ್ಮಿಕ ವಲಯಗಳು, ವಿಶೇಷವಾಗಿ ಮುಸ್ಲಿಮರು ನಿರ್ಮಿಸಿದ ಮತ್ತು ಅವರ ಒಡೆತನದಲ್ಲಿರುವ ಧಾರ್ಮಿಕ ಆರಾಧನಾ ಸ್ಥಳಗಳು ಮತ್ತು ಐತಿಹಾಸಿಕ ಸ್ಮಾರಕಗಳ ಮಾಲಿಕತ್ವವನ್ನು ನಾಶಪಡಿಸುವುದು ಅಥವಾ ಕಸಿದುಕೊಳ್ಳುವುದು ಆರ್.ಎಸ್.ಎಸ್. ಕಾರ್ಯಸೂಚಿಯ ಒಂದು ಭಾಗವಾಗಿದೆ’ ಎಂದು ಆರೋಪಿಸಿದರು.

‘ಬಾಬರಿ ಮಸೀದಿ ನೆಲಸಮಗೊಳಿಸಿದ ಮಾದರಿಯನ್ನೇ ಜ್ಞಾನವಾಪಿ ಮಸೀದಿಯ ವಿಷಯದಲ್ಲೂ ಅನುಸರಿಸಲಾಗುತ್ತಿದೆ. ವಿದೇಶಿ ಧರ್ಮಗಳು ಮತ್ತು ಅವುಗಳ ಸಂಕೇತಗಳನ್ನು ನಾಶಪಡಿಸುವುದು ಮನುವಾದಿ ಹಿಂದುತ್ವ ರಾಷ್ಟ್ರದೆಡೆಗಿನ ಪ್ರಯಾಣದ ಪ್ರಮುಖ ಉದ್ದೇಶ. ದೇಶದಲ್ಲಿ ಮಸೀದಿ ಧ್ವಂಸ, ದ್ವೇಷ ಬಿತ್ತನೆ ಮತ್ತು ಶಾಂತಿ ಕದಡುವ ಕೃತ್ಯಗಳನ್ನು ನಮ್ಮ ಪಕ್ಷವು ದೇಶದ ಜಾತ್ಯತೀತ ಜನರ ಬೆಂಬಲದೊಂದಿಗೆ ಸೋಲಿಸಲಿದೆ’ ಎಂದರು.

‘ಬಲಪಂಥೀಯ ಹಿಂದುತ್ವ ಫ್ಯಾಸಿಸ್ಟರು 2014ರಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಸಂವಿಧಾನವನ್ನು ಮೂಲೆಗುಂಪಾಗಿಸಿದ್ದಾರೆ. ದೇಶದ ನಾಗರಿಕರು ಶಾಂತಿಯುತ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಘ ಪರಿವಾರ ದೇಶವನ್ನು ಮತ್ತಷ್ಟು ಹಾಳುಮಾಡುವುದನ್ನು ತಡೆಯಲು ಜಾತ್ಯತೀತ ಜನರು ಒಗ್ಗಟ್ಟಾಗಿ ಕೈಜೋಡಿಸಬೇಕು’ ಎಂದು ಅಬ್ರಾರ್‌ ಅಹಮದ್‌ ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಗರಸಭಾ ಸದಸ್ಯ ಮಹೇಶ್, ಜಿಲ್ಲಾ ಕಾರ್ಯದರ್ಶಿ ಜಬೀ ನೂರ್, ಜಿಲ್ಲಾ ಖಜಾಂಚಿ ಸೈಯದ್ ನಯಾಜ್, ನಗರಸಭಾ ಸದಸ್ಯರಾದ ಮೊಹಮ್ಮದ್ ಅಮೀಕ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ರಾರ್, ಜಾಕೀರ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT