ಚಾಮರಾಜನಗರ:ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ತಕ್ಷಣವೇ ಹಣ ಪಾವತಿಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.
ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಜಿಲ್ಲಾ ಸಮಿತಿ ಪದಾಧಿಕಾರಿಗಳು, ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
‘ಪಿಂಚಣಿದಾರರಿಗೆ ಏಳೆಂಟು ತಿಂಗಳುಗಳಿಂದ ಹಣ ಬಂದಿಲ್ಲ. ಇದರಿಂದ ಅವರ ಜೀವನ ಅಸ್ತವ್ಯಸ್ತವಾಗಿದೆ. ಹಣ ಪಡೆಯುವುದಕ್ಕಾಗಿ ನಾಡ ಕಚೇರಿ, ತಾಲ್ಲೂಕು ಕಚೇರಿ ಎಂದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಬೇಕಾಗಿದೆ. ತಾಂತ್ರಿಕ ಕಾರಣಗಳಿಂದ ದೂರದ ಊರುಗಳಿಂದ ಬಂದ ಫಲಾನುಭವಿಗಳ ಕೆಲಸ ಆಗುತ್ತಿಲ್ಲ. ಮನೆಯಿಂದ ಕಚೇರಿಗೆ ಓಡಾಡಲು ಸಾಲ ಮಾಡಿಕೊಂಡಿರುವವರು ಇದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಪಿಂಚಣಿ ಹಣ ದೊರೆಯದೇ ಇರುವುದರಿಂದ ಅವರ ಬದುಕು ಇನ್ನಷ್ಟು ಕಷ್ಟವಾಗಿದೆ’ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.ಈಗಾಗಲೇ ಪಿಂಚಣಿ ಪಾವತಿಸುವ ಸಂಬಂಧ ಆದೇಶ ಪತ್ರ ನೀಡಿ ಎರಡು ಮೂರು ವರ್ಷಗಳಾಗಿದ್ದರೂ ಒಂದು ಬಾರಿಯೂ ಪಿಂಚಣಿ ನೀಡದಿರುವ ಪ್ರಕರಣಗಳೂ ನಮ್ಮ ಜಿಲ್ಲೆಯಲ್ಲಿ ಕಂಡು ಬಂದಿವೆ. ಹಾಗಾಗಿ, ಸರ್ಕಾರ ತಕ್ಷಣವೇ ಬಾಕಿ ಇರುವ ಪಿಂಚಣಿ ಹಣ ಪಾವತಿಸಬೇಕು. ಜೊತೆಗೆ ನೂತನವಾಗಿ ಪಿಂಚಣಿ ಆದೇಶ ಪತ್ರ ನೀಡಿರುವ ಪಲಾನುಭವಿಗಳಿಗೂ ಆದೇಶ ಪತ್ರ ನೀಡಿದಲ್ಲಿಂದ ಇಲ್ಲಿಯವರೆಗೂ ಒಂದೇ ಕಂತಿನಲ್ಲಿ ಹಣ ನೀಡಬೇಕು’ ಎಂದು ಆಗ್ರಹಿಸಲಾಗಿದೆ.
ಎಸ್‌ಡಿಪಿಐ ಜಿಲ್ಲಾ ಸಮಿತಿ ಅಧ್ಯಕ್ಷ ಖಲೀಲ್ ಉಲ್ಲಾ.ಎನ್ , ಉಪಾಧ್ಯಕ್ಷ ಸಮಿಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಮಹೇಶ್.ಎಂ ಕಾರ್ಯದರ್ಶಿ ಜಬೀನೂರ್, ನಗರಸಭಾ ಸದಸ್ಯರಾದ ಮೊಹಮ್ಮದ್ ಅಮೀಖ್, ಮುಖಂಡರಾದ ಇಸ್ರಾರ್ ಪಾಷ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.