ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ ಎರಡನೇ ಹಂತ: ಬಿರುಸಿನ, ಶಾಂತಿಯುತ ಮತದಾನ

Last Updated 27 ಡಿಸೆಂಬರ್ 2020, 16:39 IST
ಅಕ್ಷರ ಗಾತ್ರ

ಯಳಂದೂರು/ಕೊಳ್ಳೇಗಾಲ/ಹನೂರು: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡು ಕಡೆ ಗೊಂದಲ ಉಂಟಾಗಿದ್ದು ಬಿಟ್ಟರೆ ಉಳಿದ ಎಲ್ಲ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಶೇ 82.88ರಷ್ಟು ಮತದಾನವಾಗಿದೆ.

ಯಳಂದೂರು ತಾಲ್ಲೂಕಿನಲ್ಲಿ ಶೇ 85.03, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 83.04 ಹಾಗೂ ಹನೂರು ತಾಲ್ಲೂಕಿನಲ್ಲಿ ಶೇ 81.79ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2,448 ಅಭ್ಯರ್ಥಿಗಳ ಭವಿಷ್ಯ ಈಗ ಮತಯಂತ್ರದಲ್ಲಿ ಭದ್ರವಾಗಿದೆ.

‘ಇದು ಪ್ರಾಥಮಿಕ ಅಂದಾಜಷ್ಟೇ. ಮತದಾನದ ಅಂತಿಮ ಅಂಕಿ ಅಂಶಗಳು ಸಿಗುವುದು ಸ್ವಲ್ಪ ವಿಳಂಬವಾಗಬಹುದು. ಇನ್ನೂ ಶೇ 2ರಿಂದ ಶೇ 3ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ವಾರ್ಡ್‌–1ರಲ್ಲಿ ನಾಲ್ಕು ಮತಕ್ಕೆ ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ ಕೆಲವು ಗಂಟೆಗಳ ಕಾಲ ಮತದಾನದಿಂದ ದೂರ ಉಳಿದುದು ಹಾಗೂ ಹನೂರು ತಾಲ್ಲೂಕಿನ ಪಡಸಲನತ್ತ ಗ್ರಾಮದಲ್ಲಿ ಜನ ಮತದಾನ ಬಹಿಷ್ಕರಿಸಿದ್ದು ಬಿಟ್ಟರೆ, ಬೇರೆಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲ ಕಡೆ ಬಿರುಸಿನಿಂದಲೇ ಮತದಾನ ನಡೆದಿದೆ. ಪಡಸಲನತ್ತ ಗ್ರಾಮದಲ್ಲಿ ಇನ್ನೊಂದು ದಿನ ಉಪಚುನಾವಣೆ ನಡೆಯಲಿದೆ.

ಮತದಾರರಲ್ಲಿ ಉತ್ಸಾಹ:ಯಳಂದೂರು ತಾಲ್ಲೂಕಿನ 12 ಪಂಚಾಯಿತಿಗಳ 174 ಸದಸ್ಯ ಸ್ಥಾನ, ಕೊಳ್ಳೇಗಾಲ ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳ 308 ಸ್ಥಾನಗಳಿಗೆ ಹಾಗೂ ತಾಲ್ಲೂಕಿನ 24 ಗ್ರಾಮಪಂಚಾಯಿತಿಗಳ 408 ಸ್ಥಾನಗಳಿಗೆ (ಪಡಸಲನತ್ತದ ಒಂದು ಸ್ಥಾನವನ್ನು ಬಿಟ್ಟು) ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಅವಧಿ ಮೀರಿದ ನಂತರವೂ ಮತದಾರರು ಹಕ್ಕು ಚಲಾಯಿಸಿದರು.

ಚಳಿ ಹೆಚ್ಚಾಗಿದ್ದರಿಂದ ಬೆಳಿಗ್ಗೆ ಮತಗಟ್ಟೆಗಳತ್ತ ಬಂದ ಜನರ ಸಂಖ್ಯೆ ಕಡಿಮೆ ಇತ್ತು. ಕೂಲಿ ಕೆಲಸ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಹೊರಗಡೆ ಹೋಗಬೇಕಿದ್ದವರು ಬೆಳಿಗ್ಗೆಯೇ ಹಕ್ಕನ್ನು ಚಲಾಯಿಸಿದರು. ಮೊದಲ ಎರಡು ಗಂಟೆ ಅವಧಿಯಲ್ಲಿ ಮೂರು ತಾಲ್ಲೂಕುಗಳಲ್ಲಿ ಶೇ 9.95ರಷ್ಟು ಮತದಾನವಾಯಿತು. 9ರಿಂದ 11 ಗಂಟೆಯ ನಡುವಿನಲ್ಲಿ ಸ್ವಲ್ಪ ವೇಗ ಪಡೆಯಿತು. ಶೇ 27.04ರಷ್ಟು ಮಂದಿ ಮತ ಚಲಾಯಿಸಿದ್ದರು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಈ ಸಂಖ್ಯೆ ಶೇ 46.84 ಹಾಗೂ 3 ಗಂಟೆಯ ವೇಳೆ ಶೇ 67.49ರಷ್ಟು ಮತದಾನವಾಯಿತು. ಐದು ಗಂಟೆಯ ಅಂಕಿ ಅಂಶಗಳ ಪ್ರಕಾರ82.88ರಷ್ಟು ಮಂದಿ ಮತ ಚಲಾಯಿಸಿದರು.

ಯುವಕರು, ಯುವತಿಯರು, ವೃದ್ಧರು ಸೇರಿದಂತೆ ಎಲ್ಲರೂ ಮತದಾನದಲ್ಲಿ ಉತ್ಸಾಹದಿಂದಲೇ ಭಾಗವಹಿಸಿದರು. ಸಾವಿರಾರು ಮಂದಿ ದೂರದ ಊರುಗಳಿಂದ ಬಂದು ಮತ ಚಲಾಯಿಸಿದರು.

‘ಮತದಾನ ನಮ್ಮ ಹಕ್ಕು. ಅದನ್ನು ಚಲಾಯಿಸುವುದಕ್ಕಾಗಿ ನಾನು ಬೆಂಗಳೂರಿನಿಂದ ಬಂದಿದ್ದೇನೆ’ ಎಂದು ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಪವಿತ್ರ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮತಗಟ್ಟೆಗಳ ಬಳಿ ಇದ್ದ ಅಭ್ಯರ್ಥಿಗಳು, ಮತದಾರರಿಗೆ ಕೈ ಮುಗಿದು ಓಲೈಸಲು ಕೊನೆಯ ಪ್ರಯತ್ನ ಮಾಡಿದರು. ಪಕ್ಷಗಳ ಮುಖಂಡರು, ಬಂಧುಗಳ ಮೂಲಕವೂ ಮತದಾರರನ್ನು ತಲುಪಲು ಯತ್ನಿಸಿದರು.

ಕೋವಿಡ್‌ ನಿಯಮ ಪಾಲನೆ

ಮತಗಟ್ಟೆಗಳಲ್ಲಿ ಮತದಾನ ಮಾಡಲು ಬಂದ ಪ್ರತಿಯೊಬ್ಬರನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಹಾಗೂ ಸ್ಯಾನಿಟೈಸರ್ ನೀಡುತ್ತಿದ್ದರು. ವೃದ್ಧರು, ಅಂಗವಿಕಲರು ಮತದಾನ ಮಾಡಲು ಆಯಾ ಗ್ರಾಮಗಳ ಯುವಕರು ಸಹಾಯ ಮಾಡುತ್ತಿದ್ದುದು ಕಂಡು ಬಂತು.

ಅಂತರ ಮರೆತರು: ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ನಿಯಮ ಎಲ್ಲ ಕಡೆಯೂ ಪಾಲನೆಯಾಗಲಿಲ್ಲ. ಮತದಾರರುಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮತದಾನ ಮಾಡುವುದಕ್ಕೆ ಬರುತ್ತಿದ್ದರು. ಸರತಿ ಸಾಲಿನಲ್ಲೂ ಹತ್ತಿರ ಹತ್ತಿರ ನಿಂತುಕೊಂಡಿದ್ದರು.

ಏಳು ಕೋವಿಡ್ ರೋಗಿಗಳಿಂದ ಮತದಾನ

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಐವರು ಮತ್ತು ಹನೂರು ತಾಲೂಕಿನಲ್ಲಿ ಇಬ್ಬರು ಸೇರಿದಂತೆ ಏಳು ಮಂದಿ ಕೋವಿಡ್ ರೋಗಿಗಳು ಮಂಗಳವಾರ ತಮ್ಮ ಹಕ್ಕು ಚಲಾಯಿಸಿದರು.

ಮೂರೂ ತಾಲ್ಲೂಕುಗಳಲ್ಲಿ 28 ಮಂದಿಯನ್ನು ಗುರುತಿಸಲಾಗಿತ್ತು. ಸೋಂಕಿತರಿಗಾಗಿ ಮತ ಚಲಾಯಿಸಲುಸಂಜೆ 4 ರಿಂದ 5 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿತ್ತು.

ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ, ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ನೆರವಿನೊಂದಿಗೆ ಇತರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸೋಂಕಿತರಿಗೆ ಮತದಾನ ಮಾಡಲು ಅನುವು ಮಾಡಿಕೊಡಲಾಯಿತು.

ಹನೂರು ತಾಲ್ಲೂಕಿನ ಮರಿಯಮಂಮದುವೆಯ ದಿನವೇ ಮತದಾನ ಮಾಡಿದ ವರಗಲದ ಅರುಣದೇವಪುರ್ ಪುಷ್ಪಪುರ ಅವರು ತಮ್ಮ ಮದುವೆ ದಿನವೇ ಮತದಾನ ಮಾಡಿ ಗಮನ ಸೆಳೆದರು.

ಮೈಸೂರಿನ ತೆರೆಸಿಯನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಭಾನುವಾರ ಮದುವೆಯ ಎಲ್ಲ ಶಾಸ್ತ್ರ ಸಂಪ್ರದಾಯ ಮುಗಿದ ಬಳಿಕ ಮದುವೆಯ ಉಡುಗೆಯಲ್ಲಿಯೇಗ್ರಾಮದ ಮತಗಟ್ಟೆ ಸಂಖ್ಯೆ 25ಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಶಾಸಕರಿಂದ ಮತದಾನ

ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ನಿವಾಸಿ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉಪ್ಪಿನಮೋಳೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಹನೂರು ಶಾಸಕ ಆರ್‌.ನರೇಂದ್ರ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ತಮ್ಮ ಸ್ವಗ್ರಾಮ ದೊಡ್ಡಿಂದುವಾಡಿಯ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ಇವರಲ್ಲದೇ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಊರುಗಳಲ್ಲಿ ಮತದಾನ ಮಾಡಿದರು.

ಬಾಡೂಟ ಜೋರು

ಮತದಾರರಿಗೆ ಕೆಲವು ಅಭ್ಯರ್ಥಿಗಳು ಬಾಡೂಟದ ವ್ಯವಸ್ಥೆ ಮಾಡಿದ್ದರು. ಮತದಾನ ಮಾಡಿಕೊಂಡು ಬಂದವರಿಗೆ ಬಿರಿಯಾನಿ ಇದ್ದ ಪೊಟ್ಟಣ ಹಾಗೂ ಮದ್ಯದ ಬಾಟಲಿ ಸರಬರಾಜು ನಡೆಯಿತು.ಕೆಲವರು ಜಮೀನುಗಳಲ್ಲಿ ವಿಶ್ರಾಂತಿ ಪಡೆದು ಬಾಡೂಟ, ಮಧ್ಯ ಸೇವನೆ ಮಾಡುತ್ತಿದ್ದರು. ಮದ್ಯದ ಅಂಗಡಿಗಳು ಬಂದ್‌ ಆಗಿದ್ದರೂ, ಗ್ರಾಮೀಣ ಭಾಗಗಳಲ್ಲಿ ನಶೆಯಲ್ಲಿ ತೂರಾಡಿಕೊಂಡಿದ್ದವರ ಸಂಖ್ಯೆ ಕಡಿಮೆ ಇರಲಿಲ್ಲ.

ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ಮೂರು ತಾಲ್ಲೂಕುಗಳಲ್ಲಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯ ಪರಿಶೀಲನೆ ನಡೆಸಿದರು.

ಸಿದ್ದಯ್ಯನಪುರದಲ್ಲಿ ಗೊಂದಲ ಉಂಟಾದಾಗ ಸ್ವತಃ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಅಭ್ಯರ್ಥಿಗಳು ಹಾಗೂ ಗ್ರಾಮಸ್ಥರನ್ನು ಮನವೊಲಿಸಿದರು. ಪೊಲೀಸ್‌ ವರಿಷ್ಠಾಧಿಕಾರಿ ಅವರು ಹಲವು ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT