ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರ

31 ಶಾಲೆಗಳ ಆವರಣದಲ್ಲೇ ಅಂಗನವಾಡಿ ಕೇಂದ್ರ, ಮಕ್ಕಳನ್ನು ಆಕರ್ಷಿಸುತ್ತಿದೆ ಚಿತ್ರ ಕಲೆ
Last Updated 28 ಜೂನ್ 2019, 19:45 IST
ಅಕ್ಷರ ಗಾತ್ರ

ಹನೂರು: ಗೋಡೆಯ ತುಂಬೆಲ್ಲ ಹಸಿರು ಬಣ್ಣದ ಚಿತ್ತಾರ. ಹುಲಿ, ಆನೆ, ಜಿಂಕೆ ಮುಂತಾದ ಪ್ರಾಣಿಗಳು ಕಾನನದೊಳಗೆ ಅಡ್ಡಾಡುವಂತೆ ಭಾಸವಾಗುವ ಚಿತ್ರಗಳು...

ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಗೋಡೆಗಳಲ್ಲಿ ಕಂಡುಬರುವ ಚಿತ್ರಣ ಇದು.ಪೂರ್ವ ಪ್ರಾಥಮಿಕ ಹಂತದಿಂದಲೇ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಸಲುವಾಗಿ ಈ ಬಾರಿ ಪ್ರಾಥಮಿಕ ಶಾಲೆ ಆವರಣದಲ್ಲೇ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ.

ಹನೂರು ಶೈಕ್ಷಣಿಕ ವಲಯದ 31 ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆದು ಕಲಿಸಲಾಗುತ್ತಿದೆ. ಶಾಲಾ ಆವರಣದೊಳಗೆ ಅಂಗನವಾಡಿ ತೆರೆಯಬೇಕು ಎಂಬುದಾಗಿ ಆದೇಶ ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

31 ಶಾಲೆಗಳಲ್ಲಿ ತಲಾ ಒಂದು ಕೊಠಡಿಗೆ ಪ್ರಾಣಿ, ಪಕ್ಷಿ ಮತ್ತು ಪರಿಸರ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಚಿತ್ತಾಕರ್ಷಕವಾಗಿ ಬಣ್ಣ ಬಳಿಸಿ ಪರಿಸರ ಸ್ನೇಹಿ ಕೊಠಡಿಯನ್ನಾಗಿ ರೂಪಿಸಲಾಗಿದೆ. ಈ ಹಿಂದೆ ಗ್ರಾಮದ ಒಳಗಿದ್ದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಈಗ ಪ್ರಾಥಮಿಕ ಶಾಲಾ ಆವರಣದಲ್ಲೇ ಕಾರ್ಯನಿರ್ವಹಿಸಲಿದ್ದಾರೆ.

‘ಈ ಕಾರ್ಯಕ್ಕೆ ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಆವರಣದಲ್ಲೇ ಇರುವ ಅಂಗನವಾಡಿ ಕೇಂದ್ರಕ್ಕೆ ಪ್ರತಿದಿನ ಹೋಗುವುದರಿಂದ ಮಕ್ಕಳು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ. ಮುಂದಿನ ವರ್ಷದಿಂದ ಮತ್ತಷ್ಟು ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಸಮನ್ವಯ ಸಂಪ‍ನ್ಮೂಲ ವ್ಯಕ್ತಿ (ಸಿಆರ್‌ಪಿ) ದಿನೇಶ್.

‘ಹನೂರು ಶೈಕ್ಷಣಿಕ ವಲಯ ಗುಡ್ಡಗಾಡು ಪ್ರದೇಶದಿಂದಲೇ ಆವೃತವಾಗಿರುವುದರಿಂದ ಈ ಬಾರಿ ಗ್ರಾಮೀಣ ಭಾಗದ ಹಾಗೂ ಅರಣ್ಯದಂಚಿನ ಗ್ರಾಮಗಳಿಗೆ ಆದ್ಯತೆ ನೀಡಿ ಅಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಶಾಲೆಯೊಳಗೆ ಅಂಗನವಾಡಿ ತೆರೆಯುವುದರಿಂದ ಮಕ್ಕಳ ಸಂಖ್ಯೆ ಕ್ಷೀಣಿಸಬಹುದು ಎಂಬ ಆತಂಕವಿತ್ತು. ಆದರೆ, 15 ದಿನಗಳಿಂದ ಎಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ’ ಎನ್ನುತ್ತಾರೆ.

‘ಮುಂದಿನ ವರ್ಷ ಮತ್ತಷ್ಟು ಕೇಂದ್ರಗಳು’
‘ಪ್ರತಿ ಅಂಗನವಾಡಿ ಕೇಂದ್ರ ತಲಾ ₹ 10 ಸಾವಿರ ಅನುದಾನ ನೀಡಲಾಗಿತ್ತು. ₹ 5,000ದಲ್ಲಿ ಮಕ್ಕಳಿಗೆ ಬೇಕಾಗುವ ಆಟಿಕೆಗಳು ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಿ ಉಳಿದ ₹ 5 ಸಾವಿರದಲ್ಲಿ ಕೊಠಡಿಗೆ ಆಕರ್ಷಕವಾಗಿ ಬಣ್ಣ ಬಳಿಸಲಾಗಿದೆ. ಇನ್ನೂ ಸಾಕಷ್ಟು ಕಡೆ ಶಾಲೆಯೊಳಗೆ ಅಂಗನವಾಡಿ ಕೇಂದ್ರ ತೆರೆಯುವಂತೆ ಮನವಿಗಳು ಬಂದಿವೆ. ಆದರೆ, ಸರ್ಕಾರ ನೀಡಿದ ಅನುದಾನಕ್ಕೆ ಅನುಗುಣವಾಗಿ ಕೇಂದ್ರಗಳನ್ನು ತೆರೆದಿದ್ದೇವೆ. ಬೇಡಿಕೆ ಇರುವ ಬಗ್ಗೆ ಇಲಾಖೆಯ ಗಮನಕ್ಕೆ ತಂದು ಮುಂದಿನ ವರ್ಷದಿಂದ ಮತ್ತಷ್ಟು ಕೇಂದ್ರಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಟಿ.ಆರ್.ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT