ಬುಧವಾರ, ಆಗಸ್ಟ್ 21, 2019
22 °C
ಸಂತೇಮರಹಳ್ಳಿ: ಗಿಲ್‌ಫ್ರೆಡ್‌ ಶಾಲೆಯಲ್ಲಿ ವಿಶಿಷ್ಟ ಪ್ರಾಜೆಕ್ಟ್‌, ಆಸಕ್ತಿಯಿಂದ ಭಾಗವಹಿಸಿದ ಮಕ್ಕಳು

ಸ್ವಾತಂತ್ರ್ಯಅರಿವು: ಮಕ್ಕಳಿಂದಲೇ ಸ್ವಪ್ರಯತ್ನ

Published:
Updated:
Prajavani

ಸಂತೇಮರಹಳ್ಳಿ: ಆಗಸ್ಟ್‌ 15 ಸಮೀಪಿಸುತ್ತಿರುವಂತೆಯೇ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಯುತ್ತಿದೆ. ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಹೇಳುವುದಕ್ಕಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂತೇಮರಹಳ್ಳಿಯ ಗಿಲ್‌ಫ್ರೆಡ್‌ ಶಾಲೆಗಳಲ್ಲಿ ಮಕ್ಕಳಿಗೆ ರಾಷ್ಟ್ರ ನಾಯಕರ ಬಗ್ಗೆ ವಿಶಿಷ್ಟವಾಗಿ ತಿಳಿಹೇಳುವ ಪ್ರಯತ್ನ ನಡೆಯಿತು. 

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ರಾಷ್ಟ್ರನಾಯಕರ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಅವರ ಬಗ್ಗೆ ವಿಸ್ತೃತ ಪ್ರಬಂಧ ರಚಿಸಿ ಸಲ್ಲಿಸಲು 6ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು (ಪ್ರಾಜೆಕ್ಟ್‌ ವರ್ಕ್‌). ಪೋಷಕರು, ಶಿಕ್ಷಕರು, ಸ್ನೇಹಿತರಿಂದ ಕೇಳಿ, ಇಂಟರ್‌ನೆಟ್‌ ಜಾಲಾಡಿದ ಮಕ್ಕಳು ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿ, ಅವುಗಳನ್ನು ದೊಡ್ಡ ಡ್ರಾಯಿಂಗ್‌ ಶೀಟ್‌ನಲ್ಲಿ ಬರೆದು, ಅವರ ಫೋಟೊ ಸಮೇತ ಶಿಕ್ಷಕರಿಗೆ ಒಪ್ಪಿಸಿದರು.  

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಜವಾಹರಲಾಲ್‌ ನೆಹರೂ, ಸುಭಾಷ್ ಚಂದ್ರಬೋಸ್, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ವಿವರಗಳನ್ನು ತಮಗೆ ಸಿಕ್ಕಿದ ಮಾಹಿತಿಗಳ ಆಧಾರಲ್ಲಿ ಮಕ್ಕಳು ಬರೆದಿದ್ದರು. 

ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಮಾಹಿತಿಗಳನ್ನು ಉಲ್ಲೇಖಿಸಲು ಮಕ್ಕಳು ಬಿಟ್ಟಿದ್ದರೆ, ಅದನ್ನು ಅವರಿಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಿದರು.

‘ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವುದರಿಂದ ರಾಷ್ಟ್ರನಾಯಕರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕೆಲಸವನ್ನು ವಿದ್ಯಾರ್ಥಿಗಳಿಗೆ ಕೊಡಲಾಗಿತ್ತು. ಅವರೇ ಮಾಹಿತಿ ಸಂಗ್ರಹಿಸುವುದರಿಂದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅವರಲ್ಲಿ ಸ್ಪಷ್ಟ ಕಲ್ಪನೆ ಬರುತ್ತದೆ. ಎಲ್ಲ ವಿದ್ಯಾರ್ಥಿಗಳು ಆಸಕ್ತಿಯಿಂದ ಹೇಳಿದ ಕೆಲಸವನ್ನು ಮಾಡಿದ್ದಾರೆ’ ಎಂದು ಶಿಕ್ಷಕಿ ಶೀಲಾ ಹೇಳಿದರು. 

‘ರಾಷ್ಟ್ರ ನಾಯಕರ ತತ್ವ ಆದರ್ಶ, ಸಿದ್ಧಾಂತಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಸಣ್ಣ ವಯಸ್ಸಿನಲ್ಲೇ ಇದನ್ನೆಲ್ಲ ಅವರು ಅರಿತರೆ ಉತ್ತಮ ನಾಗರಿಕರಾಗಬಹುದು’ ಎಂದು ಶಿಕ್ಷಕ ಮೋಹನ್‌ ಹೇಳಿದರು.

Post Comments (+)