ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಮಾದರಿ ಸರ್ಕಾರಿ ಪ್ರೌಢಶಾಲೆ

ದೊಡ್ಡಿಂದುವಾಡಿ ಗ್ರಾಮದ ಜಿ.ವಿ.ಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಸಕಲ ಸೌಕರ್ಯ
Last Updated 23 ಸೆಪ್ಟೆಂಬರ್ 2019, 9:38 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಖಾಸಗಿ ಶಾಲೆಗಳ ಭರಾಟೆಯ ನಡುವೆಯೂ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗುವಂತಹ ಶಾಲೆಯೊಂದು ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿದೆ.

ಗ್ರಾಮೀಣ ಭಾಗದ ಮಕ್ಕಳಿಗೆ 18 ವರ್ಷಗಳಿಂದ ಜ್ಞಾನಧಾರೆ ಎರೆಯುತ್ತಿರುವ ಗ್ರಾಮದ ಜಿ.ವಿ.ಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಇತರ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಭಿನ್ನವಾಗಿ ನಿಲ್ಲುತ್ತದೆ.

ಎಲ್ಲ ಸೌಕರ್ಯ:2001ರಲ್ಲಿ ಆರಂಭವಾಗಿರುವ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ 277 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಸೌಕರ್ಯಗಳೂ ಇಲ್ಲಿವೆ.ಎಸ್ಸೆಸ್ಸೆಲ್ಸಿ ಫಲಿತಾಂಶವೂ ಉತ್ತಮವಾಗಿದ್ದು, ಕಳೆದ ವರ್ಷ ಶೇ 92.8ರಷ್ಟು ಫಲಿತಾಂಶ ದಾಖಲಿಸಿದೆ.

8 ಮಂದಿ ನುರಿತ ಶಿಕ್ಷಕರು- ಶಿಕ್ಷಕಿಯರು, 8 ಕೊಠಡಿ, ಉತ್ತಮವಾದ ಗ್ರಂಥಾಲಯ, ಸುಸಜ್ಜಿತವಾದ ಕಂಪ್ಯೂಟರ್ ಪ್ರಯೋಗಾಲಯ ಹಾಗೂ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಕ್ರೀಡಾ ಕೊಠಡಿ, ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇವೆ.

ಹನೂರಿನ ಹಾಲಿ ಶಾಸಕ ಆರ್‌.ನರೇಂದ್ರ ಅವರ ತಂದೆ, ಮಾಜಿ ಸಚಿವ ದಿವಂಗತ ರಾಜೂಗೌಡ ಅವರು ಈ ಶಾಲೆಯ ನಿರ್ಮಾತೃ. ತಮ್ಮ ಸ್ವಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭಿಸಬೇಕು ಎಂಬ ಉದ್ದೇಶದಿಂದ ಎರಡೂವರೆ ಎಕರೆ ಜಮೀನು ದಾನ ಮಾಡಿ, ಮೂರು ಕೊಠಡಿಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಸದ್ಯ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಸಹಕಾರದಿಂದ ಶಾಲೆ ಚೆನ್ನಾಗಿ ನಡೆಯುತ್ತಿದೆ.

ಸಂಗೀತ ತರಗತಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಪ್ರತಿ ದಿನ 1 ಗಂಟೆ ಕಾಲ ಸಂಗೀತ ಪಾಠಗಳನ್ನು ಕಲಿಯುತ್ತಾರೆ. ಕಲೋತ್ಸವ, ಆಶುಭಾಷಣ ಸ್ಪರ್ಥೆ, ಜಾನಪದ ಗೀತೆಯಲ್ಲಿ ಮಕ್ಕಳು ರಾಜ್ಯಮಟ್ಟದಲ್ಲಿ ಭಾಗವಹಿಸಿ ಶಾಲೆಗೆ ರ್ಕಿತಿ ತಂದಿದ್ದಾರೆ.ಕ್ರೀಡೆಯಲ್ಲಿ ಇಲ್ಲಿನ ಮೂರು ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ₹ 10 ಸಾವಿರ ನಗದು ಬಹುಮಾನವನ್ನೂ ಪಡೆದಿದ್ದಾರೆ.

ಸ್ಮಾರ್ಟ್ ಬೋರ್ಡ್‍ನಲ್ಲಿ ವಿಶೇಷ ತರಗತಿ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ‘ವಾರದ ಮೂರನೇ ಶನಿವಾರ ಹೊರೆರಹಿತ ದಿನ ಆಚರಣೆ ಮಾಡುತ್ತೇವೆ. ಅಂದು ಮಕ್ಕಳನ್ನು ಅವರಿಷ್ಟದ ಹಾಗೆ ಬಿಡಲಾಗುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಎರಡು ಸ್ಮಾರ್ಟ್ ಬೋರ್ಡ್‍ನಲ್ಲಿ ವಿಶೇಷವಾದ ತರಗತಿಗಳನ್ನು ನಡೆಸಲಾಗುತ್ತಿದೆ.ಸ್ಮಾರ್ಟ್ ಬೋರ್ಡ್‌ ತರಗತಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಿದೆ’ ಎಂದು ಶಿಕ್ಷಕ ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆಕರ್ಷಕ ಕೈತೋಟದ ಮೆರುಗು

ಆವರಣದಲ್ಲಿರುವ ಸುಂದರವಾದ ಕೈತೋಟ ಇಡೀ ಶಾಲೆಯ ಮೆ‌ರುಗನ್ನು ಹೆಚ್ಚಿಸಿದೆ.

ಹಚ್ಚಹಸಿರಿನ ವಾತಾವರಣದ ನಡುವೆಯೇವಿವಿಧ ಬಗೆಯ ಗುಲಾಬಿ, ದಾಸವಾಳ, ಮಲ್ಲಿಗೆ, ಪಾರಿಜಾತ, ಸಂಪಿಗೆಯಂತಹ ಹೂವಿನ ಗಿಡಗಳು ಮತ್ತು ಮರಗಳು ಗಮನಸೆಳೆಯುತ್ತವೆ.

ಸೀಬೆ, ಸಪೋಟಾ, ತೆಂಗು, ಬಾಳೆ, ಬೆಟ್ಟದ ನಲ್ಲಿಕಾಯಿ, ನುಗ್ಗೆ, ಕರಿಬೇವು, ಶುಂಠಿ, ಕೊತ್ತಂಬರಿ, ಪುದೀನಾ ಸೇರಿದಂತೆ ಅನೇಕ ತರಕಾರಿ, ಗಿಡಮೂಲಿಕ ಸಸಿಗಳನ್ನೂ ಹಾಕಲಾಗಿದೆ. ಶಾಲೆಯು ಮೂರು ಬಾರಿ ಪರಿಸರ ಪ್ರಶಸ್ತಿಗೆ ಭಾಜನವಾಗಿದೆ. ಶಾಲೆಯ ಅಭಿವೃದ್ಧಿಗಾಗಿ ಎಸ್‌ಡಿಎಂಸಿ ದಾನಿಗಳನ್ನು ಆಶ್ರಯಿಸಿದೆ.

ಸಸಿ ನೆಡುವ ಸಂ‍ಪ್ರದಾಯ

ಶಾಲೆಯ ವಿದ್ಯಾರ್ಥಿಗಳ ಜನ್ಮದಿನದ ಪ್ರಯುಕ್ತ ಸಸಿ ನಡೆ‌ವುದನ್ನು ಇಲ್ಲಿ ಅಭ್ಯಾಸ ಮಾಡಲಾಗಿದೆ. ಶಾಲೆಗೆ ಗಣ್ಯ ವ್ಯಕ್ತಿಗಳು ಭೇಟಿ ನೀಡಿದಾಗ ಸಸಿ ನೆಡುವ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸಲಾಗುತ್ತಿದೆ.

‘ಸಸಿಗಳನ್ನು ನೆಡುವುದರಿಂದ ಉತ್ತಮವಾದ ಪರಿಸರ ನಿರ್ಮಾಣವಾಗುತ್ತದೆ. ಮಕ್ಕಳಲ್ಲೂ ಅರಿವು ಮೂಡುತ್ತದೆ’ ಎಂದು ಶಿಕ್ಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT