ಮಂಗಳವಾರ, ಮೇ 18, 2021
24 °C
ಶಾಂತ ಮಲ್ಲಿಕಾರ್ಜುನ ಸ್ವಾಮಿ ಶಾಲೆಯಲ್ಲಿದೆ ಪರಿಸರ ಸಂರಕ್ಷಣಾ ಸಮಿತಿ

ಮಹದೇಶ್ವರ ಬೆಟ್ಟ: ಶಿಕ್ಷಣದ ಜೊತೆ ತೋಟಗಾರಿಕೆಯ ಪಾಠ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರ, ತೋಟಗಾರಿಕೆಯ ಬಗ್ಗೆಯೂ ಪಾಠ ಹೇಳಿಕೊಡಲಾಗುತ್ತದೆ. 

ಆಸಕ್ತ ವಿದ್ಯಾರ್ಥಿಗಳನ್ನು ಸೇರಿಸಿ ‘ಶಾಲಾ ಪರಿಸರ ಸಂರಕ್ಷಣಾ ಸಮಿತಿ’ಯನ್ನು ರಚಿಸಲಾಗಿದ್ದು, ಸಮಿತಿಯು ಶಾಲೆಯಲ್ಲಿ ಮಾದರಿ ಕೈ ತೋಟ ನಿರ್ಮಿಸಿದೆ. ಇದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಮಕ್ಕಳದ್ದು. 

ಸಾಲೂರು ಮಠ ನಿರ್ವಹಿಸುತ್ತಿರುವ ಈ ಶಾಲೆ ಸರ್ಕಾರದ ಅನುದಾನದಿಂದ ಪಡೆಯುತ್ತಿದೆ. 1ರಿಂದ 7ನೇ ತರಗತಿಯವರೆಗೆ 460 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

5, 6, 7ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಪರಿಸರ ಹಾಗೂ ತೋಟಗಾರಿಕೆಯ ಬಗ್ಗೆ ಹೆಚ್ಚು ತಿಳಿಸಿಕೊಡಲಾಗುತ್ತಿದೆ. ಹಾಗಾಗಿ ಕಲಿಕೆಯಲ್ಲದೆ ತೋಟಗಾರಿಕೆಯ ಬಗ್ಗೆಯೂ ಮಕ್ಕಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಶಾಲಾ ಆವರಣದಲ್ಲಿ ಮೂಲಂಗಿ, ಟೊಮೆಟೊ, ಬೆಂಡೆ, ಸೊಪ್ಪು ಇನ್ನಿತರ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

‘ಪಠ್ಯದ ಜೊತೆಯಲ್ಲಿ ಮಕ್ಕಳಿಗೆ ವಿವಿಧ ರೀತಿಯ ಕಲೆಗಳನ್ನು ಕಲಿಸುವುದು ನಮ್ಮ ಕರ್ತವ್ಯ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಮೂಡಿಸಿದರೆ, ಮುಂದಿನ ದಿನಗಳಲ್ಲಿ ಅವರ ಭವಿಷ್ಯ ಉತ್ತಮವಾಗಿರುತ್ತದೆ. 6 ಮತ್ತು 7ನೇ ತರಗತಿಯಲ್ಲಿ ಆಸಕ್ತಿ ಇರುವ ಮಕ್ಕಳನ್ನು ಸೇರಿಸಿ ‘ಶಾಲಾ ಪರಿಸರ ಸಂರಕ್ಷಣಾ ಸಮಿತಿ’ ರಚಿಸಲಾಗಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಕೈ ತೋಟ ನಿ‌ರ್ಮಿಸಲಾಗಿದೆ’ ಎಂದು ಮುಖ್ಯಶಿಕ್ಷಕ ಕೆಂಪಸಿದ್ದು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇಂದಿನ ಕಾಲದಲ್ಲಿ ಪುಸ್ತಕದ ಜೊತೆ ಜೊತೆಯಲ್ಲಿ ಕ್ರೀಡೆ, ತೋಟಗಾರಿಕೆ, ಕೃಷಿ, ಕಲೆ ಮುಂತಾದ ಕ್ಷೇತ್ರಗಳಲ್ಲೂ ಮಕ್ಕಳಿಗೆ ಆಸಕ್ತಿ ಬರುವಂತೆ ಉತ್ತೇಜನ ನೀಡುವುದು ಶಿಕ್ಷಕರ ಹಾಗೂ ಪೋಷಕರ ಕರ್ತವ್ಯ’ ಎಂದು ಅವರು ಹೇಳಿದರು. 

ಶಾಲೆಯ ಪರಿಸರವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಇಲ್ಲಿ ಮಕ್ಕಳು ಸ್ವಯಂಪ್ರೇರಿತರಾಗಿ ನಿರ್ವಹಿಸುತ್ತಿದ್ದಾರೆ. ಹೋಲಿಕ್ರಾಸ್‌ ಗ್ರಾಮೀಣ ಅಭಿವೃದ್ಧಿಯ ಸಂಸ್ಥೆಯ ಸದಸ್ಯ ಸುರೇಶ್‌ ಹಾಗೂ ಅವರ ಒಡನಾಡಿಗಳು ಶಾಲೆಯ ಮಕ್ಕಳ  ಕೆಲಸಕ್ಕೆ ಕೈ ಜೋಡಿಸುತ್ತಿದ್ದಾರೆ. 

ಸಾವಯವ ಕೃಷಿ

ಶಾಲೆಯಲ್ಲಿ ಬೆಳೆಯುತ್ತಿರುವ ಸೊಪ್ಪು, ತರಕಾರಿಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಹಸಿರೆಲೆ ಗೊಬ್ಬರ ಹಾಗೂ ಇನ್ನಿತರ ಜೈವಿಕ ಗೊಬ್ಬರ ಹಾಕಲಾಗುತ್ತಿದೆ.

ಬೆಳೆದಂತಹ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಅಲ್ಲದೆ, ಮಕ್ಕಳ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಬಳಸಲಾಗುತ್ತದೆ ಎಂದು ಹೇಳುತ್ತಾರೆ ಶಿಕ್ಷಕರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು