ಸೋಮವಾರ, ಜನವರಿ 27, 2020
26 °C
ಹಳೇಮಾರ್ಟಳ್ಳಿ ಸರ್ಕಾರಿ ಶಾಲೆ: ಗಮನಸೆಳೆಯುತ್ತಿದೆ ವಿಶಿಷ್ಟ ಕೈತೋಟ, ವಿದ್ಯಾರ್ಥಿಗಳು, ಶಿಕ್ಷಕರ ಶ್ರಮ

ಕಸದಿಂದ ರಸ: ಇಲ್ಲಿ ಯಶಸ್ವೀ ಅನುಷ್ಠಾನ

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಶಾಲೆಯ ಆವರಣ ಪ್ರವೇಶಿಸಿ ಸುತ್ತಲೂ ಕಣ್ಣಾಡಿಸಿದರೆ ಗಿಡ, ಮರ ತರುಲತೆಗಳೇ ಕಾಣುತ್ತವೆ. ತಂಪಾದ ವಾತಾವರಣ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಯಾವುದೋ ಉದ್ಯಾನವನ್ನು ಪ್ರವೇಶಿಸಿದ ಭಾವ ಆವರಿಸುತ್ತದೆ... ಇದು ಖಾಸಗಿ ಶಾಲೆಯಲ್ಲ. ಸರ್ಕಾರಿ ಶಾಲೆ.

ಹನೂರು ತಾಲ್ಲೂಕಿನ ಹಳೆ ಮಾರ್ಟಳ್ಳಿಯಲ್ಲಿರುವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಲವು ಕಾರಣಗಳಿಗೆ ನೋಡುಗರನ್ನು ಆಕರ್ಷಿಸುತ್ತದೆ. 

ಪ್ಲಾಸ್ಟಿಕ್‌ ಬಾಟಲಿ, ಡಬ್ಬ ಸೇರಿದಂತೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಳಸಿ ಆಕರ್ಷಕ ಹೂವಿನ ಗಿಡಗಳನ್ನು ಬೆಳೆಸಿರುವುದು, ಗೋಡೆಯಲ್ಲಿ ತಂತಿ ಇಳಿ ಬಿಟ್ಟು, ಅದರಲ್ಲಿ ಪ್ಲಾಸ್ಟಿಕ್‌ ಹೂಕುಂಡಗಳನ್ನು ಇಟ್ಟು ಗಿಡ ಪೋಷಣೆ ಮಾಡುತ್ತಿರುವುದು, ಕಂಬಗಳಿಂದ ಹೂಕುಂಡಗಳನ್ನು ಇಳಿಬಿಟ್ಟಿರುವ ಸುಂದರ ಕೈತೋಟ ಇಲ್ಲಿನ ಪ್ರಮುಖ ಆಕರ್ಷಣೆ.

ಈ ತೋಟದ ನಿರ್ಮಾಣಕ್ಕೆ ಹೆಚ್ಚು ಖರ್ಚು ಮಾಡಿಲ್ಲ. ಎಸೆಯಬೇಕಾಗಿದ್ದ ಪ್ಲಾಸ್ಟಿಕ್‌ ವಸ್ತುಗಳನ್ನೇ ಬಳಸಿ ಶಾಲೆಯನ್ನು ಹಸಿರೀಕರಣ ಮಾಡಲಾಗಿದೆ. ಶಾಲೆಯ ಆವರಣದಲ್ಲಿರುವ ಎಲ್ಲ ಗಿಡಮರಗಳನ್ನು ಗುರುತಿಸಿ, ಅವುಗಳ ಹೆಸರನ್ನು ಫಲಕದಲ್ಲಿ ಬರೆದು ಪ್ರದರ್ಶಿಸುವ ವ್ಯವಸ್ಥೆಯೂ ಇಲ್ಲಿದೆ.   

ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ವೇಲಾಂಗಣಿ ಆರೋಗ್ಯಮ್ಮಾಳ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಕೈತೋಟದ ನಿರ್ವಹಣೆ ಜವಾಬ್ದಾರಿ ಮಕ್ಕಳದ್ದು.

‘ಹೂ ಕುಂಡ ನಿರ್ಮಾಣಕ್ಕೆ ಬೇಕಾದ ಪ್ಲಾಸ್ಟಿಕ್‌ ಬಾಟಲಿ ಹಾಗೂ ಇನ್ನಿತರ ಪ್ಲಾಸ್ಟಿಕ್‌ ಪರಕರಗಳನ್ನು ಮಕ್ಕಳೇ ಸಂಗ್ರಹಿಸಿ ತಂದಿದ್ದಾರೆ. ಅವುಗಳಿಗೆ ಬಣ್ಣ ಬಳಿದು, ಮಣ್ಣು ತುಂಬಿ ಗಿಡ ನೆಡಲಾಗಿದೆ’ ಎಂದು ಹೇಳುತ್ತಾರೆ ವೇಲಾಂಗಣಿ ಆರೋಗ್ಯಮ್ಮಾಳ್‌.

ಹೂವಿನ ಗಿಡಗಳೊಂದಿಗೆ, ಔಷಧೀಯ ಸಸ್ಯಗಳು, ತರಕಾರಿ, ಸೊಪ್ಪು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿ, ಸೊಪ್ಪುಗಳನ್ನು ಬಳಸಲಾಗುತ್ತದೆ.

‘ಕೈತೋಟದ ಸಂಪೂರ್ಣ ಜವಾಬ್ದಾರಿ ಮಕ್ಕಳಿಗೆ ವಹಿಸಿರುವುದರಿಂದ ಸ್ವಯಂಪ್ರೇರಿತರಾಗಿ, ಆಸಕ್ತಿಯಿಂದ ಅವರೇ ನಿರ್ವಹಣೆ ಮಾಡುತ್ತಾರೆ’ ಎಂದು ಹೇಳುತ್ತಾರೆ ಶಿಕ್ಷಕ ಆರ್‌.ನಲ್ಲಸ್ವಾಮಿ.

ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶ್ರಮದಿಂದಾಗಿ ಕಳೆದ ಸಾಲಿನಲ್ಲಿ ಶಿಕ್ಷಣ ಇಲಾಖೆಯು ‘ಹಳದಿ ಶಾಲೆ’ ಪುರಸ್ಕಾರ ನೀಡಿ ಗೌರವಿಸಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆಯೋಜಿಸಿದ್ದ ಎಜುಸ್ಯಾಟ್ ಕಾರ್ಯಕ್ರಮದಲ್ಲಿ ಪ್ರಂಶಸಾಪತ್ರವನ್ನೂ ಶಾಲೆ ಪಡೆದಿದೆ.

ಉತ್ತಮ ಕಲಿಕಾ ವಾತವರಣ: 1960ರಲ್ಲಿ ಈ ಶಾಲೆ ಆರಂಭವಾಗಿತ್ತು. ಸುತ್ತಮುತ್ತಲಿರುವ ಖಾಸಗಿ ಶಾಲೆಗಳ ಹೊಡೆತಕ್ಕೆ ಸಿಲುಕಿ ದಾಖಲಾತಿಯಲ್ಲಿ ಪದೇ ಪದೇ ಕುಸಿತ ಕಾಣುತ್ತಿದ್ದ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರ ಶ್ರಮ ಹಾಗೂ ಉತ್ತಮ ಬಾಂಧವ್ಯದಿಂದಾಗಿ ದಾಖಲಾತಿಯಲ್ಲಿ ಏರಿಕೆ ಕಂಡಿದೆ. ಈಗ 1ರಿಂದ 8ನೇ ತರಗತಿವರೆಗೆ 218 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ವಿಶಾಲವಾದ ಆಟದ ಮೈದಾನವನ್ನು ಹೊಂದಿರುವ ಈ ಶಾಲೆ ಸುಸಜ್ಜಿತ ಕಟ್ಟಡ ಹೊಂದಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಹೊಂದಿದೆ. ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.

‘ಕಲಿಕೆಗೆ ಪೂರಕವಾಗುವ ಬೋಧನೆಗೆ ಸಹಕಾರಿಯಾಗುವ ವಿವಿಧ ವಿಜ್ಞಾನ ಉಪಕರಣಗಳನ್ನು, ಪಾಠೋಪಕರಣಗಳನ್ನು ಹಾಗೂ ವಿವಿಧ ಮಾದರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚುನಾವಣೆ ಮೂಲಕವೇ ಶಾಲಾ ಮಂತ್ರಿಮಂಡಲ ರಚಿಸಲಾಗಿದೆ. ಹಸಿರುಸೇನೆ, ಗಣಿತ ಸಂಘ, ವಿಜ್ಞಾನ ಸಂಘ ಹಾಗೂ ಸಮಾಜವಿಜ್ಞಾನ ಸಂಘಗಳನ್ನು ಸ್ಥಾಪಿಸಿ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲಾಗುತ್ತಿದೆ’ ಎಂದು ವೇಲಾಂಗಣಿ ಆರೋಗ್ಯಮ್ಮಾಳ್ ಹೇಳಿದರು. 

ಮೊದಲ ಕನ್ನಡ ಶಾಲೆ

ತಮಿಳು ಭಾಷಿಕರೇ ಅಧಿಕವಾಗಿರುವ ಮಾರ್ಟಳ್ಳಿ ಭಾಗದಲ್ಲಿ ಕನ್ನಡ ಭಾಷೆ ಕಲಿಕೆ ದುಸ್ತರವಾಗಿತ್ತು. ಮಾರ್ಟಳ್ಳಿ, ಸಂದನಪಾಳ್ಯ ಹಾಗೂ ವಡ್ಡರದೊಡ್ಡಿ ಗ್ರಾಮಗಳಲ್ಲಿ ತಮಿಳು ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿದ್ದವು. ಈ ಭಾಗದ ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ನೀಡಬೇಕು ಎಂಬ ದೃಷ್ಟಿಯಿಂದ ಪ್ರಾರಂಭಿಸಿದ ಮೊದಲ ಕನ್ನಡ ಶಾಲೆ ಇದು. 

ಇದು ಸುತ್ತಲಿನ ಮಾರ್ಟಳ್ಳಿ, ಕೀರೆಪಾತಿ, ಪಾಲಿಮೇಡು, ಕಡಬೂರು, ವಡಕೆಹಳ್ಳ, ಬಿದರಳ್ಳಿ, ದೊರೆಸ್ವಾಮಿಮೇಡು ಮುಂತಾದ ಗ್ರಾಮಗಳ ಮಕ್ಕಳ ಕಲಿಕೆಗೆ ಕೇಂದ್ರಸ್ಥಾನವಾಗಿ ಪರಿಣಮಿಸಿತ್ತು.

‘ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ಶಿಕ್ಷಕರು ಸ್ಥಳೀಯರಾಗಿದ್ದಾರೆ. ಹೀಗಾಗಿ ಶಾಲಾ ಅವಧಿಯ ನಂತರವೂ ಮಕ್ಕಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಎಲ್ಲರ ಸಹಕಾರದಿಂದ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಪರಿಸರ ನಿರ್ಮಿಸಲು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ ಮುಖ್ಯಶಿಕ್ಷಕಿ ಸೆಲ್ವಮೇರಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು