ಚಾಮರಾಜನಗರ: ಆಷಾಢ ಮಾಸದಲ್ಲಿ ಕಳೆಗುಂದಿದ್ದ ಹೂವಿನ ಮಾರುಕಟ್ಟೆ ಶ್ರಾವಣ ಮಾಸದಲ್ಲಿ ಕಂಗೊಳಿಸುತ್ತಿದೆ. ಸಾಲು–ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಮಾರುಕಟ್ಟೆಗೆ ಆವಕವೂ ಜಾಸ್ತಿಯಾಗಿದೆ.
ಬೆಲೆ ದುಪ್ಪಟ್ಟು
ಆಷಾಢ ಮಾಸಕ್ಕೆ ಹೋಲಿಕೆ ಮಾಡಿದರೆ ಬಹುತೇಕ ಹೂವುಗಳ ದರ ದುಪ್ಪಟ್ಟಾಗಿದೆ. ಆಷಾಢದಲ್ಲಿ 600 ರಿಂದ ₹800ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ಕನಕಾಂಬರ ಪ್ರಸ್ತುತ ₹1,000–₹1,200 ಮುಟ್ಟಿದೆ.
₹100 ರಿಂದ ₹120ಕ್ಕೆ ಸಿಗುತ್ತಿದ್ದ ಸಣ್ಣ ಮಲ್ಲಿಗೆ ₹240ಕ್ಕೆ ಹೆಚ್ಚಾಗಿದೆ. ಹೆಚ್ಚು ಬೇಡಿಕೆಯ ಮಲ್ಲಿಗೆ ದರ ಬರೋಬ್ಬರಿ ದುಪ್ಪಟ್ಟಾಗಿದ್ದು ₹ 480ಕ್ಕೆ ಮಾರಾಟವಾಗುತ್ತಿದೆ. ಕೆ.ಜಿಗೆ ₹20 ರಿಂದ ₹30ಕ್ಕೆ ಸಿಗುತ್ತಿದ್ದ ಸುಗಂಧರಾಜ ಕೂಡ ಮೂರ್ನಾಲ್ಕು ಪಟ್ಟು ದರ ಏರಿಸಿಕೊಂಡಿದ್ದು ₹80 ರಿಂದ ₹160ಕ್ಕೆ ಲಭ್ಯವಾಗುತ್ತಿದೆ.
ಗುಲಾಬಿ ದರವೂ ಗುಣಮಟ್ಟದ ಮೇಲೆ ₹ 100 ರಿಂದ ₹160ರವರೆಗೂ ಬೆಲೆ ಇದೆ. ಕಳೆದವಾರ ₹60 ರಿಂದ ₹80 ಇತ್ತು. ₹10 ರಿಂದ ₹20ಕ್ಕೆ ಸಿಗುತ್ತಿದ್ದ ಚೆಂಡು ಹೂ ಪ್ರಸ್ತುತ ₹30 ರಿಂದ ₹40ಕ್ಕೆ ಮುಟ್ಟಿದೆ.
ಬಹುತೇಕ ಹೂವುಗಳ ಬೆಲೆ ಹೆಚ್ಚಾಗಿದ್ದರೆ ಸೇವಂತಿಗೆ ದರ ಮಾತ್ರ ಇಳಿಕೆಯಾಗಿದೆ. ಕಳೆದವಾರ ₹ 200 ರಿಂದ ₹240ರವರೆಗೆ ಇದ್ದ ದರ ಸದ್ಯ ₹100 ರಿಂದ ₹160ಕ್ಕೆ ಇಳಿಕೆಯಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಂತಿಗೆ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಶ್ರಾವಣ ಮಾಸ ಈಗಷ್ಟೆ ಆರಂಭವಾಗಿದ್ದು ಮುಂದೆ ನಾಗರ ಪಂಚಮಿ, ವರಮಹಾಲಕ್ಷ್ಮೀ, ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು ಹೂವಿನ ದರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಬ್ಬಗಳ ಜತೆಗೆ ಶುಭ ಸಮಾರಂಭಗಳು, ಉತ್ಸವಗಳು ನಡೆಯುವುದರಿಂದ ಸಹಜವಾಗಿ ಹೂವಿಗೆ ಬೇಡಿಕೆ ಹೆಚ್ಚಾಗಲಿದ್ದು ದರವೂ ಗಗನಕ್ಕೇರಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಮಳೆ ಹೊಡೆತ
ಈಚೆಗೆ ಸುರಿದ ಭಾರಿ ಮಳೆಯಿಂದ ಹೂವಿನ ಬೆಳೆಗೆ ಪೆಟ್ಟುಬಿದ್ದಿದ್ದು ಇಳುವರಿಯೂ ಕುಸಿದಿದೆ. ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಹೂ ಬರುತ್ತಿಲ್ಲ. ದರ ಹೆಚ್ಚಾಗಿದ್ದರೂ ಹೂ ಬೆಳೆಗಾರರಿಗೆ ಲಾಭ ಸಿಗದಂತಾಗಿದೆ ಎನ್ನುತ್ತಾರೆ ರೈತರು.
ತಮಿಳುನಾಡಿನಿಂದ ಮಲ್ಲಿಗೆ ಪೂರೈಕೆ
ಚಾಮರಾಜನಗರದಲ್ಲಿ ಕನಕಾಂಬರ, ಸುಗಂಧರಾಜ, ಗುಲಾಬಿ, ಚೆಂಡು ಹೂ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಮಾರುಕಟ್ಟೆ ಬರುತ್ತದೆ. ಮಲ್ಲಿಗೆ ಹಾಗೂ ಸಣ್ಣ ಮಲ್ಲಿಗೆ ಮಾತ್ರ ತಮಿಳುನಾಡಿನಿಂದ ಪೂರೈಕೆಯಾಗುತ್ತದೆ ಎನ್ನುತ್ತಾರೆ ಚೆನ್ನಾಪುರದ ಮೊಳೆ ರಸ್ತೆಯ ಹೂವಿನ ವ್ಯಾಪಾರಿ ರವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.