ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಸ್ಫೋಟ: ಚಾಮರಾಜನಗರ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ

Last Updated 22 ಜನವರಿ 2021, 14:54 IST
ಅಕ್ಷರ ಗಾತ್ರ

ಚಾಮರಾಜನಗರ: ಶಿವಮೊಗ್ಗ ಜಿಲ್ಲೆಯ ಹುಣಸೋಡಿನಲ್ಲಿ ಜಿಲೆಟಿನ್‌ ಸ್ಫೋಟ ಪ್ರಕರಣ ವರದಿಯಾಗುತ್ತಿದ್ದಂತೆಯೇ ಜಿಲ್ಲೆಯಲ್ಲೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿದ್ದು, ಕಲ್ಲಿನ ಕ್ವಾರಿ, ಕ್ರಷರ್‌ ಮಾಲೀಕರಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮತ್ತೆ ಸೂಚನೆ ನೀಡಿದೆ.

ಕಲ್ಲಿನ ಗಣಿಗಾರಿಕೆಗೆ ಜಿಲ್ಲೆ ಹೆಸರುವಾಸಿಯಾಗಿದ್ದು, 90 ಕರಿಕಲ್ಲಿನ (ಗ್ರ್ಯಾನೈಟ್‌) ಗಣಿ, 38 ಬಿಳಿ ಕಲ್ಲಿನ (ಕಟ್ಟಡ ಕಟ್ಟುವ ಕಲ್ಲು)ಕ್ವಾರಿ ಹಾಗೂ 25 ಕ್ರಷರ್‌ಗಳಿಗೆ ಗಣಿ ಇಲಾಖೆ ಪರವಾನಗಿ ನೀಡಿದೆ. ಕೆಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಆರೋಪವೂ ಇದೆ.

ಕರಿಕಲ್ಲಿನ (ಗ್ರ್ಯಾನೈಟ್‌) ಕ್ವಾರಿಯಲ್ಲಿ ಸ್ಫೋಟಕ ಬಳಸುವುದಿಲ್ಲ. ಬಿಳಿ ಕಲ್ಲಿನ ಕ್ವಾರಿಗಳಲ್ಲಿ ಜಿಲೆಟಿನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಕ್ರಷರ್‌ಗಳಲ್ಲೂ ಜಿಲೆಟಿನ್‌ ಬಳಕೆ ಕಡಿಮೆ.

ಇತ್ತೀಚೆಗೆ ಚಾಮರಾಜನಗರ ನಗರ ತಾಲ್ಲೂಕಿನ ಮುಕ್ಕಡಹಳ್ಳಿಯ ಬಿಳಿಕಲ್ಲಿನ ಗಣಿಯಲ್ಲಿ ಸಿಡಿಮದ್ದು ಸ್ಫೋಟಿಸಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು.

ಮುನ್ನೆಚ್ಚರಿಕೆಗೆ ಸೂಚನೆ: ಶಿವಮೊಗ್ಗ ಜಿಲ್ಲೆಯ ದುರಂತದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಶುಕ್ರವಾರ ಬೆಳಿಗ್ಗೆ ಗಣಿ ಇಲಾಖೆ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳ ಜೊತೆ ಚರ್ಚಿಸಿದ್ದಾರೆ. ಎಲ್ಲ ಗಣಿ ಹಾಗೂ ಬಿಳಿಕಲ್ಲು ಕ್ವಾರಿ ಹಾಗೂ ಕ್ರಷರ್‌ಗಳಲ್ಲಿ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

‘ಜಿಲ್ಲೆಯಲ್ಲಿ ಗಣಿಗಳ ಕಾರ್ಯಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತಿದೆ. ಶುಕ್ರವಾರ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಗಣಿ ಮಾಲೀಕರು ಎಲ್ಲ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ಸೂಚನೆ ನೀಡಿದ್ದೇನೆ. ಭೂ ವಿಜ್ಞಾನಿಗಳಿಗೆ ಹೋಬಳಿವಾರು ಜವಾಬ್ದಾರಿ ನೀಡಲಾಗಿದ್ದು, ಪ್ರತಿ ವಾರ ತಮ್ಮ ವ್ಯಾಪ್ತಿಯ ಗಣಿಗಳಿಗೆ ತೆರಳಿ, ಅಲ್ಲಿ ಪಾಲಿಸಲಾಗುತ್ತಿರುವ ಕ್ರಮಗಳನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ಡಾ.ಎಂ.ಆರ್‌.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರು ಶುಕ್ರವಾರ ಗುಂಡ್ಲುಪೇಟೆಯ ಮಡಹಳ್ಳಿ ಭಾಗದ ಕ್ವಾರಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಗುರುವಾರವಷ್ಟೇ ಕ್ವಾರಿ, ಕ್ರಷರ್‌ಗಳ ಮಾಲೀಕರ ಸಭೆ ನಡೆಸಿದ್ದೆ. ಜಿಲೆಟಿನ್‌ ಬಳಕೆ ಹಾಗೂ ಇತರ ಸುರಕ್ಷಿತ ಕ್ರಮಗಳ ಪಾಲನೆ ಬಗ್ಗೆ ಪ್ರತಿಬಾರಿಯೂ ಅವರಿಗೆ ಸೂಚನೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಅವರು ಶುಕ್ರವಾರ ಸಭೆ ನಡೆಸಿ, ಮಾಲೀಕರಿಗೆ ಮತ್ತೆ ನಿಯಮಗಳ ಪಾಲನೆಯ ಬಗ್ಗೆ ಎಚ್ಚರಿಕೆ ನೀಡುವಂತೆ ತಿಳಿಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ಮತ್ತೆ ಗಣಿ, ಕ್ರಷರ್‌, ಕ್ವಾರಿ ಮಾಲೀಕರ ಸಭೆ ಕರೆಯುತ್ತೇನೆ’ ಎಂದು ಡಾ.ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಕರಿ ಕಲ್ಲು ಕ್ವಾರಿ ಹೆಚ್ಚಿದೆ. ಅಲ್ಲಿ ಜಿಲೆಟಿನ್‌ ಬಳಸಿ ಸ್ಫೋಟ ಮಾಡುವುದಿಲ್ಲ. 38 ಬಿಳಿ ಕಲ್ಲು ಕ್ವಾರಿ ಇದ್ದು, ಇಲ್ಲಿ ಜಿಲೆಟಿನ್‌ ಬಳಸಲಾಗುತ್ತಿದೆ. ಸಂಜೆ 6ರಿಂದ 7 ಗಂಟೆ ನಡುವೆ ಸ್ಫೋಟ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಸ್ಫೋಟ ಮಾಡುವುದಕ್ಕೂ ಮುನ್ನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

‘ಜಿಲೆಟಿನ್‌ ಸಾಗಾಟ, ಸಂಗ್ರಹಣೆಯಲ್ಲಿ ನಿಯಮ ಉಲ್ಲಂಘನೆಯಾದರೆ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಲಕ್ಷ್ಮಮ್ಮ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT