ಶನಿವಾರ, ಜುಲೈ 2, 2022
22 °C
ಕೆರೆ ತುಂಬಿಸುವ ಯೋಜನೆಯಲ್ಲಿ ನೀರು, ಧಾರಾಕಾರ ಮಳೆಯಿಂದ ಬೇಗ ಭರ್ತಿ

ಕೋಡಿ ಬಿದ್ದ ಶಿವಪುರ ಕಲ್ಕಟ್ಟ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಭಾಗದಲ್ಲಿ ಬಿದ್ದ ಜೋರು ಮಳೆಗೆ ಶಿವಪುರ ಕಲ್ಕಟ್ಟ (ಕಲ್ಲುಕಟ್ಟೆ) ಕೆರೆ ತುಂಬಿ ಕೋಡಿ ಮಂಗಳವಾರ ಬಿದ್ದಿದೆ.

740 ಎಕರೆ ಪ್ರದೇಶದಲ್ಲಿಇರುವ ಕೆರೆ ತುಂಬಿರುವುದರಿಂದ ಸುತ್ತಲಿನ ಗ್ರಾಮಸ್ಥರು ಖುಷಿಯಲ್ಲಿದ್ದಾರೆ.

ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಕೆರೆಗೆ ನೀರು ಹರಿಸಲಾಗುತ್ತಿದೆ. ಕೆರೆ ಬಹುತೇಕ ಭರ್ತಿಯಾಗಿದ್ದು, ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಹಂತ ತಲುಪಿತ್ತು. ಮಂಗಳವಾರ ಸುರಿದ ಧಾರಾಕಾರ ಮಳೆಗೆ ಕೆರೆ ತುಂಬಿ ಹರಿದಿದೆ.

ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಾದ ಪುತ್ತನಪುರ, ಬಸವಪುರ, ವಡ್ಡನವಸಹಳ್ಳಿ, ಕೋಡಹಳ್ಳಿ, ಅಣ್ಣೂರುಕೇರಿ, ಕೊಡಹಳ್ಳಿ ಮುಂತಾದ ಗ್ರಾಮಗಳ ರೈತರಿಗೆ ಉಪಯೋಗ ಆಗಲಿದೆ.

2014ರಲ್ಲಿ ರೈತ ಸಂಘದ ವತಿಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ರೈತರು ಪಾದಯಾತ್ರೆ ಹೊರಟ ಸಂದರ್ಭದಲ್ಲಿ ಅಂದು ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಮತ್ತು ಸಂಸದರಾಗಿದ್ದ ಆರ್.ಧ್ರುವನಾರಾಯಣ ಅವರು ಸರ್ಕಾರದ ಗಮನಕ್ಕೆ ತಂದು ಎಲ್ಲ ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಭರವಸೆ ನೀಡಿ ಅದರಂತೆ ಹಣ ಬಿಡುಗಡೆ ಮಾಡಿ ತಾಲ್ಲೂಕಿನ ಹುತ್ತೂರು ಕೆರೆವರೆಗೆ ನೀರು ಹರಿಸಿದ್ದರು. ಅವರ ನಿಧನದ ಬಳಿಕ ಪತ್ನಿ ಎಂ.ಸಿ.ಮೋಹನಕುಮಾರಿ ಅವರು ಹುತ್ತೂರಿನ ಪಂಪ್ ಹೌಸ್ ಕೆಲಸ ಪೂರ್ಣಗೊಳಿಸಿ ವಡ್ಡಗೆರೆ ಕೆರೆಗೆ ನೀರು ಹರಿಸಲು ಪ್ರಾಯೋಗಿಕವಾಗಿ ಚಾಲನೆ ನೀಡಿದ್ದರು.

ನಂತರ ನಡೆದ ಚುನಾವಣೆಯಲ್ಲಿ ಗೆದ್ದ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಗೆದ್ದಿದ್ದರು. ಈಗ ಅವರ ಅವಧಿಯಲ್ಲಿ ವಡ್ಡಗೆರೆ ಕೆರೆಗೆ ನೀರು ತುಂಬಿಸಿ, ಅಲ್ಲಿಂದ ಎಲ್ಲ ಕೆರೆಗಳಿಗೆ ನೀರು ಹರಿದಿದೆ. 

‘ಕೆರೆಗೆ ನೀರು ತುಂಬಿಸುವಲ್ಲಿ ತಾಲ್ಲೂಕಿನ ಎಲ್ಲ ಶಾಸಕರ ಕೊಡುಗೆ ಇದೆ. ಕೆ.ಎಸ್.ನಾಗರತ್ನಮ್ಮ ಅವರ ಕಾಲದಲ್ಲಿ ಕೆರೆ ಕಟ್ಟಿಸಿದರು. ಮಹದೇವಪ್ರಸಾದ್ ಅವರು ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿಸಿದರು. ಮೋಹನ ಕುಮಾರಿ ಅವರು ಅಡೆತಡೆಗಳನ್ನು ನಿವಾರಿಸಿದರು. ಅಂತಿಮವಾಗಿ ಶಾಸಕ ಸಿ.ಎಸ್.ನಿರಂಜನಕುಮಾರ್ ನೀರು ತುಂಬಿಸುವಲ್ಲಿ ಸಫಲರಾದರು. ಈಗ ನಿರಂತರವಾಗಿ ಮಳೆಯಿಂದ ಕೆರೆ ಕೋಡಿ ಬಿದ್ದಿದೆ’ ಎಂದು ಶಿವಪುರ ಗ್ರಾಮದ ಮುಖಂಡ ಮಂಜಪ್ಪ ಅವರು ತಿಳಿಸಿದರು. 

‘ಜನಪ್ರತಿನಿದಿಗಳಾದವರು ಜನರ ಕೆಲಸ ಮಾಡಬೇಕು. 2014ರಲ್ಲಿ ತಾಲ್ಲೂಕಿನ ಜನತೆಗೆ ಆಗುತ್ತಿದ್ದ ಸಮಸ್ಯೆಯನ್ನು ಗುರುತಿಸಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡ ರೈತ ಸಂಘದ ಪ್ರತಿಫಲದಿಂದ ಕೆರೆಗೆ ನೀರು ಬಂದಿದೆ’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.