ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಜಾತ್ರೆ | ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟದತ್ತ ಸಾವಿರಾರು ಭಕ್ತರು

ತಂಡೋಪತಂಡವಾಗಿ ಕಾವೇರಿ ನದಿ ದಾಟುತ್ತಿರುವ ಜನರು
Last Updated 19 ಫೆಬ್ರುವರಿ 2020, 11:24 IST
ಅಕ್ಷರ ಗಾತ್ರ
ADVERTISEMENT
""
""

ಹನೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಿಂದ ನಡೆಯಲಿರುವ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಕಾವೇರಿ ನದಿಯನ್ನು ದಾಟಿ ಕಾಲ್ನಡಿಗೆಯಲ್ಲಿ ತಂಡೋಪತಂಡವಾಗಿ ಬೆಟ್ಟಕ್ಕೆ ತೆರಳುತ್ತಿದ್ದಾರೆ.

ವಯಸ್ಸಿನ ಹಂಗಿಲ್ಲದೇ, ಮಹಿಳೆಯರು ಮಕ್ಕಳೆನ್ನದೇ, ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನ ಪಡೆಯಲುಕಾಲ್ನಡಿಗೆಯಲ್ಲಿಬರುವುದು ವಾಡಿಕೆ. ಶಿವರಾತ್ರಿ ಜಾತ್ರೆ ಸಮಯದಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಪ್ರಮಾಣ ಹೆಚ್ಚಿರುತ್ತದೆ. ಶಿವರಾತ್ರಿ ಹಬ್ಬಕ್ಕೆನಾಲ್ಕುದಿನಗಳಮುನ್ನವೇ ತಮ್ಮ ಯಾತ್ರೆಯನ್ನು ಆರಂಭಿಸಿರುವ ಭಕ್ತರು ಕೋಲಾರ, ಬೆಂಗಳೂರು, ಮಂಡ್ಯ, ರಾಮನಗರ, ಕನಕಪುರ ಚನ್ನಪಟ್ಟಣ, ಬಿಡದಿಮುಂತಾದ ಕಡೆಗಳಿಂದ ಕಾಲ್ನಡಿಗೆಯಲ್ಲಿಸಂಗಮದ ಮೂಲಕ ಕಾವೇರಿ ನದಿಯನ್ನು ದಾಟಿಬಂದು ಕಲ್ಲು ಮುಳ್ಳನ್ನೂ ಲೆಕ್ಕಿಸಿದೆ ನಡೆಯುತ್ತಾ ಅಲ್ಲಲ್ಲಿ ವಿಶ್ರಾಂತಿ ಪಡೆದು ಪಾದಯಾತ್ರೆಯಲ್ಲಿ ತೊಡಗಿದ್ದಾರೆ.

ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತರು

ಕಾವೇರಿ ವನ್ಯಧಾಮದ ಅಧಿಕಾರಿಗಳುನದಿ ದಾಟಿ ಬರುವ ಭಕ್ತರಿಗಾಗಿ ಅರಣ್ಯ ಇಲಾಖೆ ಕಾಡಂಚಿನ ಗೇಟನ್ನುಸಹ ಭಕ್ತರಿಗಾಗಿ ತೆರೆದಿದ್ದಾರೆ. ಅಲ್ಲದೇ, ನದಿ ತೀರದಿಂದ ಅರಣ್ಯದಂಚಿನವರೆಗೆ ಭಕ್ತರಿಂದ ಕಾಡುಪ್ರಾಣಿ ಗಳಿಗಾಗಲಿ, ಪ್ರಾಣಿಗಳಿಂದ ಭಕ್ತರಿಗಾಗಲಿ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವನ್ನೂ ವಹಿಸಿದ್ದಾರೆ.

ಸಂಗಮದಲ್ಲಿ ನದಿಯನ್ನು ದಾಟಿ ಬರುವ ಬರುವ ಭಕ್ತರು ಬಸವನ ಕಡ ಮೂಲಕ ಶಾಗ್ಯ, ಹಲಗಾಪುರ, ಸಂಗೀತದೊಡ್ಡಿ, ಮಾರ್ಗವಾಗಿ ತೆರಳಿ ಗುಳ್ಯ ಗ್ರಾಮದಲ್ಲಿರುವ ಮಹದೇಶ್ವರನಿಗೆಪೂಜೆಸಲ್ಲಿಸುತ್ತಾರೆ. ಬಳಿಕ ಎಲ್ಲೆಮಾಳ ಮಾರ್ಗವಾಗಿ ಕೆಂಚಯ್ಯನದೊಡ್ಡಿ, ಮಲ್ಲಯ್ಯನಪುರ, ಕೌದಳ್ಳಿ ಮತ್ತು ತಾಳುಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ಮಾಡಿ ಜಾತ್ರೆ ದಿನ ಕ್ಷೇತ್ರ ತಲುಪಿ ಇಷ್ಟಾರ್ಥ ದೇವರಿಗೆ ಧೂಪಹಾಕಿ, ಉರುಳು ಸೇವೆ, ಪಂಜಿನ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

‘ಮಹದೇಶ್ವರ ನಮ್ಮ ಮನೆ ದೇವರಲ್ಲ, ಆದರೂ ಮೂರು ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದೇನೆ. ಇದರಿಂದ ನನ್ನ ಕಷ್ಟ ಪರಿಹಾರವಾಗಿದೆ. ಮುಂದಿನ ದಿನಗಳಲ್ಲಿಯೂ ಕಾಲ್ನಡಿಗೆಯಲ್ಲಿಯೇ ಮಾದಪ್ಪನ ಸನ್ನಿಧಿಗೆ ತೆರಳಿ ಸೇವೆ ಸಲ್ಲಿಸಬೇಕು ಎಂಬ ಬಯಕೆಯಿದೆ. ನಾಲ್ಕು ದಿನಗಳ ಕಾಲ ನಿರಂತರವಾಗಿ ಕಾಲ್ನಡಿಗೆಯಲ್ಲಿ ತೆರಳಿ ನೆಚ್ಚಿನ ದೇವರಿಗೆ ಪೂಜೆ ಸಲ್ಲಿಸುವುದರಿಂದ ಮನಃಶಾಂತಿ ಸಿಗುತ್ತದೆ’ ಎಂದು ಕನಕಪುರದಿಂದ ಬಂದಿದ್ದ ಕಾವ್ಯ ಅವರು ತಿಳಿಸಿದರು.

ಮಹದೇಶ್ವರ ಬೆಟ್ಟದ ಹಾದಿಯಲ್ಲಿ ಭಕ್ತರ ಸಾಲು

‘ನಮ್ಮ ಗ್ರಾಮದ ಬಹುತೇಕ ಜನ ಪ್ರತಿ ವರ್ಷ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದೇವೆ. ನಾನು ಎಂಟು ವರ್ಷಗಳಿಂದಲೂ ಪಾದಯಾತ್ರೆ ಮಾಡುತ್ತಿದ್ದೇನೆ. ಅರಣ್ಯ ಇಲಾಖೆ ಸಿಬ್ಬಂದಿ ಸಹ ಪ್ರತಿ ವರ್ಷ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮಂಗಳವಾರ ಗ್ರಾಮದಿಂದ ಹೊರಟಿದ್ದೇವೆ. ಶುಕ್ರವಾರ ಬೆಟ್ಟವನ್ನು ತಲುಪಿ ಸೇವೆ ಸಲ್ಲಿಸುವೆವು’ ಎಂದು ರಾಮನಗರ ಜಿಲ್ಲೆಯ ಸಂತೆಕೋಡಿಹಳ್ಳಿ ಗ್ರಾಮದ ಕೆ.ಪಿ. ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು ತಾಲ್ಲೂಕು ಮಲ್ಲಯ್ಯನಪುರದಲ್ಲಿ ‘ರೋಟರಿ ಸಿಲ್ಕ್‌ ಸಿಟಿ ರಾಮನಗರ’ದ ವತಿಯಿಂದ ಪಾದಯಾತ್ರಿಗಳಿಗೆ ತಂಗುದಾಣ, ಅನ್ನದಾನ, ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಮಾಡಲಾಗುತ್ತಿದೆ. ಅಂದಾಜು 2000 ಜನರಿಗೆ ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆಯನ್ನೂ
ಮಾಡಿದೆ.

ಹೆಚ್ಚುವರಿ ಬಸ್‌

ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬೆಟ್ಟಕ್ಕೆ ಹೆಚ್ಚುವರಿಯಾಗಿ 480 ಬಸ್‌ಗಳ ಸೌಕರ್ಯ ಒದಗಿಸಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಇವು ಸಂಚರಿಸಲಿವೆ.

‘ನಮ್ಮ ವಿಭಾಗದಿಂದ 200 ಹೆಚ್ಚು ಬಸ್‌ಗಳನ್ನು ಹಾಕಿದ್ದೇವೆ. ಜೊತೆಗೆ ಮೈಸೂರು, ಮಂಡ್ಯ, ರಾಮನಗರ ಘಟಕಗಳಿಂದಲೂ ಹೆಚ್ಚುವರಿ ಬಸ್‌ಗಳನ್ನು ಪಡೆದಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಥದ ದುರಸ್ತಿ ಬಹುತೇಕ ಪೂರ್ಣ

ಮಹದೇಶ್ವರ ಬೆಟ್ಟದ ಮಹಾರಥದ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ಶೇ 90ಕ್ಕೂ ಹೆಚ್ಚು ಕೆಲಸಗಳು ಪೂರ್ಣಗೊಂಡಿವೆ.

‘ರಥಕ್ಕೆ ಅಳವಡಿಸಿರುವ ಹೊಸ ಮರಗಳಿಗೆ ಪೂರ್ಣ ಪ್ರಮಾಣದ ಪಾಲಿಷ್‌ ಹಾಗೂ ಬಣ್ಣ ಲೇಪನ ಸೇರಿದಂತೆ ಇತ್ಯಾದಿ ಕೆಲಸಗಳು ಜಾತ್ರೆಯ ನಂತರ ಮಾಡಲಾಗುವುದ. 24ಕ್ಕೆ ನಡೆಯಲಿರುವ ರಥೋತ್ಸವಕ್ಕೆ ಬೇಕಾದ ರೀತಿಯಲ್ಲಿ ರಥವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗುವುದು’ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT