ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಫುಟ್‌ಪಾತ್‌ ಮಳಿಗೆ; ಜನರಿಗೆ ಕಿರಿಕಿರಿ

ನಗರ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಖೋತಾ; ಕಾರ್ಯರೂಪಕ್ಕೆ ಬಾರದ ಫುಡ್‌ ಜೋನ್‌ ಯೋಜನೆ
Last Updated 27 ಡಿಸೆಂಬರ್ 2021, 4:31 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ಪಾದಚಾರಿ ಮಾರ್ಗಗಳಲ್ಲಿ (ಫುಟ್‌ಪಾತ್‌) ಹೋಟೆಲ್‌, ಫಾಸ್ಟ್ ಫುಡ್‌, ಪಾನಿಪುರಿ ಮುಂತಾದ ಆಹಾರ ಮಳಿಗೆಗಳು ಹಾಗೂ ಇನ್ನಿತರ ಬೀದಿ ಬದಿ ಅಂಗಡಿಗಳಿಂದಾಗಿ ಸ್ಥಳೀಯ ಆಡಳಿತಗಳಿಗೆ ಆದಾಯ ಖೋತಾ ಆಗುವುದರ ಜೊತೆಗೆ ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಿ, ಅಲ್ಲಿ ಅವರಿಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಜಿಲ್ಲಾಡಳಿತ ನೀಡಿದ್ದರೂ; ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ. ಇದರಿಂದಾಗಿ ಸಮಸ್ಯೆ ತಪ್ಪಿಲ್ಲ.

ಆಹಾರ ಮಳಿಗೆಗಳು ಕಡಿಮೆ:ಜಿಲ್ಲಾ ಕೇಂದ್ರ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ 1,002 ಮಂದಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ನಗರಸಭೆಯ ಅಂಕಿ ಅಂಶ ಹೇಳುತ್ತದೆ. ಈ ಪೈಕಿ 121 ಮಂದಿ ಆಹಾರ ಮಳಿಗೆ ಇಟ್ಟುಕೊಂಡಿದ್ದಾರೆ. ಇವುಗಳಲ್ಲಿ ಹೋಟೆಲ್‌ ನಡೆಸುತ್ತಿರುವವರ ಸಂಖ್ಯೆ ಕಡಿಮೆ. ತರಕಾರಿ, ಹಣ್ಣಿನ ಅಂಗಡಿಗಳನ್ನು ಇಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 128 ಮಂದಿ ಬೀದಿ ಬದಿ ಆಹಾರ ಮಳಿಗೆ ಇಟ್ಟುಕೊಂಡಿದ್ದಾರೆ. ಗುಂಡ್ಲುಪೇಟೆ ಪುರಸಭೆಯಲ್ಲಿ 90 ಮಳಿಗೆಗಳಿಗೆ, ಯಳಂದೂರು ಪಟ್ಟಣದಲ್ಲಿ 50ರಷ್ಟು ಫಾಸ್ಟ್‌ಫುಡ್‌ಗಳಿವೆ. ಹನೂರಿನಲ್ಲಿ ಎಂಟು ಹೋಟೆಲ್‌ಗಳಿವೆ.

ಫುಟ್‌ಪಾತ್‌ಗಳೇ ಇಲ್ಲ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳನ್ನು ಹೊಂದಿರುವ ವ್ಯವಸ್ಥಿತ ರಸ್ತೆಗಳ ಸಂಖ್ಯೆಯೇ ಕಡಿಮೆ. ಪ್ರಮುಖ ರಸ್ತೆಗಳಿಗೆ ಮಾತ್ರ ಫುಟ್‌ಪಾತ್‌ಗಳಿವೆ. ಉಳಿದ ರಸ್ತೆಗಳಿಗೆ ಫುಟ್‌ಪಾತ್‌ಗಳಿಲ್ಲ. ರಸ್ತೆಯ ಬದಿಗಳಲ್ಲೇ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಇರುವ ಫುಟ್‌ಪಾತ್‌ಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ.

ಫುಡ್‌ ಜೋನ್‌ ಯೋಜನೆಗೆ ಹಿನ್ನಡೆ: ನಗರ/ಪಟ್ಟಣಗಳಲ್ಲಿ ಫುಡ್‌ ಜೋನ್‌ ಆರಂಭಿಸುವ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಯೋಜನೆ ರೂಪಿಸಿದ್ದರು. ಚಾಮರಾಜನಗರ, ಗುಂಡ್ಲುಪೇಟೆಗಳಲ್ಲಿ ಮೂರು ಕಡೆ, ಉಳಿದ ನಗರ, ಪಟ್ಟಣಗಳಲ್ಲಿ ಒಂದು ಕಡೆ ಫುಡ್‌ ಜೋನ್‌ ಆರಂಭಿಸಲು ಪ್ರಸ್ತಾಪವಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಗುಂಡ್ಲುಪೇಟೆಯಲ್ಲಿ ಮಳಿಗೆಗಳನ್ನು ಮಾಡಲಾಗಿದ್ದರೂ, ಪಟ್ಟಣದಿಂದ ದೂರ ಇದೆ ಎಂಬ ಕಾರಣಕ್ಕೆ ಯಾರೂ ಅಲ್ಲಿಗೆ ಬರುತ್ತಿಲ್ಲ.

ಪಾದಚಾರಿಗಳಿಗೆ ತೊಂದರೆ: ಫುಟ್‌ಪಾತ್‌ಗಳ ಒತ್ತುವರಿ, ಮಳಿಗೆಗಳನ್ನು ಅಲ್ಲಿ ತೆರೆದಿರುವುದರಿಂದ ಹಾಗೂ ಫಾಸ್ಟ್‌ಫುಡ್‌ ಮಳಿಗೆಗಳ ಎದುರು ಜನರು ಜಮಾವಣೆಗೊಳ್ಳುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ.

‘ಬೀದಿ ಬದಿ ವ್ಯಾಪಾರಿಗಳ ಕಷ್ಟ ಅರ್ಥವಾಗುತ್ತದೆ. ಸ್ಥಳೀಯ ಆಡಳಿತ ಅವರಿಗಾಗಿಯೇ ಪ್ರತ್ಯೇಕ ಸ್ಥಳ ಗುರುತಿಸಬೇಕು. ಇದರಿಂದಾಗಿ ನಿರ್ದಿಷ್ಟ ಸ್ಥಳದಲ್ಲಿ ಅವರು ವ್ಯಾಪಾರ ಮಾಡಬಹುದು. ಗ್ರಾಹಕರು ಕೂಡ ಅಲ್ಲಿಗೆ ಹೋಗಿ ತಮಗೆ ಬೇಕಾದ್ದನ್ನು ಖರೀದಿಸಬಹುದು. ಹೀಗಾದರೆ ಜನರ ಓಡಾಟಕ್ಕೆ ಅನುಕೂಲವಾಗಲಿದೆ’ ಎನ್ನುತ್ತಾರೆ ಸಾರ್ವಜನಿಕರು.

ಅನುಕೂಲಕರ ಜಾಗ ಗುರುತಿಸಿ: ‘ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ನಮಗೂ ಇಷ್ಟ ಇಲ್ಲ. ಆದರೆ, ಅಂಗಡಿಗಳಿಗೆ ಬಾಡಿಗೆ ಕೊಟ್ಟು ವ್ಯಾಪಾರ ಮಾಡುವಷ್ಟು ಶಕ್ತಿ ನಮಗಿಲ್ಲ. ಈ ವ್ಯಾಪಾರದಿಂದ ಆದ ಸಂಪಾದನೆಯಲ್ಲೇ ಜೀವನ ನಡೆಸುತ್ತಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳು ನಗರ ಅಥವಾ ಪಟ್ಟಣದ ಮಧ್ಯಭಾಗದಲ್ಲಿ, ಅಂದರೆ ಗ್ರಾಹಕರು ಹೆಚ್ಚು ಇರುವ ಕಡೆಗಳಲ್ಲಿ ಜಾಗ ತೋರಿಸಿದರೆ, ನಾವು ಅಲ್ಲಿಯೇ ವ್ಯಾಪಾರ ಮಾಡುತ್ತೇವೆ. ನಗರದಿಂದ ದೂರ ಜಾಗ ಗುರುತಿಸಿದರೆ ಹೋಗುವುದು ಹೇಗೆ? ಅಲ್ಲಿ ವ್ಯಾಪಾರವೇ ಆಗುವುದಿಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಹೇಳುತ್ತಾರೆ ಬೀದಿ ಬದಿ ಆಹಾರ ಮಳಿಗೆ ಇಟ್ಟುಕೊಂಡವರು.

ಗುಣಮಟ್ಟದ ಖಾತ್ರಿ ಇಲ್ಲ: ರಸ್ತೆ ಬದಿಗಳಲ್ಲಿರುವ ಆಹಾರ ಮಳಿಗೆಗಳಲ್ಲಿ ಸಿಗುವ ಆಹಾರದ ಗುಣಮಟ್ಟದ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಕಡಿಮೆ ದರದಲ್ಲಿ ಆಹಾರ ಪದಾರ್ಥಗಳನ್ನು ನೀಡಬೇಕಾದ ಅನಿವಾರ್ಯತೆಗೆ ಸಿಲುಕಿರುವ ವ್ಯಾಪಾರಿಗಳು ಯಾವ ರೀತಿಯ ಅಡುಗೆ ಎಣ್ಣೆ, ಇತರ ವಸ್ತುಗಳನ್ನು ಬಳಸುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಆಹಾರ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡಬೇಕು ಎಂಬುದು ನಿಯಮ. ಆದರೆ, ಅದು ಪಾಲನೆಯಾಗುತ್ತಿಲ್ಲ ಎಂಬ ದೂರುಗಳೂ ಇವೆ.

ಜನರು, ವ್ಯಾಪಾರಿಗಳು ಏನಂತಾರೆ?

ಆಡಳಿತ ಕ್ರಮ ಕೈಗೊಳ್ಳಲಿ
ದಿನದಿಂದ ದಿನಕ್ಕೆ ನಗರ, ಪಟ್ಟಣ, ಹೋಬಳಿ ಕೇಂದ್ರಗಳ ಪಾದಚಾರಿ ಮಾರ್ಗಗಳಲ್ಲಿ ತಳ್ಳುಗಾಡಿಗಳು ಹೆಚ್ಚಾಗುತ್ತಿವೆ. ಇದರಿಂದ ದಾರಿ ಹೋಕರಿಗೆ ತೊಂದರೆಯಾಗುತ್ತಿದೆ. ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಅವಕಾಶವಿಲ್ಲದಂತಾಗಿದೆ. ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿ ಸಂಚರಿಸುವುದರಿಂದ ಅಪಘಾತಗಳು ಉಂಟಾಗುತ್ತವೆ. ಇದನ್ನು ತಪ್ಪಿಸಲು ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕು.
-ಶ್ರೇಯಸ್, ಸಂತೇಮರಹಳ್ಳಿ

ಬಾಡಿಗೆಗೆ ಕೊಡಲಿ
ಸಂತೇಮರಹಳ್ಳಿಯಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು ಅಂಗಡಿ ಮಳಿಗೆಗಳಿವೆ. ಇವುಗಳನ್ನು ಬಾಡಿಗೆಗೆ ನೀಡಿಲ್ಲ. ಇವುಗಳಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟರೆ ರಸ್ತೆ ಬದಿ ವ್ಯಾಪಾರಸ್ಥರು ಕಡಿಮೆಯಾಗುತ್ತಾರೆ.
-ಯೋಗೇಶ್, ಹೊಂಗನೂರು

ಪಾದಚಾರಿ ಮಾರ್ಗಗಳೇ ಇಲ್ಲ
ಕೆಲವೆಡೆ ಪಾದಚಾರಿ ಮಾರ್ಗ ಇನ್ನೂ ನಿರ್ಮಾಣವಾಗಿಲ್ಲ. ಇಂತಹ ಕಡೆ ಹಣ್ಣು, ತರಕಾರಿ ವ್ಯಾಪಾರ ಜೋರಾಗಿ ನಡೆಯುತ್ತದೆ. ಪಾದಚಾರಿಗಳಿಗೆ ದಾರಿ ಬಿಟ್ಟು ಕೆಲವರು ಟೀ ಅಂಗಡಿ ಮತ್ತುತಳ್ಳುಗಾಡಿಯಲ್ಲಿ ತಿಂಡಿ ವ್ಯಾಪಾರ ನಡೆಸುವವರೂ ಇದ್ದಾರೆ. ಹಾಗಾಗಿ, ಸಾರ್ವಜನಿಕರಿಗೆಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ.
-ಮಲ್ಲಿಕಾರ್ಜುನ, ಬಳೆಪೇಟೆ, ಯಳಂದೂರು

ಶುದ್ಧ ಆಹಾರ ಪೂರೈಕೆ ಆಗಲಿ
ಬಹುತೇಕ ಹೋಟೆಲ್ ವ್ಯಾಪಾರಿಗಳು ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ. ಶುದ್ಧನೀರುಮತ್ತು ಆಸನ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಪಟ್ಟಣದ ಆರೋಗ್ಯ ನಿರೀಕ್ಷಕರು ಫುಟ್‌ಪಾತ್‌ ವ್ಯಾಪಾರಿಗಳ ತಪಾಸಣೆ ಮಾಡುತ್ತಿಲ್ಲ. ಉತ್ತಮಶುಚಿ-ರುಚಿ ಆಹಾರ ಪೂರೈಕೆಗೆ ಹೆಚ್ಚಿನ ಕಾಳಜಿ ವಹಸಿಬೇಕಿದೆ. ಈ ವಿಚಾರವಾಗಿ ಪಟ್ಟಣಪಂಚಾಯಿತಿ ಆಡಳಿತ ಕಾಳಜಿ ತೋರಬೇಕು.
-ರೇವಣ್ಣ, ಯಳಂದೂರು

ಜೀವನಕ್ಕೆ ಆಧಾರ
ನಾವು 10 ವರ್ಷಗಳಿಂದಲೂ ಬೀದಿ ಬದಿಯಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಇದು ಬಿಟ್ಟರೆ ನಮ್ಮ ಬದುಕಿಗೆ ಬೇರೆ ಆಧಾರವೇ ಇಲ್ಲ.
-ಪ್ರದೀಪ್,ಹೋಟೆಲ್ ವ್ಯಾಪಾರಿ, ಕೊಳ್ಳೇಗಾಲ

ಸ್ಥಳ ನಿಗದಿ ಮಾಡಿ
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗಾಗಿ ಸೂಕ್ತ ಸ್ಥಳ ನಿಗದಿಪಡಿಸಬೇಕು. ಇದರಿಂದ ಪಾದಚಾರಿಗಳಿಗೂ ಅನುಕೂಲವಾಗಲಿದೆ.
–ಮಾಯೇಗೌಡ, ಹಣ್ಣಿನ ವ್ಯಾಪಾರಿ, ಹನೂರು

ಪಟ್ಟಣದ ಮಧ್ಯದಲ್ಲಿ ಅವಕಾಶ ಬೇಕು
ಪಟ್ಟಣದ ಹೊರಗಿರುವ ಫುಟ್‌ಪಾತ್‌ ಮಳಿಗೆಗಳಲ್ಲಿ ಅಂಗಡಿ ತೆರೆದರೆ ಗ್ರಾಹಕರು ಬರುವುದಿಲ್ಲ. ಹಾಗಾಗಿ ಯಾವ ವ್ಯಾಪಾರಿಗಳೂ ಅಲ್ಲಿಗೆ ಹೋಗಲು ಇಚ್ಚಿಸುತ್ತಿಲ್ಲ. ಪಟ್ಟಣದ ಮಧ್ಯೆ ಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೆ ಉಪಯೋಗ ಆಗುತ್ತದೆ.
–ಮಾದಪ್ಪ, ವ್ಯಾಪಾರಿ, ಗುಂಡ್ಲುಪೇಟೆ

ಅಧಿಕಾರಿಗಳು ಹೇಳುವುದೇನು?
ದೂರು ಬಂದರೆ ಕ್ರಮ

ಫುಟ್‌ಪಾತ್‌ ಅಂಗಡಿಗಳಲ್ಲಿ ಊಟ, ತಿಂಡಿ ಸೇರಿದಂತೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರು ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ. ದೂರುಗಳು ಬಂದರೆ ಕ್ರಮ ವಹಿಸಲಾಗುತ್ತದೆ.
–ಹೇಮಂತ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಗುಂಡ್ಲುಪೇಟೆ

ಹೆಚ್ಚು ಆದಾಯ ಇಲ್ಲ
ನಗರಸಭೆಯ ವ್ಯಾಪ್ತಿಯಲ್ಲಿರುವ ಬೀದಿ ಬದಿ ಮಳಿಗೆಗಳಿಂದ ತೆರಿಗೆ ರೂಪದಲ್ಲಿ ಪ್ರತಿ ದಿನ ₹ 10 ಪಡೆಯುತ್ತೇವೆ. ಆಗಿದ್ದರೂ, ನಗರಸಭೆಗೆ ಆದಾಯ ಬರುವುದಿಲ್ಲ. ಈ ವಿಚಾರವಾಗಿ ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ.
–ಭೂಮಿಕಾ, ಆರೋಗ್ಯ ನಿರೀಕ್ಷಕಿ, ಕೊಳ್ಳೇಗಾಲ ನಗರಸಭೆ

ಆಹಾರ ಗುಣಮಟ್ಟ ಪರಿಶೀಲನೆ
ಬೀದಿ ಬದಿ ಹೋಟೆಲ್‌ ಸೇರಿದಂತೆ ಇತರ ಆಹಾರ ಮಳಿಗೆಗಳಲ್ಲಿ ಸಿಗುವ ಆಹಾರ ಗುಣಮಟ್ಟದ ಬಗ್ಗೆ ಗಮನ ನೀಡಲಾಗಿದೆ. ಆಹಾರ ಇಲಾಖೆಯ ಇನ್ಸ್‌ಪೆಕ್ಟರ್‌ಗಳು ಇವುಗಳ ಮೇಲೆ ಗಮನ ಹರಿಸುತ್ತಿದ್ದಾರೆ. ವಾರಕ್ಕೊಮ್ಮೆ ಪರಿಶೀಲನಾ ಕಾರ್ಯವನ್ನೂ ಮಾಡುತ್ತಿದ್ದಾರೆ. ನಾವು ಕೂಡ ಕೂಡ ಆಗಾಗ ಪರಿಶೀಲನೆ ನಡೆಸುತ್ತಿರುತ್ತೇವೆ.
–ಶರವಣ, ಹಿರಿಯ ಆರೋಗ್ಯ ನಿರೀಕ್ಷಕ, ಚಾಮರಾಜನಗರ ನಗರಸಭೆ

ನೆಲ ಶುಲ್ಕ ವಸೂಲಾತಿಗೆ ಚಿಂತನೆ
ಬೀದಿ ಬದಿ ವ್ಯಾಪಾರಿಗಳಿಂದ ಸದ್ಯ ನಾವು ಯಾವುದೇ ತೆರಿಗೆ ವಸೂಲಿ ಮಾಡುತ್ತಿಲ್ಲ. ಇದರಿಂದ ನಗರಸಭೆಯ ಆದಾಯಕ್ಕೆ ತೊಂದರೆಯಾಗಿರುವುದು ನಿಜ. ಜಿಲ್ಲಾ ಕೇಂದ್ರದಲ್ಲಿ ಫುಡ್‌ ಜೋನ್‌ (ಆಹಾರ ವಲಯ) ಸ್ಥಾಪಿಸುವ ಯೋಜನೆಯನ್ನು ಈ ಹಿಂದೆಯೇ ರೂಪಿಸಲಾಗಿದೆ. ಆದರೆ, ಅದಿನ್ನೂ ಜಾರಿಗೆ ಬಂದಿಲ್ಲ. ಹಾಗಾಗಿ, ಅಲ್ಲಲ್ಲಿ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ.

ಅವರಿಗೆ ವ್ಯಾಪಾರ ಮಾಡುವುದಕ್ಕೆ ಸ್ಥಳ ಗುರುತಿಸಿ, ಅಲ್ಲಿ ಎಲ್ಲ ವ್ಯವಸ್ಥೆಗಳನ್ನೂ ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆ ಬಳಿಕ ಅವರಿಗೆ ನೆಲ ಶುಲ್ಕ ವಿಧಿಸಲು ಯೋಚಿಸಲಾಗಿದೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾವ ಇಟ್ಟು, ಅದಕ್ಕೆ ಅಂಗೀಕಾರ ಪಡೆಯಲಾಗುವುದು.
– ಕರಿಬಸವಯ್ಯ, ಆಯುಕ್ತ, ಚಾಮರಾಜನಗರ ನಗರಸಭೆ

*
ನಿರ್ವಹಣೆ: ಸೂರ್ಯನಾರಾಯಣ ವಿ.
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಅವಿನ್‌ ಪ‍್ರಕಾಶ್‌ ವಿ., ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT