ಶುಕ್ರವಾರ, ಫೆಬ್ರವರಿ 21, 2020
16 °C
ನಲ್ಲೂರುಮೋಳೆ: ಮಲ್ಲಿಗಮ್ಮ ದೇವಸ್ಥಾನ ಉದ್ಘಾಟಿಸಿದ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ ವಿರುದ್ಧ ಲಂಚ ಪಡೆದ ಆರೋಪ ಪ್ರಸ್ತಾಪ

ಸುಳ್ಳು ಪ್ರಕರಣದಲ್ಲಿ ಸಿಕ್ಕಿಸುವ ಯತ್ನ ನಡೆದಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಹ್ಯಾಟ್ರಿಕ್‌ ಹೀರೊ ಪುಟ್ಟರಂಗಶೆಟ್ಟಿ ಕೆಟ್ಟ ಹೆಸರು ತಗೊಂಡಿಲ್ಲ. ಸುಳ್ಳು ಪ್ರಕರಣದಲ್ಲಿ ಅವರನ್ನು ಸಿಕ್ಕಿ ಹಾಕಿಸುವ ಪ್ರಯತ್ನ ನಡೆದಿತ್ತು. ಸಚಿವ ಸ್ಥಾನದಿಂದಲೂ ತೆಗೆಯಬೇಕು ಎಂದು ಕೆಲವರು ಹೇಳಿದ್ದರು. ಅದಕ್ಕೆ ನಾನು ಅವಕಾಶ ಕೊಡಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು. 

ತಾಲ್ಲೂಕಿನ ನಲ್ಲೂರುಮೋಳೆಯಲ್ಲಿ ಮಲ್ಲಿಗಮ್ಮ ದೇವಸ್ಥಾನ ಹಾಗೂ ಗೋಪುರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಟ್ಟರಂಗಶೆಟ್ಟಿ ಸಚಿವರಾಗಿದ್ದಾಗ ವಿಧಾನಸೌಧದಲ್ಲಿ ಅವರ ಕಚೇರಿಯ ಸಿಬ್ಬಂದಿ ಕೈಯಲ್ಲಿ ನಗದು ಸಿಕ್ಕಿದ್ದ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. 

‘ಸುಳ್ಳು ಪ್ರಕರಣ ದಾಖಲಾದಾಗ ನಾನೇ ಮಧ್ಯಪ್ರವೇಶಿಸಿ, ಅದೆಲ್ಲ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಪುಟ್ಟರಂಗಶೆಟ್ಟಿ ಐದು ವರ್ಷ ಮಂತ್ರಿಯಾಗಬಹುದು ಎಂದು ಅಂದುಕೊಂಡಿದ್ದೆ. ಅದು ಆಗಲಿಲ್ಲ’ ಎಂದರು. 

‘2008ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸಿ.ಗುರುಸ್ವಾಮಿ ಅವರು ಸ್ಪರ್ಧಿಸಲು ಬಯಸಿದ್ದರು. ಶ್ರೀನಿವಾಸ ಪ್ರಸಾದ್‌ ಕೂಡ ಅವರನ್ನೇ ಬೆಂಬಲಿಸಿದ್ದರು. ಆದರೆ, ಸಮಾಜದಲ್ಲಿ ಹಿಂದುಳಿದಿರುವ ಉಪ್ಪಾರ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂಬುದು ನನ್ನ ನಿಲುವು ಆಗಿತ್ತು. ಸಿ.ಗುರುಸ್ವಾಮಿ ಹಾಗೂ ಶ್ರೀನಿವಾಸ ಪ್ರಸಾದ್‌ ಅವರಲ್ಲಿ, ನಾನು ಪುಟ್ಟರಂಗಶೆಟ್ಟಿ ಅವರ ಹೆಸರನ್ನೇ ಶಿಫಾರಸು ಮಾಡುವುದಾಗಿ ನೇರವಾಗಿ ಹೇಳಿದ್ದೆ. ಮೊದಲ ಬಾರಿಯೇ ಜನರು ಅವರಿಗೆ ಆಶೀರ್ವಾದ ಮಾಡಿಯೇ ಬಿಟ್ಟರು. ಈಗ ಅವರು ಹ್ಯಾಟ್ರಿಕ್‌ ಹೀರೊ. ಮೂರು ಬಾರಿ ಗೆದ್ದಿದ್ದಾರೆ. ಮಂತ್ರಿಯೂ ಆಗಿದ್ದಾರೆ’ ಎಂದು ಹೇಳಿದರು. 

‘ವಿಧಾನಸಭೆಗೆ ಎಲ್ಲ ಸಮುದಾಯದವರೂ ಆರಿಸಿ ಬಂದರೆ ಅದು ಅನುಭವ ಮಂಟಪವಾಗುತ್ತದೆ. ಹಿಂದುಳಿದ ಸಮುದಾಯದವರ ಸಮಸ್ಯೆಗಳನ್ನು ಹೇಳಲೂ ಜನರು ಬೇಕಲ್ಲವೇ? ಅದಕ್ಕಾಗಿ ಆಯಾ ಸಮುದಾಯಗಳ ಪ್ರತಿನಿಧಿಗಳು ವಿಧಾನಸಭೆಯಲ್ಲಿ ಇರಬೇಕು’ ಎಂದು ತಿಳಿಸಿದರು.

ಶಿಕ್ಷಣ ಮುಖ್ಯ

‘ಉಪ್ಪಾರ ಸಮುದಾಯ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾವಂತರಾಗದಿದ್ದರೆ ಮುಖ್ಯವಾಹಿನಿಗೆ ಬರುವುದಕ್ಕೆ ಸಾಧ್ಯವಿಲ್ಲ. ಬಡತನ ಇದ್ದರೂ ₹2 ಕೋಟಿ ವೆಚ್ಚದ ಭವ್ಯ ದೇವಾಲಯ ಕಟ್ಟಿದ್ದೀರಿ. ಬೇಡ ಎನ್ನುವುದಿಲ್ಲ. ಆದರೆ, ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ತಪ್ಪಿಸಬೇಡಿ’ ಎಂದರು. 

‘ಸಾವಿರಾರು ವರ್ಷಗಳಿಂದ ಶೂದ್ರ ವರ್ಗದ ಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗಿದೆ. ಹಾಗಾಗಿ ಇನ್ನೂ ತಾರತಮ್ಯ ಹೋಗಿಲ್ಲ. ಮೇಲು–ಕೀಳು, ತಾರತಮ್ಯ ದೂರವಾಗಿ, ಸಮಾನತೆ ಬರಬೇಕು ಎಂದು ಬಸವಣ್ಣ 900 ವರ್ಷಗಳ ಹಿಂದೆಯೇ ಹೇಳಿದ್ದರು. ಅದು ಇನ್ನೂ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಮುದಾಯಗಳಿಗೂ, 6.5 ಕೋಟಿ ಜನರಿಗೂ ಒಂದಿಲ್ಲೊಂದು ಕಾರ್ಯಕ್ರಮ ಕೊಟ್ಟಿದ್ದೇನೆ. ಉಪ್ಪಾರ ಸಮುದಾಯದವರು ಕೇಳಿದ್ದನ್ನೆಲ್ಲ ಕೊಟ್ಟಿದ್ದೇನೆ. ಮತ್ತೊಮ್ಮೆ ಆಗಿದ್ದರೂ ಕೊಡುತ್ತಿದ್ದೆ’ ಎಂದರು.

ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಮಾತನಾಡಿ, ‘ಹಿಂದುಳಿದ ಉಪ್ಪಾರ ಸಮುದಾಯ ಮುಂದೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಸಮುದಾಯದವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು’ ಎಂದು ಕರೆ ನೀಡಿದರು. 

‘ನಿಮ್ಮ ಸಮುದಾಯದಲ್ಲಿ ಬಾಲ್ಯ ವಿವಾಹ ಸೇರಿದಂತೆ ಹಲವು ಮೌಢ್ಯ ಆಚರಣೆಗಳಿವೆ. ಅವುಗಳನ್ನು ದೂರ ಮಾಡಲು ಸಮಾಜದ ಯಜಮಾನರು ಗಮನ ಹರಿಸಬೇಕು’ ಎಂದು ಹೇಳಿದರು. 

ಸರಗೂರಿನ ಅಯ್ಯನವರಾದ ಚಿನ್ನಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮರಿಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ಎ.ಆರ್‌.ಕೃಷ್ಣಮೂರ್ತಿ, ಕಾಗಲವಾಡಿ ಶಿವಣ್ಣ, ಬಾಲರಾಜ್‌, ಗಣೇಶ್‌ ಪ್ರಸಾದ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಯೋಗೇಶ್‌, ಸದಾಶಿವಮೂರ್ತಿ ಇದ್ದರು.  

ಸಿದ್ದರಾಮಯ್ಯಗೆ ಬಹುಪರಾಕ್‌

ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಉಪ್ಪಾರ ಮಹಾಸಂಸ್ಥಾನ ಭಗೀರಥ ಪೀಠಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರನ್ನು ಕೊಂಡಾಡಿದರು. 

‘ನಾನು ಮೂರು ಬಾರಿ ಶಾಸಕನಾಗಿ, ಸಚಿವನಾಗಲೂ ಸಿದ್ದರಾಮಯ್ಯ ಅವರು ಕಾರಣೀಭೂತರು. ಭಗೀರಥ ಜಯಂತಿ, ಉಪ್ಪಾರ ಅಭಿವೃದ್ಧಿ ನಿಗಮ ಸೇರಿದಂತೆ ಸಮಾಜಕ್ಕೆ ಅನುಕೂಲವಾಗುವಂತಹ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇನ್ನೊಮ್ಮೆ ಮುಖ್ಯಮಂತ್ರಿಯಾದರೆ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡುವುದಾಗಿ ಅವರು ಹೇಳಿದ್ದರು. ಆದರೆ, ಅದು ಆಗಲಿಲ್ಲ’ ಎಂದರು.

ಧ್ರುವನಾರಾಯಣ ಮಾತನಾಡಿ, ‘ಉಪ್ಪಾರ ಸಮುದಾಯಕ್ಕೆ ಸಿದ್ದರಾಮಯ್ಯನವರು ನೀಡಿದ ಕೊಡುಗೆ ಅಪಾರ. ಸಮುದಾಯ ಮುಂದಿಟ್ಟಿದ್ದ ಬೇಡಿಕೆಯನ್ನೆಲ್ಲ ಅವರು ಈಡೇರಿಸಿದ್ದರು. ಜಿಲ್ಲೆಯ ಅಭಿವೃದ್ಧಿಗೂ ಅವರು ದುಡಿದಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ 12 ಬಾರಿ ಬಂದು, ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ದೂರ ಮಾಡಿದರು. ಜಿಲ್ಲೆಗೆ ₹3,000 ಕೋಟಿಗೂ ಹೆಚ್ಚು ಅನುದಾನ ನೀಡಿದ್ದರು. ಆ ಮೂಲಕ ‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿಯನ್ನು ದೂರ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ಶ್ಲಾಘಿಸಿದರು. 

ಸಚಿವ ಸಂಪುಟ ಅನುಭವ ಮಂಟಪ

ಉಪ್ಪಾರ ಮಹಾ ಸಂಸ್ಥಾನ ಭಗೀರಥ ಪೀಠಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ನುಡಿದಂತೆ ನಡೆದ ಮುಖ್ಯಮಂತ್ರಿ ಯಾರಾದರೂ ಇದ್ದರೆ, ಅದು ಸಿದ್ದರಾಮಯ್ಯ. ಅವರು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರ ಸಚಿವ ಸಂಪುಟವು ಬಸವಣ್ಣನವರ ಅನುಭವ ಮಂಟಪದಂತೆ ಇತ್ತು. ತಮ್ಮ ಸಂಪುಟದಲ್ಲಿ ಎಲ್ಲ ವರ್ಗದವರಿಗೆ ಅವಕಾಶ ನೀಡಿದ್ದರು. ಎ‌ಲ್ಲ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರು. ಆಡಳಿತದಲ್ಲಿ ಎಲ್ಲ ಸಮುದಾಯಕ್ಕೂ ಪ್ರಾಮುಖ್ಯ ನೀಡಿದ್ದರು’ ಎಂದರು.

‘ನಮ್ಮ ಮನವಿಗೆ ಸ್ಪಂದಿಸಿ ಭಗೀರಥ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ತೀರ್ಮಾನ ತೆಗೆದುಕೊಂಡಿದ್ದರು. ಉಪ್ಪಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರು. ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಉಪ್ಪಾರ ಸಮುದಾಯದ ಕುಲಪತಿಯನ್ನು ನೇಮಿಸಿದ್ದರು. ಕೆಪಿಎಸ್‌ಸಿಗೆ ಸಮುದಾಯದವರನ್ನು ಸದಸ್ಯರನ್ನಾಗಿ ಮಾಡಿದ್ದರು. ನಮ್ಮ ಮಠಕ್ಕೆ ₹4 ಕೋಟಿ ಅನುದಾನವನ್ನೂ ನೀಡಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು