ಶನಿವಾರ, ಮಾರ್ಚ್ 28, 2020
19 °C
ಬರಲೇ ಇಲ್ಲ ₹2 ಕೋಟಿ ಬಜೆಟ್‌ ಅನುದಾನ, ಕರಗುತ್ತಿದೆ ಬೀದಿಗೆ ಬಿದ್ದ ಕಾರ್ಮಿಕರ ನಿರೀಕ್ಷೆ

ರೇಷ್ಮೆ ಕಾರ್ಖಾನೆ ಪುನಶ್ಚೇತನ: ಕಾಗದದ ಬರಹ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಇಲ್ಲಿನ ಸರ್ಕಾರಿ ರೇಷ್ಮೆ ಕಾರ್ಖಾನೆ ಪುನಶ್ಚೇತನ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ₹2 ಕೋಟಿ ಅನುದಾನ ಇನ್ನೂ ಬಂದಿಲ್ಲ. ಹಾಗಾಗಿ, ಕಾರ್ಖಾನೆ ಮತ್ತೆ ತೆರೆಯಬಹುದು ಎಂಬ ಆಸೆಯಲ್ಲಿದ್ದ ಕಾರ್ಮಿಕರ ನಿರೀಕ್ಷೆ ದಿನೇ ದಿನೇ ಕರಗಲು ಆರಂಭಿಸಿದೆ. 

ಒಂದು ಕಾಲದಲ್ಲಿ ಲಾಭದಾಯಕವಾಗಿ ನಡೆಯುತ್ತಿದ್ದ ರೇಷ್ಮೆ ಕಾರ್ಖಾನೆ ಸ್ಥಗಿತಗೊಂಡು 10 ವರ್ಷಗಳು ಕಳೆಯುತ್ತಾ ಬಂದಿದೆ. ಕಾರ್ಖಾನೆ ನಂಬಿ ಜೀವನ ನಡೆಸುತ್ತಿದ್ದ ನೂರಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು ಎಂಬ ಅವರ ಕೂಗು ಇನ್ನೂ ಆಡಳಿತ ನಡೆಸುತ್ತಿರುವವರ ಕಿವಿಗೆ ಬಿದ್ದಿಲ್ಲ. ಕಳೆದ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಹಣ ಬಂದಿಲ್ಲ. ಈ ವರ್ಷದ ಬಜೆಟ್‌ ಹತ್ತಿರ ಬರುತ್ತಿದೆ. ಈ ವರ್ಷವಾದರೂ ಸರ್ಕಾರ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬಹುದು ಎಂಬ ಕ್ಷೀಣ ಭರವಸೆ ಕಾರ್ಮಿಕರಲ್ಲಿದೆ. 

ಬ್ರಿಟಿಷರು ಸ್ಥಾಪಿಸಿದ್ದ ಕಾರ್ಖಾನೆ

ಈ ಭಾಗದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದ್ದುದರಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಆಡಳಿತ ಇಲ್ಲಿ ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆ ಸ್ಥಾ‍ಪಿಸಿತ್ತು.

ಸ್ಥಳೀಯವಾಗಿ ಉತ್ಪಾದನೆಯಾಗುವ ರೇಷ್ಮೆ ಗೂಡು ಸೇರಿದಂತೆ, ರಾಮನಗರ, ಕೊಳ್ಳೇಗಾಲ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ರೇಷ್ಮೆಗೂಡು ಮಾರುಕಟ್ಟೆಗಳಿಂದಲೂ ರೇಷ್ಮೆಗೂಡುಗಳನ್ನು ಖರೀದಿಸಿ ಈ ಕಾರ್ಖಾನೆಯಲ್ಲಿ ನೂಲು ಬಿಚ್ಚಿಸಲಾಗುತಿತ್ತು. ಕಾರ್ಖಾನೆಯಲ್ಲಿ 300ರಿಂದ 400 ಮಂದಿ ಕಾರ್ಮಿಕರು ನೂಲು ಬಿಚ್ಚುವುದು ಹಾಗೂ ಕಾರ್ಖಾನೆ ರಕ್ಷಣೆಗೆ ದುಡಿಯುತ್ತಿದ್ದರು. ಬಹುಪಾಲು ಮಹಿಳಾ ಕಾರ್ಮಿಕರೇ ಹೆಚ್ಚಾಗಿದ್ದರು.

ನಿರ್ಲಕ್ಷ್ಯಕ್ಕೆ ಬಲಿ

ಸ್ಥಳೀಯವಾಗಿ ರೇಷ್ಮೆ ಕೃಷಿಗೆ ಪ್ರಾಮುಖ್ಯ ಕಡಿಮೆಯಾಗಿದ್ದು, ರಾಜ್ಯ ಸರ್ಕಾರದ ನಿರಂತರ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂತು. ಇಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕಾರ್ಖಾನೆ ನಡೆದು ನೂಲು ಬಿಚ್ಚಿದರೇ ಮಾತ್ರ ವೇತನ ಸಿಗುತ್ತಿತ್ತು. 

ಬದಲಾದ ಸರ್ಕಾರಗಳ ರೇಷ್ಮೆ ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸಿ ಕಾರ್ಖಾನೆ ಪರಿಶೀಲಿಸಿ ಮತ್ತೆ ಆರಂಭಿಸು ವುದಾಗಿ ಭರವಸೆ ನೀಡಿ ಹೋಗುತ್ತಿದ್ದರೇ ವಿನಾ, ಇದುವರೆಗೆ ಯಾವ ಸಚಿವರಾಗಲಿ ಸರ್ಕಾರವಾಗಲಿ ಕ್ರಮ ತೆದುಕೊಳ್ಳಲಿಲ್ಲ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಮತ್ತೆ ಕಾರ್ಖಾನೆ ಆರಂಭಿಸಿ, ಉದ್ಯೋಗ ನೀಡಿ ಎಂದು ಆಗ್ರಹಿಸಿ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಆಯ್ದ ಕಾರ್ಮಿಕರನ್ನು ರೇಷ್ಮೆ ಇಲಾಖೆಯ ‘ಡಿ’ ಗ್ರೂಪ್ ನೌಕರರನ್ನಾಗಿ ಕೆಲವು ಕಡೆ ನಿಯೋಜಿಸಲಾಯಿತು.

ಹಲವು ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಯಂತ್ರೋಪಕರಣಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಕಾರ್ಖಾನೆ ದುಃಸ್ಥಿತಿಗೆ ಬಂದು ನಿಂತಿದೆ. ಗೋಡೆಗಳು ಕುಸಿದು ಬೀಳುತ್ತಿವೆ. ಸುಸ್ಥಿತಿಯಲ್ಲಿರುವ ಯಂತ್ರೋಪಕರಣಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಸಾವಿರಾರು ಜನಕ್ಕೆ ಉದ್ಯೋಗ ನೀಡಿದ್ದ ಕಾರ್ಖಾನೆ ಇಂದು ಅನಾಥವಾಗಿ ನಿಂತಿದೆ. ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಗೂ ನೌಕರರಷ್ಟೇ ಇಂದು ಕಾರ್ಖಾನೆಯ ರಕ್ಷಣೆಯಲ್ಲಿದ್ದಾರೆ.

ಈಗಿನ ಸರ್ಕಾರವಾದರೂ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕರು ಆಗ್ರಹಿಸುತ್ತಾರೆ.

₹10 ಕೋಟಿಗೆ ಮನವಿ: ಶಾಸಕ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು, ‘ಕಳೆದ ಸರ್ಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ₹2 ಕೋಟಿಯನ್ನು ಈಗಿನ ಸರ್ಕಾರ ತಡೆ ಹಿಡಿದಿದೆ. ಕೊಳ್ಳೇಗಾಲ ಹಾಗೂ ಸಂತೇಮರಹಳ್ಳಿಯ ರೇಷ್ಮೆ ಕಾರ್ಖಾನೆ ಪುನಶ್ಚೇತನಗೊಳಿಸಲು ಈ ಬಜೆಟ್‍ನಲ್ಲಿ ₹10 ಕೋಟಿ ಕೇಳಿದ್ದೇನೆ. ಕೊಡುವ ನಿರೀಕ್ಷೆ ಇದೆ. ಆ ಹಣದಲ್ಲಿ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು