ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಚಾಮರಾಜನಗರ ಜಿಲ್ಲೆಯಲ್ಲಿ ಸರಳ ರಾಜ್ಯೋತ್ಸವ

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ
Last Updated 22 ಅಕ್ಟೋಬರ್ 2020, 15:27 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್-19, ಉತ್ತರ ಕರ್ನಾಟಕದ ನೆರೆಹಾವಳಿ ಕಾರಣದಿಂದ ಜಿಲ್ಲೆಯಲ್ಲಿ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಆರಂಭದಲ್ಲಿ ಕನ್ನಡ ಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ‘ಕೋವಿಡ್ ಕಾರಣದಿಂದ ಜನರು ಸಂಕಷ್ಟದಲ್ಲಿದ್ದಾರೆ. ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಕೂಡ ತೊಂದರೆಗೆ ಒಳಗಾಗಿದ್ದಾರೆ. ಇಂತಹ ಕಷ್ಟಕಾಲದಲ್ಲಿ ಅವರ ನೆರವಿಗೆ ನಿಲ್ಲಬೇಕಿದೆ. ಹೀಗಾಗಿ ,ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಸರಳವಾಗಿ ಆಚರಿಸೋಣ. ಇದಕ್ಕೆ ಮಾಡುವ ವೆಚ್ಚವನ್ನು ಕಡಿಮೆ ಮಾಡಿ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಬೇಕು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

‘ಎಸ್ಸೆಸ್ಸೆಲ್ಸಿ,ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಬೇಕು. ಕೋವಿಡ್‌ ತಡೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಬೇಕು’ ಎಂದು ಸಲಹೆ ನೀಡಿದರು. ಗೌರವ ಸಲ್ಲಿಸಬೇಕು ಎಂಬ ಸಲಹೆ ಅಭಿಪ್ರಾಯಗಳನ್ನು ಮುಖಂಡರು ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಎಲ್ಲರ ಅಭಿಪ್ರಾಯದಂತೆ ಈ ಬಾರಿ ಸರಳವಾಗಿ, ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಣೆ ಮಾಡಲಾಗುವುದು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವನ್ನು ಸರಳವಾಗಿ ಆಚರಿಸೋಣ. ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸರಳ ಕಾರ್ಯಕ್ರಮ ಆಯೋಜಿಸಿ ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸೋಣ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು’ ಎಂದರು.

ಗ್ರಾಮ ಪಂಚಾಯತಿ, ಶಾಲೆಗಳು, ಬ್ಯಾಂಕುಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕಡ್ಡಾಯವಾಗಿ ಮಾಡಬೇಕೆಂಬ ಮುಖಂಡರ ಸಲಹೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ‘ಎಲ್ಲ ಗ್ರಾಮ ಪಂಚಾಯಿತಿಗಳು, ಬ್ಯಾಂಕುಗಳಲ್ಲಿ ರಾಜ್ಯೋತ್ಸವ ಆಚರಿಸಲು ನಿರ್ದೇಶನ ಹೊರಡಿಸಲಾಗುವುದು. ವಿದ್ಯಾರ್ಥಿಗಳನ್ನು ಬಿಟ್ಟು ಶಿಕ್ಷಕರು ಶಾಲೆಗಳಲ್ಲಿ ರಾಜ್ಯೋತ್ಸವ ಆಚರಿಸುವಂತೆ ಸೂಚಿಸಲಾಗುವುದು’ ಎಂದರು.

ಕನ್ನಡ ತಾತ್ಸಾರ ಸಹಿಸುವುದಿಲ್ಲ:ಕನ್ನಡ ಅನುಷ್ಠಾನ ಸಂಪೂರ್ಣವಾಗಿ ಆಗದಿರುವ ಬಗ್ಗೆ, ವಿಶೇಷವಾಗಿ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸದೇ ಇರುವ ಕುರಿತು ಮುಖಂಡರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಆರ್. ರವಿ ಅವರು, ‘ಕನ್ನಡ ಬಳಕೆಗೆ ತಾತ್ಸಾರ ಮಾಡುವುದನ್ನು ಸಹಿಸಲಾಗುವುದಿಲ್ಲ. ಕನ್ನಡಕ್ಕೆ ಆದ್ಯತೆ ಇರಬೇಕು. ಕಚೇರಿಗಳಲ್ಲಿ ಎಲ್ಲ ವ್ಯವಹಾರವೂ ಕನ್ನಡದಲ್ಲೇ ಇರಬೇಕು’ ಎಂದರು.

ಕಲಾಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ, ಕನ್ನಡ ಭವನ, ಗಿರವಿ ಅಂಗಡಿಗಳ ಚೀಟಿಯಲ್ಲಿ ಕನ್ನಡ ಬಳಸದೇ ಇರುವುದು ಸೇರಿದಂತೆ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬೊಡೋಲೆ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಬಾಲರಾಜು, ಕಸಾಪ ಅಧ್ಯಕ್ಷ ವಿನಯ್, ಮುಖಂಡರಾದ ವೆಂಕಟರಮಣ (ಪಾಪು), ಚಾ.ರಂ.ಶ್ರೀನಿವಾಸಗೌಡ, ನಿಜದ್ವನಿ ಗೋವಿಂದರಾಜು, ಸುರೇಶ್‌ನಾಯಕ, ಜಿ. ಬಂಗಾರು, ಮಹದೇವಶೆಟ್ಟಿ, ಚಾ.ಗು. ನಾಗರಾಜು, ಆಲೂರು ನಾಗೇಂದ್ರ, ಕೆ. ವೀರಭದ್ರಸ್ವಾಮಿ, ಚಾ.ಹ. ಶಿವರಾಜು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT