ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗ್ರಾಮೀಣ ಸರ್ಕಾರಿ ಶಾಲೆಗಳೂ ಸ್ಮಾರ್ಟ್‌

ಜಿಲ್ಲಾ ಪಂಚಾಯಿತಿಯಿಂದ ಯೋಜನೆ: ಹನೂರಿನ 17 ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿ ಆರಂಭ
Last Updated 13 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ/ಹನೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳು ಆಧುನಿಕ ಮಾಹಿತಿ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಲುಜಿಲ್ಲಾ ಪಂಚಾಯಿತಿಯು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿಗಳನ್ನು ಆರಂಭಿಸುತ್ತಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ 20 ಶಾಲೆಗಳಲ್ಲಿ ಈಗಾಗಲೇ ಅನುಷ್ಠಾನಕ್ಕೆ ತರಲಾಗಿದ್ದು, ಹನೂರು ತಾಲ್ಲೂಕಿನಲ್ಲೇ 17 ಶಾಲೆಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಸ್ಮಾರ್ಟ್‌ ತರಗತಿಗೆ ಬೇಕಾದ ಉಪಕರಣಗಳನ್ನು ಅಳವಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಂದು ಸ್ಮಾರ್ಟ್‌ ತರಗತಿ ರೂಪಿಸಲು ₹ 1.10 ಲಕ್ಷದವರೆಗೆ ವೆಚ್ಚ ಮಾಡಲಾಗಿದೆ. ಇದರ ಅಡಿಯಲ್ಲಿ ಕಂಪ್ಯೂಟರ್‌, ಪ್ರೊಜೆಕ್ಟರ್‌, ಇಂಟರ್‌ನೆಟ್‌ ಸಂಪರ್ಕ, ಸ್ಮಾರ್ಟ್‌ ಬೋರ್ಡ್‌ಗಳನ್ನು ಪ್ರತಿ ಶಾಲೆಗೂ ಒದಗಿಸಲಾಗಿದೆ.

‘ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು. ಮುಂದೆ ಇನ್ನಷ್ಟು ಅತ್ಯಾಧುನಿಕ ಸ್ಮಾರ್ಟ್‌ ಉಪಕರಣಗಳನ್ನು ಬಳಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಅನಗತ್ಯ ಕಾಮಗಾರಿ ಮಾಡಿ ಹಣ ವ್ಯಯಿಸುವ ಬದಲು ಅದೇ ಅನುದಾನವನ್ನು ಶಿಕ್ಷಣಕ್ಕೆ ಬಳಸುವಂತೆ ಸಿಇಒ ಸೂಚಿಸಿದ್ದರು. ಅದರಂತೆ, ಮಕ್ಕಳ ಅನುಕೂಲಕ್ಕಾಗಿ ಸ್ಮಾರ್ಟ್‌ ತರಗತಿಯ ಯೋಜನೆ ರೂಪಿಸಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಶೈಕ್ಷಣಿಕವಾಗಿ ಕೊಂಚ ಮುಂದಿರುವ ಹನೂರು ತಾಲ್ಲೂಕಿನಿಂದ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ತಾಲ್ಲೂಕಿನಚಿಕ್ಕಮಾಲಾಪುರದ ಮೂರು ಶಾಲೆಗಳು,ಕುರಟ್ಟಿ ಹೊಸೂರು, ಸೂಳೇರಿಪಾಳ್ಯ ಹಾಗೂ ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಾ ಎರಡು, ಮಂಗಲ, ಲೊಕ್ಕನಹಳ್ಳಿ, ಬೈಲೂರು, ಪಿ.ಜಿ.ಪಾಳ್ಯ, ಎಲ್ಲೇಮಾಳ, ಶೆಟ್ಟಳ್ಳಿ, ರಾಮಾಪುರ ಪಂಚಾಯಿತಿಗಳ ತಲಾ ಒಂದು ಶಾಲೆಗಳು ಸೇರಿದಂತೆ ಒಟ್ಟು 11 ಗ್ರಾಮ ಪಂಚಾಯಿತಿಗಳ 17 ಶಾಲೆಯಲ್ಲಿ ಸ್ಮಾರ್ಟ್ ತಗರತಿ ಆರಂಭಿಸಲಾಗಿದೆ.

‘ಮೊದಲ ಹಾಗೂ ಎರಡನೇ ಹಂತದಲ್ಲಿ 25 ಗ್ರಾಮ ಪಂಚಾಯಿತಿಗಳ ಪೈಕಿ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಉಳಿದ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಮೂರು ಮತ್ತು ನಾಲ್ಕನೇ ಹಂತದಲ್ಲಿ ತರಗತಿ ಆರಂಭಿಸಲಾಗುವುದು. ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ತೆರೆಯುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.

‘ಪಠ್ಯಪುಸ್ತಕದಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಅದನ್ನು ಶಿಕ್ಷಕರು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಪಾಠ ಮಾಡುವ ಸಂದರ್ಭದಲ್ಲಿ ಅದನ್ನು ಪರದೆಯಲ್ಲಿ ತೋರಿಸಿ ಬೋಧಿಸುವುದರಿಂದ ಮಕ್ಕಳಿಗೂ ಅದು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ. ಪ್ರೌಢಶಾಲಾ ಮಕ್ಕಳಿಗೆ ಕಷ್ಟಕರ ವಿಷಯಗಳನ್ನು ಸರಳವಾಗಿ ಬೋಧಿಸಬಹುದಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಹೇಳಿದರು.

ಪರಿಣಾಮಕಾರಿ ಕಲಿಕೆಗೆ ಸಹಕಾರಿ:ಸ್ಮಾರ್ಟ್ ತರಗತಿಯಿಂದ ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆಯನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಸ್ಮಾರ್ಟ್ ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕರು.

‘ಪಾಠ ಮಾಡುವ ಸಂದರ್ಭದಲ್ಲಿ ಯಾವುದೇ ಒಂದು ಚಿತ್ರದ ಬಗ್ಗೆ ವಿವರಣೆ ನೀಡುವ ಬದಲು ಅದರ ಚಿತ್ರವನ್ನು ಪರದೆ ಮೇಲೆ ತೋರಿಸಿ ವಿವರಣೆ ನೀಡುವುದರಿಂದ ಮಕ್ಕಳಿಗೆ ಪರಿಪೂರ್ಣವಾಗಿ ಆ ಚಿತ್ರದ ಬಗ್ಗೆ ಜ್ಞಾನ ಬೆಳೆಯುತ್ತದೆ. ಉದಾಹರಣೆಗೆ ಪ್ರಾಣಿಗಳ ಚಿತ್ರ ತೋರಿಸಿ ಅವುಗಳ ಆಹಾರ ಪದ್ಧತಿ, ಜೀವನ ವಿಧಾನಗಳ ಬಗ್ಗೆ ಚಿತ್ರಗಳ ಮುಖೇನ ತೋರಿಸಿ ಬೋಧಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಅದು ದೀರ್ಘಕಾಲ ಉಳಿಯುತ್ತದೆ’ ಎಂದು ರಾಮಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ತಿಳಿಸಿದರು.

ಕಡಿಮೆ ಬಜೆಟ್‌ನ ಯೋಜನೆ: ಸಿಇಒ

‘ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಕಾರ್ಯಕ್ರಮ ಇದು. ಗ್ರಾಮೀಣ ಮಕ್ಕಳು ಕೂಡ ಆಧುನಿಕ ಜಗತ್ತಿಗೆ ತೆರೆದುಕೊಳ್ಳಬೇಕು. ಹೊಸ ಹೊಸ ಮಾಹಿತಿಗಳು ಅವರನ್ನೂ ತಲುಪುವಂತಾಗಬೇಕು ಎಂಬುದು ನಮ್ಮ ಆಶಯ. ಹಾಗಾಗಿ, ಕಡಿಮೆ ಬಜೆಟ್‌ನಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಸ್ಮಾರ್ಟ್‌ ತರಗತಿಗಳನ್ನು ಆರಂಭಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣರಾವ್‌ ತಿಳಿಸಿದರು.

‘ಮೊದಲ ಹಂತದಲ್ಲಿ 20 ಶಾಲೆಗಳಲ್ಲಿ ಆರಂಭಿಸಲಾಗುತ್ತಿದೆ. 15 ಕಡೆ ಸ್ಮಾರ್ಟ್‌ ಉಪಕರಣಗಳ ಅಳವಡಿಕೆ ಪೂರ್ಣಗೊಂಡಿದೆ. ಇನ್ನು ಐದು ಕಡೆ ಪ್ರಗತಿಯಲ್ಲಿದೆ. ಈಗಿನ ಒಂದು ಸ್ಮಾರ್ಟ್‌ ತರಗತಿಗೆ ₹ 1.10 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸ್ಮಾರ್ಟ್‌ ತರಗತಿಗಳನ್ನು ಆರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕವಾದ ಇಂಟರ್‌ಆ್ಯಕ್ಟರ್‌ ಪ್ರೊಜೆಕ್ಟರ್‌, ಸ್ಮಾರ್ಟ್‌ ಬೋರ್ಡ್‌ಗಳನ್ನು ಅಳವಡಿಸಲು ಚಿಂತಿಸಲಾಗಿದೆ. ಇದಕ್ಕೆ ಹೆಚ್ಚು ವೆಚ್ಚವಾಗಲಿದೆ. ₹ 2.50 ಲಕ್ಷದಿಂದ ₹ 3 ಲಕ್ಷದವರೆಗೂ ಬೇಕಾಗಬಹುದು. ಜಿಲ್ಲಾ ಪಂಚಾಯಿತಿ ಅನುದಾನದಿಂದ ಸ್ಮಾರ್ಟ್‌ ತರಗತಿ ಆರಂಭಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT