ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಸರಳವಿವಾಹ ಯೋಜನೆ: 73 ಜೋಡಿ ಹಸೆಮಣೆಗೆ, ₹36.50 ಲಕ್ಷ ನೆರವು

ಮೂಡುತ್ತಿದೆ ಜಾಗೃತಿ
Last Updated 17 ಡಿಸೆಂಬರ್ 2019, 20:04 IST
ಅಕ್ಷರ ಗಾತ್ರ

ಚಾಮರಾಜನಗರ: ದುಂದುವೆಚ್ಚವಿಲ್ಲದೆ, ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನವಜೋಡಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಸರಳ ವಿವಾಹ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ 73 ಜೋಡಿಗಳು ಆರ್ಥಿಕ ನೆರವು ಪಡೆದಿವೆ.

2016–17ನೇ ಸಾಲಿನಿಂದ ಈ ಯೋಜನೆ ಜಾರಿಯಲ್ಲಿದ್ದು, ಸರಳ ವಿವಾಹ ಆಗುವ ದಂಪತಿಗೆ ಇಲಾಖೆ ₹ 50 ಸಾವಿರ ಸಹಾಯಧನ ನೀಡುತ್ತದೆ. ನಾಲ್ಕು ವರ್ಷಗಳಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ₹ 36.50 ಲಕ್ಷ ಸಹಾಯಧನ ಮಂಜೂರು ಮಾಡಿದೆ.

ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಜೋಡಿಗಳಿಗೆ ಮಾತ್ರ ಈ ಯೋಜನೆ ಅನ್ವ‌ಯಿಸುತ್ತದೆ. ಸಾಮೂಹಿಕ ವಿವಾಹ ಸಮಾರಂಭಗಳನ್ನು ಆಯೋಜಿಸಿರುವ ಸಂಘಸಂಸ್ಥೆಗಳಿಗೆ ತಲಾ ಒಂದು ಜೋಡಿಗೆ ₹ 2,500 ಪ್ರೋತ್ಸಾಹಕ ಧನವನ್ನೂ ಇಲಾಖೆ ನೀಡುತ್ತದೆ.

ಬಡತನದ ಹಿನ್ನಲೆಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ, ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಒಡವೆ ವಸ್ತ್ರಗಳನ್ನು ಖರೀದಿಸಲು ಕಷ್ಟವಾಗುವುದರಿಂದ ಮದುವೆ ಮಾಡುವುದಕ್ಕೆ ವಿಳಂಬ ಆಗುತ್ತದೆ. ಇದನ್ನುತಪ್ಪಿಸುವ ಉದ್ದೇಶದಿಂದ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಹಸಮಣೆ ಏರಿದ ನವದಂಪತಿಗೆ ಆರ್ಥಿಕವಾಗಿ ನೆರವು ನೀಡುವ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2015–16ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು.

2016–17ನೇ ಸಾಲಿನಿಂದ ಇದು‌ಜಾರಿಗೆ ಬಂದಿದೆ. ಆರಂಭದಲ್ಲಿ ಈ ಯೋಜನೆಯ ಬಗ್ಗೆ ಎರಡೂ ಸಮುದಾಯಗಳ ಜನರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ. 2017–18ರಿಂದ ಯೋಜನೆಯ ಲಾಭ ಪಡೆದುಕೊಳ್ಳಲು ಹೆಚ್ಚು ಹೆಚ್ಚು ನವಜೋಡಿಗಳು ಮುಂದೆ ಬರುತ್ತಿವೆ.

ಮೊದಲ ವರ್ಷ ಎಂಟು ಜೋಡಿಗಳುಈ ಯೋಜನೆಯ ಅಡಿಯಲ್ಲಿ ಆರ್ಥಿಕ ನೆರವು ಪಡೆದಿದ್ದರೆ, 2017–18ರಲ್ಲಿ 30 ದಂಪತಿ ಅರ್ಜಿ ಸಲ್ಲಿಸಿದ್ದಾರೆ. 2018–19ರಲ್ಲಿ 16 ಮತ್ತು ಈ ವರ್ಷ ನವೆಂಬರ್‌ವರೆಗೆ 19 ಜೋಡಿಗಳು ಸಹಾಯಧನ ಪಡೆದಿವೆ.

‘ಈ ಯೋಜನೆಯಲ್ಲಿ ವಾರ್ಷಿಕ ಗುರಿ ಎಂಬುದಿಲ್ಲ. ಅನುದಾನದ ಕೊರತೆಯೂ ಇಲ್ಲ. ಎಷ್ಟು ಮಂದಿ ಅರ್ಜಿ ಹಾಕಿದರೂ ದಾಖಲೆಗಳನ್ನು ಪರಿಶೀಲಿಸಿ ಅರ್ಹರೆಂದು ದೃಢಪಟ್ಟರೆ ₹ 50 ಸಾವಿರ ನೀಡುತ್ತೇವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಸರಳ ವಿವಾಹವನ್ನು ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶ. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಬೇಕು. ಸಮಾರಂಭ ಏರ್ಪಡಿಸಿದವರಿಗೂ ಪ್ರೋತ್ಸಾಹಧನ ಕೊಡುತ್ತೇವೆ. ಮದುವೆಯಾದ ಮೂರು ತಿಂಗಳ ಒಳಗೆ ಅಗತ್ಯ ದಾಖಲೆಗಳೊಂದಿಗೆ (ಮದುವೆಯ ನೋಂದಣಿ, ಸಾಮೂಹಿಕ ವಿವಾಹ ಏರ್ಪಡಿಸಿದ್ದ ಸಂಸ್ಥೆ ನೀಡಿದ ದಾಖಲೆ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಇತ್ಯಾದಿ) ಅರ್ಜಿ ಹಾಕಬೇಕು’ ಎಂದು ಅವರು ಮಾಹಿತಿ ನೀಡಿದರು.

ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು

ನಾಲ್ಕು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಚಾಮರಾಜನಗರ ತಾಲ್ಲೂಕಿನಲ್ಲಿ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದವರ ಸಂಖ್ಯೆ ಹೆಚ್ಚಿದೆ. ನಾಲ್ಕು ವರ್ಷಗಳಲ್ಲಿ ಆರ್ಥಿಕ ನೆರವು ಪಡೆದ 73 ಫಲಾನುಭವಿ ಜೋಡಿಗಳ ಪೈಕಿ 45 ದಂಪತಿ ಚಾಮರಾಜನಗರ ತಾಲ್ಲೂಕಿನವರು. ಯಳಂದೂರು ತಾಲ್ಲೂಕಿನಲ್ಲಿ ಇದುವರೆಗೆ ಒಂದು ಜೋಡಿ ಮಾತ್ರ ಯೋಜನೆಯ ಲಾಭ‍ಪಡೆದಿದೆ.

‘ಜಿಲ್ಲಾ ಕೇಂದ್ರವಾಗಿರುವುದರಿಂದ ಚಾಮರಾಜನಗರದಲ್ಲಿ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಯೋಜನೆ ಬಗ್ಗೆ ಜಾಗೃತಿ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಜನರಿಗೂ ಯೋಜನೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಮುನಿರಾಜು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT