ಚಾಮರಾಜನಗರ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಶನಿವಾರ (ಆ.26) ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್, ‘ಬೆಳ್ತಂಗಡಿಯಿಂದ ಪಾದಯಾತ್ರೆ ಆರಂಭಿಸಲಾಗುವುದು. ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ. ಸೆ.7ರಂದು ಬೆಂಗಳೂರಿನ ವಿಧಾನಸೌಧಕ್ಕೆ ತಲುಪಲಿದೆ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರು ಕೂಡ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘2012ರ ಅಕ್ಟೋಬರ್ 9ರಂದು ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಶಿಕ್ಷೆ ಯಾರಿಗೂ ಆಗಿಲ್ಲ. ಆಕೆಯ ಕುಟುಂಬಕ್ಕೆ ಅನ್ಯಾಯವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಮರುತನಿಖೆಯ ಅಗತ್ಯವಿದೆ’ ಎಂದರು.
‘ಇಂತಹ ಘೋರ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ ಎಂದರೆ ಸರ್ಕಾರ ಸಮಾಜಕ್ಕೆ ಕೊಡುತ್ತಿರುವ ಸಂದೇಶವಾದರೂ ಏನು? ಈ ಪ್ರಕರಣವನ್ನು ಸರ್ಕಾರ ಮತ್ತೆ ತನಿಖೆ ನಡೆಸಬೇಕು. ನಿಜವಾದ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸುವುದಕ್ಕಾಗಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 330 ಕಿ.ಮೀ ದೂರದ ಪಾದಯಾತ್ರೆಯು 14 ದಿನಗಳ ಕಾಲ ನಡೆಯಲಿದೆ’ ಎಂದು ಗಿರೀಶ್ ಮಾಹಿತಿ ನೀಡಿದರು.
‘ಸೌಜನ್ಯ ಪ್ರಕರಣ ವಿಚಾರ ಮಾತ್ರವಲ್ಲದೆ, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಅತ್ಯಾಚಾರ, ಕೊಲೆ ಪ್ರಕರಣಗಳ ಸಂತ್ರಸ್ತರ ಕುಟುಂಬಕ್ಕೆ ಮಾನಸಿಕ ಮತ್ತು ಆರ್ಥಿಕ ಸಹಾಯ ನೀಡುವುದಕ್ಕಾಗಿ ‘ಸೌಜನ್ಯ ಮಹಿಳಾ ಸುರಕ್ಷಾ ಆಯೋಗ’ ಸ್ಥಾಪಿಸಬೇಕು. ಮಾನವ ಕಳ್ಳಸಾಗಣೆ ತಡೆಗಟ್ಟಲು ಸಿಐಡಿ ಮಾದರಿಯಲ್ಲಿ ಪ್ರತ್ಯೇಕ ಪೊಲೀಸ್ ಪಡೆ ಅಥವಾ ಇಲಾಖೆಯನ್ನು ಸ್ಥಾಪಿಸಬೇಕು. ಧರ್ಮಸ್ಥಳದ ಸುತ್ತಮುತ್ತ ಈ ಹಿಂದೆ ನಡೆದಿರುವ ಅನುಮಾನಾಸ್ಪದ ಸಾವಿನ ಪ್ರಕರಣಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.
‘ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಗಿರೀಶ್ ಮನವಿ ಮಾಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸೈಯದ್ ಸಮಿ, ಜಿಲ್ಲಾ ಕಾರ್ಯದರ್ಶಿ ಜೈಶಂಕರ್, ತಾಲ್ಲೂಕು ಕಾರ್ಯದರ್ಶಿಗಳಾದ ಸೈಯದ್ ಸೊಹೇಬ್, ರಿಜ್ವಾನ್, ಉಪಾಧ್ಯಕ್ಷ ಶಿವಶಂಕರ್, ಹನೂರು ತಾಲ್ಲೂಕು ಉಪಾಧ್ಯಕ್ಷ ಈಶ್ವರ್ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.