ಬುಧವಾರ, ಅಕ್ಟೋಬರ್ 21, 2020
24 °C
ಮಾದಪ್ಪ, ಮಹರ್ಷಿ ಭಗೀರಥ ಭಕ್ತಿಗೀತೆಗಳಿಗೆ ಧ್ವನಿಯಾಗಿದ್ದ ಮೇರು ಪ್ರತಿಭೆ, ಒಡನಾಟ ಸ್ಮರಿಸಿದ ಪರಿಸರ ಪ್ರೇಮಿ ವೆಂಕಟೇಶ್‌

ಚಾಮರಾಜನಗರ: ಹಸಿರೀಕರಣ ಯೋಜನೆ ಹಿಂದಿನ ಸ್ಫೂರ್ತಿ ಎಸ್‌ಪಿಬಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗಾಯನದ ಮೇರು ಪ್ರತಿಭೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಗಡಿ ಜಿಲ್ಲೆಯೊಂದಿಗೆ ನೇರ ನಂಟು ಹೊಂದಿಲ್ಲದೇ ಇದ್ದರೂ ಜಿಲ್ಲೆಯಲ್ಲಿ ತಯಾರದ ನಾಲ್ಕು ಭಕ್ತಿಗೀತೆ ಆಲ್ಬಂಗಳಿಗೆ ಧ್ವನಿ ನೀಡಿದ್ದಾರೆ. 

ಎಲ್ಲಕ್ಕಿಂತ ಹೆಚ್ಚಾಗಿ, ನಗರದ ಲೆಕ್ಕ‍ಪರಿಶೋಧಕ, ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್‌ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಗರದಲ್ಲಿ ಕೈಗೆತ್ತಿಕೊಂಡಿರುವ ಹಸಿರೀಕರಣ ಯೋಜನೆಯ ಹಿಂದಿನ ಸ್ಫೂರ್ತಿ ಬಾಲಸುಬ್ರಹ್ಮಣ್ಯಂ. ಗಾಯನದ ಧ್ರುವ ತಾರೆಯ ಪ್ರತಿ ಹುಟ್ಟುಹಬ್ಬದ ದಿನದಂದು ವೆಂಕಟೇಶ್‌ ಅವರು ನಗರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಈಗ ಹಚ್ಚ ಹಸಿರಿನಿಂದ ನಳನಳಿಸುತ್ತಿರುವ ವಿವಿಧ ಗಿಡಗಳು, ಎಸ್‌ಪಿಬಿ ಅವರ ಹೆಸರಿನಲ್ಲಿ ನೆಟ್ಟಂತಹವುಗಳು. 

ಸಂಗೀತ ಪ್ರೇಮಿಯೂ ಆಗಿರುವ ವೆಂಕಟೇಶ್‌ ಅವರು ಈಶ್ವರಿ ಸ್ಕೂಲ್‌ ಆಫ್‌ ಮ್ಯೂಸಿಕ್‌ ಎಂಬ ಸಂಗೀತ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಅವರು ತಮ್ಮ ಸಂಸ್ಥೆಯ ಮೂಲಕ ಮಲೆ ಮಹದೇಶ್ವರ ಸ್ವಾಮಿಯ ಕುರಿತಾಗಿ ಮೂರು ಆಲ್ಬಂ (ಕರುಣಿಸು ಬಾರೊ ಮಹದೇವ, ಕರುಣಾಸಾಗರ ಮಹದೇವ, 77 ಮಲೆಗಳ ಮಾದೇವ) ಹಾಗೂ ಭಗೀರಥ ಮಹರ್ಷಿ ಅವರ ಕುರಿತ ಒಂದು ಭಕ್ತಿಗೀತೆ ಆಲ್ಬಂ (ರಾಜ ಋಷಿ ಭಗೀರಥ) ಅನ್ನು ಹೊರ ತಂದಿದ್ದಾರೆ. ಈ ನಾಲ್ಕು ಕ್ಯಾಸೆಟ್‌ಗಳಲ್ಲಿನ ಏಳು ಹಾಡುಗಳಿಗೆ ಎಸ್‌ಪಿಬಿ ಅವರು ಧ್ವನಿಯಾಗಿದ್ದಾರೆ. (2005-2006ರಲ್ಲಿ ಬಿಳಿಗಿರಿರಂಗನಾಥಸ್ವಾಮಿಗೆ ಸಂಬಂಧಿಸಿದ ಭಕ್ತಿಗೀತೆಗಳನ್ನೂ ಅವರು ಹಾಡಿದ್ದಾರೆ. ಆದರೆ, ಅದು ಬಿಡುಗಡೆಯಾಗಿಲ್ಲ).

2007ರ ನಂತರ ಈ ಆಲ್ಬಂಗಳನ್ನು ಪ್ರಕಟಿಸಲಾಗಿದ್ದು, ವೆಂಕಟೇಶ್‌ ಅವರು ಅಂದಿನಿಂದ ಎಸ್‌ಪಿಬಿ ಅವರ ಒಡನಾಟದಲ್ಲಿದ್ದಾರೆ. ನಾಲ್ಕೈದು ಬಾರಿ ಅವರನ್ನು ನೇರವಾಗಿ ಭೇಟಿ ಮಾಡಿದ್ದಾರೆ. ಹೊಸ ಆಲ್ಬಂ ಹೊರತರುವ ಸಿದ್ಧತೆಯನ್ನು ಅವರು ಮಾಡಿದ್ದು, ಲಾಕ್‌ಡೌನ್‌ ಆರಂಭವಾಗುವುದಕ್ಕೂ ಕೆಲವು ದಿನಗಳ ಮೊದಲು ಬಾಲಸುಬ್ರಹ್ಮಣ್ಯಂ ಅವರನ್ನು ಸಂಪರ್ಕಿಸಿ, ಹಾಡು ಹಾಡಬೇಕು ಎಂದು ಮನವಿ ಮಾಡಿದ್ದರು. ಹಾಡಿನ ಸಾಹಿತ್ಯವನ್ನು ಕಳುಹಿಸುವಂತೆ ಎಸ್‌ಪಿಬಿ ಅವರು ಸೂಚಿಸಿದ್ದರು. ಇವರು ‘ನುಡಿ’ಯಲ್ಲಿ ಟೈಪ್‌ ಮಾಡಿ ಕಳಿಸಿದ್ದರು. ಆದರೆ, ಫಾಂಟ್‌ ಸಮಸ್ಯೆ ಕಾರಣಕ್ಕೆ ಅದನ್ನು ಓದಲು ಅವರಿಗೆ ಸಾಧ್ಯವಾಗಿರಲಿಲ್ಲ. ನಂತರ ಲಾಕ್‌ಡೌನ್‌ ಬಂದು ಆಲ್ಬಂ ಕೆಲಸ ಸ್ಥಗಿತವಾಗಿತ್ತು.

ಎಸ್‌ಪಿಬಿ ಅವರೊಂದಿಗೆ ಕಳೆದ ಕ್ಷಣಗಳನ್ನು ಸಿ.ಎಂ.ವೆಂಕಟೇಶ್‌ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. 

ಅದೃಷ್ಟ ಯಾರಿಗೆ ಇರುತ್ತದೆ?: ‘ಇವತ್ತು ನನ್ನ ಜೀವನ ಅತ್ಯಂತ ದುಃಖದ ದಿನ. ನನ್ನ ಹಾಗೂ ಈಶ್ವರಿ ಸ್ಕೂಲ್‌ ಆಫ್‌ ಮ್ಯೂಸಿಕ್‌ನ ಎಲ್ಲ ಕೆಲಸಗಳಿಗೂ ಸ್ಫೂರ್ತಿಯಾಗಿದ್ದವರು ಎಸ್‌.ಪಿ.ಬಾಲಸುಬ್ರಹ್ಮಣ್ಯಂ. ಅವರಂತಹ ಶ್ರೇಷ್ಠ ಗಾಯಕರು ನಮ್ಮ ಆಲ್ಬಂನಲ್ಲಿ ಹಾಡಿದ್ದಾರೆ ಎನ್ನುವುದೇ ಹೆಮ್ಮೆಯ ಸಂಗತಿ. ನನ್ನ ಜೀವನದಲ್ಲಿ ಇದುವರೆಗೆ ಒಂದೇ ಒಂದು ಹಾಡು ಬರೆದಿದ್ದೇನೆ. ಅದನ್ನು ಎಸ್‌ಪಿಬಿಯವರೇ ಹಾಡಿದ್ದಾರೆ. ಇಂತಹ ಅದೃಷ್ಟ ಯಾರಿಗೆ ಇರುತ್ತದೆ? ರಾಜ ಋಷಿ ಭಗೀರಥ ಆಲ್ಬಂನ ಹಾಡನ್ನು ಅಮೆರಿಕದಿಂದಲೇ ಧ್ವನಿಮುದ್ರಿಸಿ ಕಳುಹಿಸಿದ್ದರು’ ಎಂದು ಅವರು ಹೇಳಿದರು. 

‘ಆಲ್ಬಂ ಕೆಲಸಗಳಿಗಾಗಿ ನಾಲ್ಕೈದು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಅಷ್ಟು ದೊಡ್ಡ ಗಾಯಕರಾಗಿದ್ದರೂ, ಅವರಲ್ಲಿ ಅಹಂಕಾರ ಇರಲಿಲ್ಲ. ಅತ್ಯಂತ ವಿನೀತರಾಗಿ ನಡೆದುಕೊಳ್ಳುತ್ತಿದ್ದರು. ಸದಾ ನಗುತ್ತಲೇ ಮಾತನಾಡುತ್ತಿದ್ದರು. ತಮ್ಮ ಎದುರು ಜನರು ನಿಂತುಕೊಂಡು ಮಾತನಾಡುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಕುಳ್ಳಿರಿಸಿಯೇ ಮಾತನಾಡುತ್ತಿದ್ದರು. ಯುವ ಗಾಯಕರಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಆಲ್ಬಂನಲ್ಲಿ ಹೆಚ್ಚು ಹಾಡುಗಳನ್ನು ಹಾಡುವಂತೆ ಕೇಳಿದಾಗಲೂ, ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದರು’ ಎಂದು ವೆಂಕಟೇಶ್‌ ಸ್ಮರಿಸಿದರು. 

‘ಬಾಲಸುಬ್ರಹ್ಮಣ್ಯಂ ಅವರು ನನ್ನ ಮಾನಸ ಗುರು. ಅವರ ಮಾತಿನಿಂದ ಪ್ರೇರೇಪಣೆಗೊಂಡೇ, ನಾನು ನಗರದಲ್ಲಿ ಗಿಡ ನೆಡುವ ನಿರ್ಧಾರ ಮಾಡಿದ್ದೆ. ಪ್ರತಿವರ್ಷ ಹುಟ್ಟುಹಬ್ಬದ ದಿನ ಗಿಡ ನೆಡುವ ಕೈಂಕರ್ಯ ಹಾಗೂ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು. 

ಬೇರೆಯವರ ಚಪ್ಪಲಿಗಳನ್ನು ಜೋಡಿಸಿಟ್ಟರು...

‘ಹಾಡುಗಳ ರೆಕಾರ್ಡಿಂಗ್‌ಗಾಗಿ ಹೈದರಬಾದ್‌ನ ಸ್ಟುಡಿಯೊ ಒಂದಕ್ಕೆ ಹೋಗಿದ್ದೆವು. ಸ್ಟುಡಿಯೊದ ಹೊರಗಡೆ ಪಾದರಕ್ಷೆಗಳನ್ನು ಹೇಗೋಗೋ ಇಟ್ಟಿದ್ದೆವು. ಚೆಲ್ಲಾಪಿಲ್ಲಿಯಾಗಿತ್ತು. ಇದನ್ನು ಕಂಡ ಎಸ್‌ಪಿಬಿಯವರು, ಸ್ವತಃ ತಾವೇ ಎಲ್ಲ ಚಪ್ಪಲಿಗಳನ್ನು ಜೋಡಿಸಿಟ್ಟರು. ಇದನ್ನು ಕಂಡು ದಿಗ್ಭ್ರಮೆಯಾಯಿತು. ಅಂತಹ ಮೇರು ಕಲಾವಿದ ಪಾದರಕ್ಷೆಗಳನ್ನು ಜೋಡಿಸುತ್ತಾರೆ ಎಂದರೆ ಅದನ್ನು ನಂಬುವುದಕ್ಕೆ ಆಗುವುದಿಲ್ಲ. ಅಷ್ಟೊಂದು ಸರಳಾತಿ ಸರಳ ವ್ಯಕ್ತಿತ್ವ ಅವರದ್ದಾಗಿತ್ತು’ ಎಂದು ವೆಂಕಟೇಶ್‌ ನೆನೆದರು. 

‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಮ್ಮ ಹೊಸ ಆಲ್ಬಂನಲ್ಲಿ ಅವರು ಹಾಡಬೇಕಿತ್ತು. ಮಾರ್ಚ್‌ ತಿಂಗಳಲ್ಲಿ ನಾವು ಕಳುಹಿಸಿದ ಹಾಡಿನ ಸಾಹಿತ್ಯವನ್ನು ಫಾಂಟ್‌ ಕಾರಣಕ್ಕೆ ಓದಲು ಸಾಧ್ಯವಾಗಲಿಲ್ಲ. ಮತ್ತೆ ಕಳುಹಿಸಲು ಅವಕಾಶ ಸಿಗಲಿಲ್ಲ. ಈಗ ಅವರೇ ನಮ್ಮೊಂದಿಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಗಾನ ಗಂಧರ್ವನ ಆಶೀರ್ವಾದ ಪಡೆದ ಧನ್ಯತೆ

ಯಳಂದೂರು ತಾಲ್ಲೂಕಿನ ಮಾಂಬಳ್ಳಿಯವರಾದ, ಸಂಗೀತ ನಿರ್ದೇಶಕ ಹೊಂಬಾಳೆ ಫಲ್ಗುಣ ಅವರು ಸಂಗೀತ ಸಂಯೋಜಿಸಿದ್ದ ನಾಲ್ಕು ಹಾಡುಗಳಿಗೆ ಬಾಲಸುಬ್ರಹ್ಮಣ್ಯಂ ಧ್ವನಿ ನೀಡಿದ್ದಾರೆ. 

ಮೇರು ಗಾಯಕನೊಂದಿಗಿನ ಒಡನಾಟವನ್ನು ಸ್ಮರಿಸಿರುವ ಫಲ್ಗುಣ ಅವರು, ‘ಚಿಕ್ಕಂದಿನಲ್ಲೂ ಅವರ ಗಾಯನ ಕೇಳಿ ಬೆಳೆದವನು ನಾನು.  ಸುಗಮ ಸಂಗೀತ ಕ್ಷೇತ್ರದಲ್ಲಿ ನನ್ನ ನೆಲೆ ಕಂಡುಕೊಂಡ ಹೊತ್ತಿಗೆ ಬಾಲು ಸರ್ ಕೈಯಲ್ಲಿ ಹಾಡಿಸಬೇಕೆಂಬ ನನ್ನ ಹಂಬಲ ಬಿವಿಎಸ್ ಸರ್ ಮೂಲಕ ಈಡೇರಿತು. ಮಿತ್ರ ಎಂ.ಬೈರೇಗೌಡರ ನಾಲ್ಕು ಭಾವಗೀತೆಗಳನ್ನು ಮದ್ರಾಸಿನ ಸ್ಟುಡಿಯೋದಲ್ಲಿ ಹಾಡಿದ ಬಾಲು ಸರ್, 'ಬಹಳ ಸೊಗಸಾಗಿ ರಾಗ ಸಂಯೋಜನೆ ಮಾಡಿದ್ದೀರಾ, ಒಳ್ಳೆಯದಾಗಲಿ' ಎಂದು ಹರಸಿದರು. ಆ ಗಾನ ಗಂಧರ್ವನ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಬಂದೆ. ಆ ಜೇನು ದನಿಯಲ್ಲಿ ನನ್ನ ಸಂಗೀತ ಸಂಯೋಜನೆ ಗೀತೆಗಳು ಜೀವ ತಳೆಯಿತು. ಅವರು ಹಾಡಿಕೊಟ್ಟ ಪುಣ್ಯ ನನ್ನ ಭಾಗ್ಯಕ್ಕೆ ಬಂತು’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು