ಗುರುವಾರ , ಫೆಬ್ರವರಿ 27, 2020
19 °C
ಸಿಎಎ ಕುರಿತ ವಿಚಾರ ಸಂಕಿರಣ, ಸಂವಾದದಲ್ಲಿ ಮೌಲಾನ ಜಾಫರ್‌ ಸಾದಿಕ್‌ ಫೈಜಿ ಅಭಿಮತ

ಭಾರತೀಯರು– ಮನುವಾದಿಗಳ ನಡುವಣ ಯುದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ದೇಶದ ಪ್ರಜೆಗಳೆಲ್ಲರೂ ಪೌರರೇ. ಎರಡನೇ ಬಾರಿ ಪೌರತ್ವ ಸಾಬೀತು ಪಡಿಸುವ ಅಗತ್ಯವಿಲ್ಲ. ಪೌರತ್ವದ ಹೆಸರಿನಲ್ಲಿ ಭಾರತೀಯರು ಹಾಗೂ ಮನುವಾದಿಗಳ ನಡುವಣ ಯುದ್ಧವನ್ನು ಸಂವಿಧಾನ ವಿರೋಧಿಗಳು ಆರಂಭಿಸಿದ್ದಾರೆ’ ಎಂದು ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನ ಜಾಫರ್‌ ಸಾದಿಕ್‌ ಫೈಜಿ ಅವರು ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಬಹುಜನ್‌ ವಾಲೆಂಟಿಯರ್‌ ಫೋರ್ಸ್‌ (ಬಿವಿಎಫ್‌) ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ‘ಪೌರತ್ವ ಪರೀಕ್ಷೆ.. ಏನಿದರ ಮರ್ಮ..?’ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜೆಪಿಯ ಸಚಿವ ಸಂಪುಟದವರಿಗೆ ಪೌರತ್ವ ಕಾಯ್ದೆ ಬಗ್ಗೆ ಗೊತ್ತಿಲ್ಲ. ಸರಿಯಾದ ಚರ್ಚೆ ನಡೆದಿಲ್ಲ. ಈ ವಿಚಾರ ಕುರಿತು ಮಾಧ್ಯಮಗಳಿಗೆ ಮೋದಿ, ಅಮಿತ್‌ ಶಾ ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣದಲ್ಲಿ ನಾವಿದ್ದೇವೆ. ಹಾಗಾಗಿ, ಅರ್ಥೈಸಿಕೊಂಡು ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.  

ಎಲ್ಲವೂ ನಾಟಕ

‘ಸಹಸ್ರಾರು ವರ್ಷಗಳಿಗೆ ಬೇಕಾಗುವ, ಎಲ್ಲವನ್ನೂ ಒಳಗೊಂಡಿರುವ ಸಂವಿಧಾನವನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಸಂವಿಧಾನವನ್ನು ಗೌರವಿಸುವುದು, ಅಂಬೇಡ್ಕರ್‌, ಗಾಂಧೀಜಿಗೆ ಪುಷ್ಪನಮನ ಸಲ್ಲಿಸುವಂತೆ, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಂತೆಲ್ಲ ನಾಟಕವಾಡುತ್ತಾ ಹಿಂದೆ ಕೇಸರಿ ಬಾವುಟ ಹಿಡಿದಿರುತ್ತಾರೆ. ಇವೆಲ್ಲವೂ ಬಹುಸಂಖ್ಯಾತರನ್ನು ನಂಬಿಸಿ ಮೋಸ ಮಾಡುವ ಹುನ್ನಾರ’ ಎಂದು ಟೀಕಿಸಿದರು.

‘ದನ ಕಾಯಲು ಬಂದವರು ನೀವು, ನಮ್ಮನ್ನೇ ಪಂಕ್ಚರ್‌ ಮಾಡುವವರು ಎಂದು ಹೇಳುತ್ತೀರಾ? ನಾವು ಪಂಕ್ಚರ್‌ ಹಾಕುತ್ತೇವೆ. ಮೋದಿ, ಶಾ, ಆರ್‌ಎಸ್‌ಎಸ್‌ನವರು ಪಂಕ್ಚರ್‌ ಮಾಡುತ್ತಾರೆ. ಅವರು ದೇಶ, ಸಂವಿಧಾನ ಹಾಗೂ ವ್ಯವಸ್ಥೆಗೆ ಮಾಡಿರುವಂತಹ ಪಂಕ್ಚರ್‌ ಅನ್ನು ಅಲ್ಪ‌ಸಂಖ್ಯಾತರು, ಹಿಂದುಳಿದವರು, ದಲಿತರು ಎಲ್ಲರೂ ಸೇರಿ ರಿಪೇರಿ ಮಾಡಿಯೇ ತೀರುತ್ತೇವೆ’ ಎಂದು ಹೇಳಿದರು. 

ಇವಿಎಂ ಇದರ ಮರ್ಮ: ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಳ ಬೇರು ಹಿಂದುತ್ವದಲ್ಲಿದೆ. ಹಿಂದುತ್ವದ ಬೇರು ಬ್ರಾಹ್ಮಣವಾದದಲ್ಲಿದೆ. ಬ್ರಾಹ್ಮಣವಾದದ ಬೇರು ಮನುವಾದದಲ್ಲಿದೆ. ಮನುವಾದದ ಬೇರು ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಯಲ್ಲಿದೆ. ಆರ್‌ಎಸ್‌ಎಸ್‌ನ ಬೇರು ಬಿಜೆಪಿಯಲ್ಲಿದೆ. ಬಿಜೆಪಿಯ ಬೇರು ಮತ ಹಾಕುವ ಇವಿಎಂನಲ್ಲಿದೆ. ಇದೇ ಪೌರತ್ವ ಕಾಯ್ದೆಯ ಮರ್ಮವಾಗಿದೆ’ ಎಂದು ವ್ಯಂಗ್ಯವಾಡಿದರು.

ಧರ್ಮಗುರು ಪ್ರಕಾಶ್‌ ದಾಸರ್, ಮುಖಂಡರಾದ ಅರಕಲವಾಡಿ ನಾಗೇಂದ್ರ, ರವಿಮೌರ್ಯ, ಎಸ್. ನಂಜುಂಡಸ್ವಾಮಿ, ಸಿ.ಎಂ.ಕೃಷ್ಣಮೂರ್ತಿ, ಸೈಯದ್‌ ಆರೀಫ್‌, ಮಹೇಶ್, ಜಾನ್‌ ಗಿಲ್ಬರ್ಟ್‌, ಕೆ.ಎಂ. ನಾಗರಾಜು ಇದ್ದರು.

‘ಮಾಧ್ಯಮಗಳು ಆಡಳಿತದ ಹಿಡಿತದಲ್ಲಿವೆ’

‘ಇಂದು 60ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಚಿಂತಕರು, ಸಾಹಿತಿಗಳು ಹಾಗೂ ಕೆಲವೇ ಕೆಲವು ಮಾಧ್ಯಮಗಳ ಪತ್ರಕರ್ತರು ಪೌರತ್ವ ಕಾಯ್ದೆ ವಿರುದ್ಧ ದನಿ ಎತ್ತಿದ್ದಾರೆ. ಉಳಿದ ಮಾಧ್ಯಮಗಳು ಮನುವಾದಿಗಳೊಂದಿಗಿವೆ. ದೇಶದ ಸಂವಿಧಾನ ರಕ್ಷಣೆ ಮಾಡಬೇಕಾದವರು ಆರ್‌ಎಸ್‌ಎಸ್‌, ಸರ್ಕಾರದ ಒತ್ತಡಕ್ಕೆ ಸಿಲುಕಿ ಪೌರತ್ವದ ಬಗ್ಗೆ ಸರಿಯಾದ ಮಾಹಿತಿ ಬಿತ್ತರಿಸುತ್ತಿಲ್ಲ’ ಎಂದು ಮೌಲಾನ ಜಾಫರ್‌ ಸಾದಿಕ್‌ ಫೈಜಿ ಬೇಸರ ವ್ಯಕ್ತಪಡಿಸಿದರು.

ಗೂಂಡಾ ರಾಜ್ಯ

‘ಉತ್ತರ ಪ್ರದೇಶದಲ್ಲಿ ದೌರ್ಜನ್ಯ, ಹಿಂಸೆ ನಿರಂತರವಾಗಿದೆ. ಮಹಿಳೆಯರು ಮಕ್ಕಳ ಮೇಲೆ ಕರುಣೆ ಇಲ್ಲ. ಅರ್ಧ ರಾತ್ರಿಯಲ್ಲಿ ಪೊಲೀಸರು ಮನೆಗಳಿಗೆ ನುಗ್ಗಿ ಹೊಡೆಯುವುದು, ಬಡಿಯುವುದು ಮಾಡಿಸುವ ಮೂಲಕ ಯೋಗಿ ಆದಿತ್ಯನಾಥ್‌ ಗೂಂಡಾ ಆಡಳಿತ ನಡೆಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು