ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಆಧುನಿಕ ಭಾರತದ ನಿರ್ಮಾತೃ: ಜ್ಞಾನಪ್ರಕಾಶ ಸ್ವಾಮೀಜಿ

Last Updated 12 ಏಪ್ರಿಲ್ 2021, 15:30 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ದೊರಕಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಆಧುನಿಕ ಭಾರತದ ನಿರ್ಮಾತೃ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಸೋಮವಾರ ತಿಳಿಸಿದರು.

ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗಾಗಿ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿದರು ಅಂಬೇಡ್ಕರ್‌. ಪ್ರಜಾಪ್ರಭುತ್ವದ ಮೂಲಬೇರು ಮತದಾರರು. ಮತದಾನ ಹಿಂದೆ ಕೇವಲ ಉಳ್ಳವರ ಪಾಲಾಗಿತ್ತು. ಪ್ರಜಾಪ್ರಭುತ್ವ ರಚನೆ ಮೂಲಕ ಮತದಾನದ ಹಕ್ಕನ್ನು ದೇಶದ ಪ್ರತಿಯೊಬ್ಬರಿಗೂ ದೊರಕಿಸಿದ್ದಾರೆ’ ಎಂದರು.

‘563 ಸಂಸ್ಥಾನಗಳಾಗಿ ಛಿದ್ರಛಿದ್ರವಾಗಿದ್ದ ದೇಶವನ್ನು ಒಂದು ಗೂಡಿಸಿ ಸಮಾನತೆ, ಸಹೋದರತೆ ಆಶಯಗಳೊಂದಿಗೆ ಸಂವಿಧಾನ ರಚಿಸಿ ಅಖಂಡಭಾರತ ಕನಸಿಗೆ ಭದ್ರಬುನಾದಿ ಹಾಕಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಅವರ ಮೌಲ್ಯಯುತ ಚಿಂತನೆಗಳು, ವಿಚಾರಧಾರೆಗಳು ಜಗತ್ತಿನೆಲ್ಲೆಡೆ ಪ್ರಸ್ತುತವಾಗಿವೆ’ ಎಂದರು.

‘ದೇಶದ ಅಸಂಖ್ಯಾತ ದೀನ ದಲಿತರ, ಶೋಷಿತರ ಶ್ರೇಯೋಭಿವೃದ್ಧಿಗಾಗಿ ಜೀವನವನ್ನೆ ಮುಡಿಪಾಗಿಟ್ಟ ಅಂಬೇಡ್ಕರ್ ಅವರು ಮಹಾಪುರುಷರಾಗಿದ್ದಾರೆ. ಅವರ ಅದರ್ಶ ಭಾರತದ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಜ್ಞಾನಪ್ರಕಾಶ ಸ್ವಾಮೀಜಿಯವರು ತಿಳಿಸಿದರು.

ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ ಅವರು ಮಾತನಾಡಿ, ‘ಪ್ರತಿಯೊಬ್ಬರೂ ಸಂವಿಧಾನ ಓದುವ ಮೂಲಕ ಅಧ್ಯಯನ ಶೀಲತೆ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಅನುಯಾಯಿಗಳು ಅವರ ಗುಣಗಳನ್ನು ಅನುಕರಣೆ ಮಾಡಬೇಕು. ಅಂಬೇಡ್ಕರ್ ಅವರು ಎಲ್ಲವನ್ನೂ ಕೊಟ್ಟಿದ್ದಾರೆ. ಅವರನ್ನು ಪ್ರತಿದಿನ ನೆನಪಿಸಿಕೊಳ್ಳುವ ಅಗತ್ಯವಿದೆ. ನಳಂದ ವಿಶ್ವವಿದ್ಯಾಲಯದಲ್ಲಿ ಮುಂದಿನ 65 ಅಡಿ ಎತ್ತರದ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೃತಶಿಲೆಯಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ‌ರಾವ್ ಅವರು ಮಾತನಾಡಿ, ‘ಸಮಾನತೆಯ ಆಧಾರದ ಮೇಲೆ ಸಮಸಮಾಜದ ನಿರ್ಮಾಣವಾಗಲು ಅಂಬೇಡ್ಕರ್ ಅವರು ಶ್ರಮಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೆ ಹೋರಾಟ ಮಾಡಿದ ಅಂಬೇಡ್ಕರ್ ಅವರು ಜಾತಿ, ಲಿಂಗ, ಧರ್ಮಗಳ ಭೇದವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕನ್ನು ಕಲ್ಪಿಸಿಕೊಡುವ ಮೂಲಕ ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣರಾಗಿದ್ದಾರೆ’ ಎಂದು ಬಣ್ಣಿಸಿದರು.

ಮೈಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜೆ. ಸೋಮಶೇಖರ್ ಅವರು ಮಾತನಾಡಿ, ‘ಪ್ರಜಾಪ್ರಭುತ್ವ ಮೂಲ ಆಶಯಗಳು ಹಾಗೂ ಪ್ರಸ್ತುತ ಬೆಳವಣಿಗೆಗಳು’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಮೈಸೂರಿನ ಭಾರತೀಯ ಜೀವ ವಿಮಾ ನಿಗಮದ ಆಡಳಿತಾಧಿಕಾರಿ ಎಸ್. ಬಾಲಚಂದ್ರನ್ ಅವರು ಮೀಸಲಾತಿ ಉದ್ದೇಶಗಳು ಮತ್ತು ಖಾಸಗೀಕರಣ ಕುರಿತು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗೀರಥಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಇದ್ದರು.

ಬುಧವಾರ ಜನ್ಮದಿನಾಚರಣೆ ಸಮಾರಂಭ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮದಿನ ಆಚರಣೆ ಸಮಾರಂಭವನ್ನು ಬುಧವಾರ (ಏಪ್ರಿಲ್ 13) ಬೆಳಿಗ್ಗೆ 11ಗಂಟೆಗೆ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಟಿ.ನರಸೀಪುರದ ನಳಂದ ಬುದ್ದ ವಿಹಾರದ ಭೋದಿರತ್ನ ಬಂತೇಜಿ, ಹಿರಿಯೂರಿನ ಶ್ರೀ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿರವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಎಲ್.ಎನ್.ಮುಕುಂದರಾಜ್ ಮುಖ್ಯ ಭಾಷಣ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT