ಸಂತೇಮರಹಳ್ಳಿ: ಇಲ್ಲಿನ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭೀಮನ ಅಮವಾಸ್ಯೆ ಅಂಗವಾಗಿ ಸೋಮವಾರ ವಿಜೃಂಭಣೆಯಿಂದ ನಡೆದ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.
ನಸುಕಿನಿಂದಲೇ ದೇವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಾಡಿ ಪುಷ್ಬಲಂಕಾರದ ಬಳಿಕ ವಿವಿಧ ಪೂಜೆಗಳನ್ನು ಸಲ್ಲಿಸಿ ಮಹಾಮಂಗಳಾರತಿ, ಧಾರ್ಮಿಕ ಕಾರ್ಯಗಳು ನಡೆದವು.
ನಂತರ ದೇವಸ್ಥಾನದ ಸುತ್ತ ಹುಲಿವಾಹನ ದೇವರ ಮೂರ್ತಿಯನ್ನು ವಾದ್ಯ ಮೇಳಗಳೊಂದಿಗೆ ಪ್ರದಕ್ಷಿಣೆ ಹಾಕಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಜಾತ್ರೆ ನಿಮಿತ್ತ ದೇವಸ್ಥಾನವನ್ನು ಸಿಂಗರಿಸಲಾಗಿತ್ತು. ಬಸ್ ನಿಲ್ದಾಣದ ವರೆಗೆ ವಿದ್ಯುತ್ ದೀಪ ಹಾಗೂ ತಳಿರು, ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.
ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಂಗ್ರಹಿಸಿದ್ದ ಆಹಾರ ಪದಾರ್ಥಗಳನ್ನು ಟ್ರಾಕ್ಟರ್‌ಗಳಲ್ಲಿ ತುಂಬಿ ಮಠಾಧ್ಯಕ್ಷರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದ ಪ್ರಸಾದ ನಿಲಯಕ್ಕೆ ತರಲಾಯಿತು. ವಿವಿಧ ಮಠಾಧ್ಯಕ್ಷರು ಆಗಮಿಸಿ ದಾಸೋಹಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಹಿಂಭಾಗ ವಿಶಾಲವಾದ ಮೈದಾನದಲ್ಲಿ ಶಾಮಿಯಾನ ಹಾಕಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ದೇವಸ್ಥಾನದ ಮುಂಭಾಗ ಆಟಿಕೆ ವಸ್ತುಗಳು ಹಾಗೂ ತಿಂಡಿ ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಶಂಕರೇಶ್ವರ ಬೆಟ್ಟದಲ್ಲಿ ಜಾತ್ರೆ ಮಂಗಲ ಹಾಗೂ ಯಡಿಯೂರು ಗ್ರಾಮಗಳ ನಡುವೆ ಇರುವ ಶಂಕರೇಶ್ವರ ಬೆಟ್ಟದಲ್ಲಿ ಸೋಮವಾರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಬೆಟ್ಟ ಹತ್ತಿ ಶಂಕರೇಶ್ವರನ ದರ್ಶನ ಪಡೆದರು. ಮಂಗಲ ಯಡಿಯೂರು ಮಹಾಂತಳಪುರ ಹುಲ್ಲೇಪುರ ಕರಡಿ ಮೋಳೆ ಹಾಗೂ ಮಂಗಲ ಹೊಸೂರಿನ ಗ್ರಾಮಸ್ಥರು ದೇವಸ್ಥಾನಕ್ಕೆ ಬಂದಿದ್ದವರಿಗೆ ಅನ್ನ ಸಂತರ್ಪಣೆ ನಡೆಸಿಕೊಟ್ಟರು. ಜಾತ್ರಾ ಮಹೋತ್ಸವ ಅಂಗವಾಗಿ ಬೆಟ್ಟದ ತಪ್ಪಲಿನಲ್ಲಿ ದೇವರ ಭಕ್ತಿ ಗೀತೆಗಳು ಹಾಗೂ ಹರಿಕಥೆಯನ್ನು ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.