ಗುರುವಾರ , ನವೆಂಬರ್ 26, 2020
21 °C
ಜಿಲ್ಲೆಗೆ 90 ಉಪ ವಲಯ ಅರಣ್ಯಧಿಕಾರಿ ಹುದ್ದೆ ಮಂಜೂರು, ಮೊದಲ ಹಂತದಲ್ಲಿ 31 ಸಿಬ್ಬಂದಿ ನೇಮಕ

ಚಾಮರಾಜನಗರ: ಅರಣ್ಯ ಇಲಾಖೆಯಲ್ಲೂ ಕ್ಷಿಪ್ರ ಕಾರ್ಯಪಡೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಯಾವುದಾದರೂ ಅರಣ್ಯದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅಥವಾ ಹೆಚ್ಚುವರಿ ಕೆಲಸಗಳನ್ನು ನಿಭಾಯಿಸುವುದಕ್ಕಾಗಿ ಆರು ಉಪ ವಲಯ ಅರಣ್ಯ ಅಧಿಕಾರಿಗಳನ್ನೊಳಗೊಂಡ (ಡಿಆರ್‌ಎಫ್‌ಒ) ಪ್ರತ್ಯೇಕ ತಂಡವೊಂದನ್ನು ರಚಿಸಲಾಗಿದೆ.

ಚಾಮರಾಜನಗರದ ಪ್ರಾದೇಶಿಕ ವೃತ್ತದಲ್ಲಿ ಇಂತಹ ಒಂದು ತಂಡವನ್ನು ರಚಿಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಕ್ಷಿಪ್ರ ಕಾರ್ಯ ಪಡೆ ಮಾದರಿಯಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸದ್ಯಕ್ಕೆ ಅದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿದೆ. 

‘ಆರು ಡಿಆರ್‌ಎಫ್‌ಒಗಳನ್ನು ಸೇರಿಸಿ ಪ್ರತ್ಯೇಕ ತಂಡವೊಂದನ್ನು ರಚಿಸಿದ್ದೇವೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಂಡವನ್ನು ನಿಯೋಜಿಸಲಾಗಿದೆ. ಆದರೆ, ಅಲ್ಲಿಗೆ ಇದು ಮಾತ್ರ ಮೀಸಲು ಅಲ್ಲ. ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದವರೂ ಅರಣ್ಯ ಸಂರಕ್ಷಣೆ ಕಾರ್ಯಕ್ಕೆ ತಂಡವನ್ನು ಬಳಸಿಕೊಳ್ಳಬಹುದು ’ ಎಂದು ಮನೋಜ್‌ ಕುಮಾರ್‌ ಮೀನಾ ಅವರು ಹೇಳಿದರು. 

ಕೆಲಸ ಏನು?: ಪೊಲೀಸ್‌ ಇಲಾಖೆಯಲ್ಲಿ ಮೀಸಲು ಪಡೆ ಇರುವಂತೆ, ಈ ತಂಡವೂ ಕೂಡ ಮೀಸಲು ಕಾರ್ಯಕ್ಕೆ ಸೀಮಿತ. ತುರ್ತು ಪರಿಸ್ಥಿತಿಯಲ್ಲಿ ಆಯಾ ಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಈ ತಂಡ ನೆರವಾಗಲಿದೆ. 

‘ತುರ್ತು ಸಂದರ್ಭದಲ್ಲಿ ಇಲಾಖೆಯು ಈ ತಂಡದ ನೆರವನ್ನು ಪಡೆಯಬಹುದು. ಉದಾಹರಣೆಗೆ ಕಾಳ್ಗಿಚ್ಚು ಉಂಟಾದ ಸಂದರ್ಭದಲ್ಲಿ ಅಥವಾ ಕಳ್ಳಬೇಟೆ ಪ್ರಕರಣಗಳಲ್ಲಿ ತನಿಖೆಯ ವೇಳೆ... ಹೀಗೆ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಕ್ಕೆ ಈ ತಂಡ ನೆರವಾಗಲಿದೆ’ ಎಂದು ಮನೋ‌ಜ್‌ ಕುಮಾರ್‌ ಅವರು ವಿವರಿಸಿದರು. 

‘ಸದ್ಯಕ್ಕೆ ತಂಡವನ್ನು ಮಾತ್ರ ರಚಿಸಲಾಗಿದೆ. ಇದಕ್ಕೆ ಪ್ರತ್ಯೇಕ ವಾಹನ ಹಾಗೂ ಉಪಕರಣಗಳ ಅಗತ್ಯವಿದೆ. ಅದನ್ನು ಶೀಘ್ರದಲ್ಲಿ ಕೊಡಿಸಲಾಗುವುದು. ಇಲಾಖೆಗೆ ಪತ್ರ ಬರೆದು, ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

90 ಡಿಆರ್‌ಎಫ್‌ಒ ಹುದ್ದೆ ಮಂಜೂರು: ಸಿಬ್ಬಂದಿ ಕೊರತೆಯನ್ನು ನೀಗಿಸುವ ಸಲುವಾಗಿ ಅರಣ್ಯ ಇಲಾಖೆ ಚಾಮರಾಜನಗರ ವೃತ್ತಕ್ಕೆ 90 ಉಪ ವಲಯ ಅರಣ್ಯ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದು, ಹಂತ ಹಂತವಾಗಿ ನೇಮಕ ಮಾಡಲಿದೆ. 

‘ಮೊದಲ ಹಂತದಲ್ಲಿ 31 ಹುದ್ದೆಗಳಿಗೆ ನೇಮಕ ಮಾಡಲಾಗಿದ್ದು, 25 ಮಂದಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಇಲಾಖೆಯನ್ನು ಇನ್ನಷ್ಟು ಬಲಪ‍ಡಿಸಲಾಗುವುದು’ ಎಂದು ಮನೋಜ್‌ ಕುಮಾರ್‌ ಅವರು ಹೇಳಿದರು. 

ಸಂರಕ್ಷಣೆಗೆ ಅನುಕೂಲ: ‘ಹೆಚ್ಚು ಹುದ್ದೆಗಳನ್ನು ನೀಡಿರುವುದರಿಂದ ಅರಣ್ಯ ಸಂರಕ್ಷಣಾ ಕಾರ್ಯಕ್ಕೆ ಅನುಕೂಲವಾಗಲಿದೆ. ನೇಮಕಗೊಂಡವರಲ್ಲಿ ಕೆಲವರನ್ನು ಗುಪ್ತಚರ ಮಾಹಿತಿ ಕಲೆ ಹಾಕುವುದಕ್ಕಾಗಿಯೇ ನಿಯೋಜಿಸಲಾಗುತ್ತಿದೆ. ಇನ್ನೂ ಕೆಲವರನ್ನು ನ್ಯಾಯಾಲಯದ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಇದುವರೆಗೆ ಅರಣ್ಯದಲ್ಲಿ ಕರ್ತವ್ಯದಲ್ಲೇ ಇದ್ದ ಸಿಬ್ಬಂದಿ ಇದನ್ನೆಲ್ಲ ಮಾಡುತ್ತಿದ್ದರು. ಇನ್ನು ಮುಂದೆ ಹೊಸದಾಗಿ ನೇಮಕಗೊಂಡವರು ಈ ಕೆಲಸ ಮಾಡಲಿದ್ದಾರೆ. ಹಾಗಾಗಿ ಅರಣ್ಯದಲ್ಲಿ ಕರ್ತವ್ಯದಲ್ಲಿದ್ದವರ ಮೇಲೆ ಇದ್ದ ಹೊರೆ ಕಡಿಮೆಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು