ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಮದ್ದೂರು ಎಳೆ ಪಿಳ್ಳಾರಿ ದೇವಾಲಯದಲ್ಲಿ ಶುಕ್ರವಾರ ಪಾರ್ವತಿ ದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಗೌರಿಯ ಪ್ರತಿರೂಪವಾದ ಪಾರ್ವತಿ ದೇವಿ ಹಾಗೂ ಮಹಾ ಗಣಪತಿ ದೇವಾಲಯಗಳಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಪ್ರತಿ ವರ್ಷ ಸುತ್ತಮುತ್ತಲ ಗ್ರಾಮಗಳ ಭಕ್ತರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಗೌರಿ –ಗಣೇಶ ಹಬ್ಬದ ದಿವಸ ಭಾದ್ರಪದ ಶುದ್ಧ ದ್ವಾದಶಿ ಶ್ರಾವಣ ನಕ್ಷತ್ರದಲ್ಲಿ ಪಾರ್ವತಿ ದೇವಿಗೆ ಬೆಳ್ಳಿ ಆಭರಣಗಳಿಂದ ಅಲಂಕರಿಸಿ, ಬಗೆಬಗೆ ಪುಷ್ಪಗಳಿಂದ ಸಿಂಗರಿಸಿ ಭಕ್ತಿ ಸಮರ್ಪಿಸಿದರು.
ಭಕ್ತರು ದೇಗುಲದಲ್ಲಿ ಹಣ್ಣು ಕಾಯಿ ಪೂಜೆ ಮಾಡಿ ಗಂಗಾ ಪೂಜೆ ನೆರವೇರಿಸಿದರು. ಶನಿವಾರ ಮುಂಜಾನೆ ಮಹಾ ಗಣಪತಿ ಮೂರ್ತಿಗಳಿಗೆ ಹೊಸ ವಸ್ತ್ರ ತೊಡಿಸಿ, ಗಂಧ, ಅರಿಸಿನ, ಕುಂಕಮಗಳ ಸಿಂಚನ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅರ್ಚಕರು ಹೇಳಿದರು.