ಸೋಮವಾರ, ಜೂನ್ 14, 2021
26 °C
ಜಿಲ್ಲೆಯ ಉತ್ತಮ ಸಾಧನೆ, ನಾಲ್ಕು ಸ್ಥಾನ ಮೇಲಕ್ಕೆ, ರಾಜ್ಯಕ್ಕೆ 11ನೇ ಸ್ಥಾನ

ಎಸ್ಸೆಸ್ಸೆಲ್ಸಿ: ಚಾಮರಾಜನಗರ ಜಿಲ್ಲೆಗೇ ಮೇಘನಾ ಮೊದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಉತ್ತಮ ಫಲಿತಾಂಶ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ನಾಲ್ಕು ಸ್ಥಾನ ಮೇಲೇರಿ ರಾಜ್ಯಕ್ಕೆ 11ನೇ ಸ್ಥಾನಗಳಿಸಿದೆ.

ಶ್ರೇಣಿಕೃತ ರ‍್ಯಾಂಕಿಂಗ್‌ನಲ್ಲಿ ಜಿಲ್ಲೆಯು ‘ಬಿ’ ಶ್ರೇಣಿ ಪ‍ಡೆದಿದ್ದು (ಶೇ 60ರಿಂದ 75% ಫಲಿತಾಂಶ), ಈ ಶ್ರೇಣಿ ಪಡೆದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 

ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಎಂ. ಅವರು 625ಕ್ಕೆ 621 ಅಂಕಗಳನ್ನು (ಶೇ 99.36) ಗಳಿಸುವ ಮೂಲಕ, ಜಿಲ್ಲೆಗೆ ಮೊದಲ ಸ್ಥಾನಗಳಿಸಿದ್ದಾರೆ. 

ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಲಾ ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಯಶಸ್ವಿನಿ ಎಂ. ಹಾಗೂ ಗುಂಡ್ಲುಪೇಟೆಯ ಸೇಂಟ್‌ ಜಾನ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ಖುಷಿ ಎಂ.ಡಿ. 619 ಅಂಕಗಳನ್ನು (ಶೇ 99.04) ಗಳಿಸಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದ್ದಾರೆ. 

ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಶ್ರೀಕೃತಾ ಕೆ.ಎಸ್‌ ಹಾಗೂ ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ಮೇಘನಾ ಜಿ.ಎಸ್‌. ಅವರು 618 ಅಂಕಗಳನ್ನು (ಶೇ 98.88) ಗಳಿಸಿ ಮೂರನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. 

ಮೊದಲ ಮೂರು ಸ್ಥಾನಗಳನ್ನು ಗಳಿಸಿದವರೆಲ್ಲರೂ ವಿದ್ಯಾರ್ಥಿನಿಯರು ಎಂಬುದು ವಿಶೇಷ‌. ಮೊದಲ, ಎರಡನೇ ಮತ್ತು ಮೂರನೇ ಸ್ಥಾನಗಳಿರುವವರು ಸರ್ಕಾರಿ ಆದರ್ಶ ವಿದ್ಯಾಲಯದ ಮಕ್ಕಳು ಎಂಬುದು ಗಮನಾರ್ಹ. ಇನ್ನುಳಿದ ಇಬ್ಬರು ಖಾಸಗಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳ ವಿದ್ಯಾರ್ಥಿನಿಯರು.  

ಜಿಲ್ಲಾವಾರು ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ಎಷ್ಟು ಮಂದಿ ತೇರ್ಗಡೆಹೊಂದಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. 

ವಲಯಾವಾರು ಫಲಿತಾಂಶ: ಶೈಕ್ಷಣಿಕ ವಲಯಾವಾರು ಫಲಿತಾಂಶವನ್ನು ನೋಡುವುದಾದರೆ, ಹನೂರು, ಕೊಳ್ಳೇಗಾಲ ಮತ್ತು ಯಳಂದೂರು ‘ಎ’ ಶ್ರೇಣಿ ಪಡೆದಿವೆ (ಶೇ 75ಕ್ಕಿಂತಲೂ ಹೆಚ್ಚಿನ ಫಲಿತಾಂಶ), ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಲಯ ‘ಬಿ’ ಶ್ರೇಣಿ ಗಳಿಸಿವೆ (ಶೇ 60ರಿಂದ ಶೇ 75 ಫಲಿತಾಂಶ). ಕಳೆದ ವರ್ಷ ಶೇ 62.36ರಷ್ಟು ಫಲಿತಾಂಶ ದಾಖಲಿಸಿ ಕಳಪೆ ಸಾಧನೆ ಮಾಡಿದ್ದ ಗುಂಡ್ಲುಪೇಟೆ ಈ ಬಾರಿ ಉತ್ತಮ ಸಾಧನೆ ಮಾಡಿದೆ. 

ಜಿಲ್ಲೆಯ 114 ಶಾಲೆಗಳು ‘ಎ’ ಶ್ರೇಣಿ,  62 ಶಾಲೆಗಳು ‘ಬಿ’ ಶ್ರೇಣಿ ಹಾಗೂ 32 ಶಾಲೆಗಳು ‘ಸಿ’ ಶ್ರೇಣಿಯ (ಶೇ 60ಕ್ಕಿಂತ ಕಡಿಮೆ ಫಲಿತಾಂಶ) ಫಲಿತಾಂಶ ದಾಖಲಿಸಿವೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೋವಿಡ್‌ ಹಾವಳಿಯ ನಡುವೆಯೂ ಜಿಲ್ಲೆಯ ಶಾಲೆಗಳು ಉತ್ತಮ ಫಲಿತಾಂಶ ದಾಖಲಿಸಿವೆ. ರಾಜ್ಯಮಟ್ಟದಲ್ಲಿ ನಾಲ್ಕು ಸ್ಥಾನ ಮೇಲೇರಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

ಕೋವಿಡ್‌ ಭಯ ಕಾಡಲಿಲ್ಲ: ಮೇಘನಾ

621 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲಿಗರಾಗಿರುವ ಮೇಘನಾ ಎಂ. ಅವರು ಕೊಳ್ಳೇಗಾಲದ ಮಹೇಶ್‌ ಹಾಗೂ ರೂಪಾ ದಂಪ‍ತಿಯ ಮಗಳು. ಮಹೇಶ್‌ ಅವರು ಪೊಲೀಸ್‌ ಇಲಾಖೆಯಲ್ಲಿ ಚಾಲಕರಾಗಿದ್ದರೆ, ರೂಪಾ ಗೃಹಿಣಿ. ಮಗಳ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. 

ಹೆಚ್ಚು ಅಂಕಗಳಿಸಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡಿರುವ ಅವರು, ‘ನಾನು ಉತ್ತಮ ಅಂಕಗಳಿಸಿರುವುದಕ್ಕೆ ನನ್ನ ಪೋಷಕರು ಮತ್ತು ಶಿಕ್ಷಕರು ಕಾರಣ. ಮುಂದೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಆಸೆ ಇದೆ. ಆ ನಿಟ್ಟಿನಲ್ಲಿ ನನ್ನ ಶಿಕ್ಷಣವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು. 

ಪರೀಕ್ಷೆ ಬರೆಯುವಾಗ ಕೋವಿಡ್‌ ಭಯ ಆವರಿಸಿತ್ತೇ ಎಂದು ಕೇಳಿದ್ದಕ್ಕೆ, ‘ನಾನು ಕೋವಿಡ್‌ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಪರೀಕ್ಷೆ ಬರೆಯುವುದಷ್ಟೇ ನನ್ನ ಗುರಿಯಾಗಿತ್ತು. ಸೋಂಕು ತಡೆಯುವುದಕ್ಕೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೆ’ ಎಂದು ಮೇಘನಾ ಹೇಳಿದರು. 

ಪ್ರತಿ ದಿನದ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ. ಉತ್ತಮ ಸಾಧನೆ ಮಾಡುವ ಉದ್ದೇಶದಿಂದ ಟ್ಯೂಷನ್‌ ಕೂಡ ಪಡೆದಿದ್ದೆ ಎಂದು ಅವರು ವಿವರಿಸಿದರು.

ಮೇಘನಾ ಅವರು ಪ್ರಥಮ ಭಾಷೆ ಇಂಗ್ಲಿಷ್‌ನಲ್ಲಿ 124, ಕನ್ನಡದಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 98, ವಿಜ್ಞಾನದಲ್ಲಿ 100 ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. 

ದೃಷ್ಟಿ ದೋಷ ಹೊಂದಿರುವ ಗೌರಮ್ಮ ಪಾಸ್‌

ಅರ್ಧದಲ್ಲೇ ಬಿಟ್ಟಿದ್ದ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂದು ಪಣತೊಟ್ಟು, ದೃಷ್ಟಿ ದೋಷ ಹೊಂದಿದ್ದರೂ ಖಾಸಗಿ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ, ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿಯ ಗೌರಮ್ಮ ಅವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

625ಕ್ಕೆ 314 ಅಂಕಗಳನ್ನು (ಶೇ 50.24) ಅವರು ಗಳಿಸಿದ್ದಾರೆ. ಕನ್ನಡದಲ್ಲಿ 44, ಇಂಗ್ಲಿಷ್‌ನಲ್ಲಿ 38, ಹಿಂದಿಯಲ್ಲಿ 50, ಅರ್ಥಶಾಸ್ತ್ರದಲ್ಲಿ 72, ರಾಜ್ಯಶಾಸ್ತ್ರದಲ್ಲಿ 54 ಮತ್ತು ಸಮಾಜ ವಿಜ್ಞಾನದಲ್ಲಿ 56 ಅಂಕಗಳನ್ನು ಅವರು ಗಳಿಸಿದ್ದಾರೆ. 

 

ಸಾಧಕರು ಏನು ಹೇಳುತ್ತಾರೆ...?

ಉತ್ತಮ ಅಂಕ ಬಂದಿರುವುದಕ್ಕೆ ಖುಷಿ ಇದೆ. ಪರೀಕ್ಷೆ ಬರೆಯುವಾಗ ಕೊರೊನಾ ಆತಂಕ ಇತ್ತು. ಆದರೂ ಧೈರ್ಯ ಮಾಡಿ ಪರೀಕ್ಷೆ ಬರೆದು ಶಾಲೆಗೆ ಕೀರ್ತಿ ತಂದಿದ್ದೇನೆ. ಮುಂದೆ ವೈದ್ಯೆಯಾಗಬೇಕು ಎಂಬ ಕನಸು ಇದೆ ಎಂದು ತೃತೀಯ ಸ್ಥಾನ ಪಡೆದ ನಿಸರ್ಗ ವಿದ್ಯಾನಿಕೇತನ ಶಾಲೆಯ ಶ್ರೀಕೃತಾ ಹೇಳಿದರು.

ಯಾವುದೇ ವಿಶೇಷ ಕೋಚಿಂಗ್‌ಗೆ ಹೋಗಿರಲಿಲ್ಲ. ಮನೆಯಲ್ಲಿ ಕುಳಿತು ಅಧ್ಯಯನ ಮಾಡಿದೆ. ಶಿಕ್ಷಕರ ಮತ್ತು ಪೋಷಕರ ಬೆಂಬಲ ಚೆನ್ನಾಗಿತ್ತು. ಉತ್ತಮ ಅಂಕಗಳನ್ನು ನಿರೀಕ್ಷೆ ಮಾಡಿದ್ದೆ ಅದರಂತೆಯೇ ಬಂದಿದೆ. ಕೋವಿಡ್ ಸಮಯದಲ್ಲಿ ಪರೀಕ್ಷೆ ಬರೆಯುವಾಗ ಭಯ ಆಗಲಿಲ್ಲ. ಹೆಚ್ಚು ಅಭ್ಯಾಸ ಮಾಡಲು ಕೋವಿಡ್‌–19 ಸಹಕಾರಿ ಆಯಿತು ಎಂದು ತೃತೀಯ ಸ್ಥಾನ ಪಡೆದ ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ಮೇಘನಾ ಜಿ.ಎಸ್. ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು