ಚಾಮರಾಜನಗರ: ‘ಪರೀಕ್ಷೆ ಎಂದಾಕ್ಷಣ ಒತ್ತಡಕ್ಕೆ ಒಳಗಾಗಬೇಡಿ. ಚೆನ್ನಾಗಿ ನಿದ್ದೆ, ಊಟ ಮಾಡಿ. ಆರೋಗ್ಯದ ಕಡೆಗೆ ಗಮನ ಇರಲಿ. ಮೊಬೈಲ್, ಟಿವಿಯಿಂದ ದೂರ ಇರಿ. ಆಟ ಕಡಿಮೆ ಮಾಡಿ, ಓದು ಜಾಸ್ತಿ ಮಾಡಿ. ಈಗಾಗಲೇ ಅಭ್ಯಾಸ ಮಾಡಿದ್ದನ್ನು ಪುನರ್‌ಮನನ ಮಾಡಿಕೊಳ್ಳಿ. ಧೈರ್ಯದಿಂದ ಪರೀಕ್ಷೆ ಎದುರಿಸಿ...’
– ಇದೇ 31ರಿಂದ 2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜುಗೊಂಡಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಎನ್.ಮಂಜುನಾಥ ನೀಡಿದ ಕಿವಿಮಾತು ಇದು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ‘ಫೋನ್– ಇನ್’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕರೆ ಮಾಡಿ ಪರೀಕ್ಷಾ ಭಯ, ಒತ್ತಡ, ಕೈಗೊಂಡಿರುವ ಸಿದ್ಧತೆಗಳು, ಪ್ರಶ್ನೆ ಪತ್ರಿಕೆಗಳ ಸ್ವರೂಪ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದರು. ಎಲ್ಲ ಪ್ರಶ್ನೆಗಳಿಗೂ ವಿವರವಾದ ಉತ್ತರ ನೀಡಿದ ಮಂಜುನಾಥ, ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲ ನಿವಾರಿಸಿದರು.
ಭಯ ಬೇಡ: ಬಹುತೇಕ ವಿದ್ಯಾರ್ಥಿಗಳು ಪೋಷಕರು ಪರೀಕ್ಷಾ ಒತ್ತಡ ಮತ್ತು ಭಯದ ಬಗ್ಗೆಯೇ ಪ್ರಶ್ನೆಗಳನ್ನು ಕೇಳಿದರು.
ಕೊಳ್ಳೇಗಾಲದಿಂದ ಕರೆ ಮಾಡಿದ್ದ ಪೋಷಕ ಪರಶಿವಮೂರ್ತಿ, ‘ಮಗಳು ಪರೀಕ್ಷೆ ಬಗ್ಗೆ ಭಯ ಪಡುತ್ತಿದ್ದಾಳೆ. ಇದಕ್ಕೆ ಏನು ಮಾಡಬೇಕು’ ಎಂದು ಕೇಳಿದರು.
ಹನೂರು ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಧನಲಕ್ಷ್ಮಿ, ಯಳಂದೂರು ಜೆಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನಾ ಪಿ, ಸಂತೇಮರಹಳ್ಳಿ ಪ್ರೌಢಶಾಲೆಯ ಋಷಿ ಆನಂದ್, ಯಳಂದೂರು ತಾಲ್ಲೂಕಿನ ಗೌಡಹಳ್ಳಿಯ ಜೆಎಸ್‌ಎಸ್ ಶಾಲೆಯ ಪವಿತ್ರ, ಸಂತೇಮರಹಳ್ಳಿಯ ವಿದ್ಯಾರ್ಥಿನಿ ಐಶ್ವರ್ಯ ಅವರು ಕೂಡ ಪರೀಕ್ಷಾ ಭಯ, ಒತ್ತಡದ ಬಗ್ಗೆಯೇ ಕೇಳಿದರು.
ಸಂಜನಾ ಮತ್ತು ಐಶ್ವರ್ಯ ಅವರು, ‘ನಾವು ತುಂಬಾ ಅಂಕಗಳನ್ನು ತೆಗೆಯಬೇಕು ಎಂಬ ನಿರೀಕ್ಷೆಯನ್ನು ಮನೆಯವರು ಹೊಂದಿದ್ದಾರೆ. ಒಂದು ವೇಳೆ ಅಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಹೋದರೆ ಎಂಬ ಭಯ ನಮ್ಮನ್ನು ಕಾಡುತ್ತಿದೆ‘ ಎಂದು ಅಳಲನ್ನೂ ತೋಡಿಕೊಂಡರು.
ಎಲ್ಲರ ಕರೆಗಳಿಗೂ ಉತ್ತರಿಸಿದ ಡಿಡಿಪಿಐ ಮಂಜುನಾಥ, ‘ಪರೀಕ್ಷೆ ಬಗ್ಗೆ ಭಯ ಪಡಬೇಕಾಗಿಲ್ಲ. ಹೆಚ್ಚು ಒತ್ತಡಕ್ಕೂ ಒಳಗಬೇಕಾಗಿಲ್ಲ. ಇಂತಿಷ್ಟೇ ಅಂಕಗಳು ಬರಬೇಕು ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಮಾಡಿರುವ ಪಾಠವನ್ನು ಚೆನ್ನಾಗಿ ಅಭ್ಯಾಸ ಮಾಡಿ. ಪುನರ್ ಮನನ ಮಾಡಿಕೊಳ್ಳಿ. ಇನ್ನು ಪರೀಕ್ಷೆಗೆ ಮೂರೇ ದಿನಗಳಿರುವುದರಿಂದ ಹೊಸ ಹೊಸ ಮಾದರಿ ಪ್ರಶ್ನೆ ಪತ್ರಿಕೆಗಳು, ಹೊಸ ಹೊಸ ನೋಟ್ಸ್‌ಗಳ ಬಗ್ಗೆ ಗಮನ ಹರಿಸಬೇಡಿ. ಈಗಾಗಲೇ ಶಾಲೆಯಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳ ಬಗ್ಗೆ ತಿಳಿಸಲಾಗಿದೆ. ತೆರೆದ ಪುಸ್ತಕ ಪರೀಕ್ಷೆ ಮಾಡಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಮಾಡಲಾಗಿದೆ. ಪರೀಕ್ಷೆ ಹೇಗಿರುತ್ತದೆ ಎಂಬ ಕಲ್ಪನೆ ಸಿಕ್ಕಿದೆ. ಅದರಂತೆಯೇ ಅಂತಿಮ ಪರೀಕ್ಷೆಯೂ ಇರಲಿದೆ’ ಎಂದರು.
‘ಯಾವುದೇ ವಿಷಯ ಅರ್ಥವಾಗದಿದ್ದರೆ, ಅಥವಾ ಕಷ್ಟವಿದ್ದರೆ, ಶಿಕ್ಷಕರನ್ನು ಕೇಳಿ. ಅರ್ಥವಾಗದ ವಿಷಯವನ್ನು ಬರೆದು ಅಭ್ಯಾಸ ಮಾಡಿ. ನಿರೀಕ್ಷಿಸಿದಷ್ಟು ಅಂಕ ಸಿಗದಿದ್ದರೆ ಪೋಷಕರು, ಮನೆಯವರು, ಸ್ನೇಹಿತರು ಏನಂದುಕೊಳ್ಳುತ್ತಾರೋ ಎಂಬ ಆತಂಕವನ್ನು ಬಿಟ್ಟುಬಿಡಿ. ನಿಮ್ಮ ಜೀವನ ನಿಮ್ಮದು ಎಂಬುದು ತಿಳಿದಿರಲಿ. ಯಾವುದೇ ಚಿಂತನೆ, ಯೋಚನೆಗಳನ್ನು ಬಿಟ್ಟು ಹಗುರ ಮನಸ್ಸಿನಿಂದ, ಧೈರ್ಯವಾಗಿ ಪರೀಕ್ಷೆ ಎದುರಿಸಿ. ಖಂಡಿತವಾಗಿಯೂ ಉತ್ತಮ ಅಂಕಗಳು ಸಿಗುತ್ತವೆ’ ಎಂದರು.
ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ: ಹಲವು ವಿದ್ಯಾರ್ಥಿಗಳು ಪರೀಕ್ಷೆ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.
ಹನೂರು ತಾಲ್ಲೂಕಿನ ಮಂಗಲದ ವಿದ್ಯಾರ್ಥಿನಿ ಧನಲಕ್ಷ್ಮಿ, ಸಂತೇಮರಹಳ್ಳಿಯ ಪೋಷಕ ಪ್ರವೀಣ್, ಉಚಿತ ಬಸ್ ಸೌಲಭ್ಯ ವಿದ್ಯಾರ್ಥಿಗಳಿಗೆ ಮಾತ್ರವೇ? ಅಥವಾ ಜೊತೆಗೆ ಬರುವ ಶಿಕ್ಷಕರು, ಪೋಷಕರಿಗೂ ಸಿಗುತ್ತದೆಯೇ’ ಎಂದು ಕೇಳಿದಳು. ಚಾಮರಾಜನಗರ ತಾಲ್ಲೂಕಿನ ನವಿಲೂರಿನ ಶರತ್ ಎಂಬ ವಿದ್ಯಾರ್ಥಿ, ನಮ್ಮ ಊರಿಗೆ ಬೆಳಿಗ್ಗೆ 7.30ಕ್ಕೆ ಬಸ್ ಬರುತ್ತದೆ. ಪರೀಕ್ಷೆ ದಿನ ಕೊಂಚ ತಡವಾಗಿ ಬಸ್ ಸೌಲಭ್ಯ ಸಿಗಲಿದೆಯೇ ಎಂದು ಪ್ರಶ್ನಿಸಿದ.
ಈ ಪ್ರಶ್ನೆಗಳಿಗೆ ಉತ್ತರಿಸಿದ ಡಿಡಿಪಿಐ, ‘ಪರೀಕ್ಷಾ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪ್ರಯಾಣ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ಕಲ್ಪಿಸಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಶಿಕ್ಷಕರು, ಪೋಷಕರಿಗೆ ಇದು ಅನ್ವಯವಾಗುವುದಿಲ್ಲ. ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆಯಾಗದು. ಈಗಿರುವ ವೇಳಾಪಟ್ಟಿಯಂತೆಯೇ ಬಸ್ ಸಂಚರಿಸಲಿದೆ. ವಿದ್ಯಾರ್ಥಿಗಳು ಸಮೀಪದ ಬಸ್ ತಂಗುದಾಣಗಳಲ್ಲಿ ನಿಲ್ಲುವುದು ಒಳ್ಳೆಯದು. ದಾರಿ ಮಧ್ಯೆ ಬಸ್ ನಿಲ್ಲಿಸುವ ಸಾಧ್ಯತೆ ಕಡಿಮೆ’ ಎಂದು ಹೇಳಿದರು.
ಪೂರ್ಣಪಠ್ಯದ ಮೇಲೆ ಪರೀಕ್ಷೆ: ಸಂತೇಮರಹಳ್ಳಿಯಿಂದ ಕರೆ ಮಾಡಿದ್ದ ಪೋಷಕಿ ಅನಿತಾ, ಹನೂರು ಮಂಗಲದ ವಿದ್ಯಾರ್ಥಿನಿಗಳಾದ ಸಹನಾ, ಸೃಷ್ಟಿ ಅವರು ಪಠ್ಯ ಕ್ರಮ ಹಾಗೂ ಪ್ರಶ್ನೆ ಪತ್ರಿಕೆಗಳ ಸ್ವರೂಪದ ಬಗ್ಗೆ ತಮ್ಮಲ್ಲಿದ್ದ ಗೊಂದಲಗಳನ್ನು ಪ್ರಸ್ತಾಪಿಸಿದರು.
ಮಂಜುನಾಥ ಪ್ರತಿಕ್ರಿಯಿಸಿ, ‘ಈ ಬಾರಿ 2019–20ನೇ ಸಾಲಿನ ರೀತಿಯಲ್ಲೇ ಪೂರ್ಣ ಪಠ್ಯಕ್ರಮದ ಮೇಲೆ ಪರೀಕ್ಷೆಗಳು ನಡೆಯಲಿವೆ. ಕೋವಿಡ್ ಕಾರಣಕ್ಕೆ 2020–21ರಲ್ಲಿ ಎಲ್ಲ ವಿಷಯಗಳಿಗೆ ಎರಡು ಪರೀಕ್ಷೆಗಳನ್ನು ಮಾಡಲಾಗಿತ್ತು. ಕಳೆದ ವರ್ಷ ಪಠ್ಯದಲ್ಲಿ ಶೇ 30ರಷ್ಟನ್ನು ಕಡಿತಗೊಳಿಸಲಾಗಿತ್ತು. ಈ ಬಾರಿ ಕೋವಿಡ್ ಸಮಸ್ಯೆ ಇರಲಿಲ್ಲ. ಕಳೆದ ವರ್ಷ ಜೂನ್ 1ರ ಬದಲು ಮೇ 15ರಿಂದಲೇ ತರಗತಿಗಳನ್ನು ಆರಂಭಿಸಲಾಗಿತ್ತು. ಎಲ್ಲ ಪಠ್ಯಗಳನ್ನು ಪೂರ್ಣಗೊಳಿಸಲಾಗಿದೆ. ಈಗಾಗಲೇ ಪ್ರಶ್ನೆ ಪತ್ರಿಕೆಗಳ ಸ್ವರೂಪ ಹೇಗಿರಲಿದೆ ಎಂಬುದನ್ನು ವಿವರಿಸಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಗಳನ್ನೂ ನಡೆಸಲಾಗಿದೆ. ಅದೇ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳು ಇರಲಿವೆ’ ಎಂದು ವಿವರಿಸಿದರು.
‘ಓದುವುದಕ್ಕೆ ರಜೆ ಕೊಡಿ’
ಯಳಂದೂರಿನ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಕರೆ ಮಾಡಿ, ‘ನಮಗೆ ಓದುವುದಕ್ಕೆ ರಜೆ ಕೊಡುತ್ತಿಲ್ಲ. ಶಾಲೆಗೆ ಬನ್ನಿ ಎಂದು ಹೇಳುತ್ತಿದ್ದಾರೆ. ಮನೆಯಲ್ಲಿ ಓದುವುದಕ್ಕೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದಳು.
ಡಿಡಿಪಿಐ ಪ್ರತಿಕ್ರಿಯಿಸಿ, ‘ಹಲವು ಮಕ್ಕಳು ಮನೆಯಲ್ಲಿ ಓದುವುದಿಲ್ಲ. ಹಾಗಾಗಿ, ಶಾಲೆಗೆ ಬರಲಿ ಎಂದು ನಾವೇ ಸೂಚಿಸಿದ್ದೆವು. ನೀವು ಮನೆಯಲ್ಲಿ ಓದುತ್ತೀರಿ ಎಂದರೆ ರಜೆ ಹಾಕಿ ಓದಿ. ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ಮಾಡಬೇಕು’ ಎಂದು ಹೇಳಿದರು.
ಶಾಲೆಯ ಶಿಕ್ಷಕರೊಂದಿಗೆ ಮಾತನಾಡಿ, ‘ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕಬೇಡಿ. ಅವರಿಗೆ ಮನವರಿಕೆ ಮಾಡಿ. ಹಾಗಿದ್ದರೂ, ಮನೆಯಲ್ಲೇ ಓದುತ್ತೇವೆ ಎಂದರೆ ರಜೆ ಕೊಡಿ’ ಎಂದು ಸಲಹೆ ನೀಡಿದರು.
‘ಪರೀಕ್ಷೆಗೆ ಸಕಲ ಸಿದ್ಧತೆ’
‘ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 52 ಪರೀಕ್ಷಾ ಕೇಂದ್ರಗಳಿದ್ದು, ಈ ಪೈಕಿ 49 ಕೇಂದ್ರಗಳಲ್ಲಿ ಹೊಸಬರು ಪರೀಕ್ಷೆ ಬರೆಯಲಿದ್ದರೆ, ಎರಡು ಕೇಂದ್ರಗಳು ಖಾಸಗಿ ಅಭ್ಯರ್ಥಿಗಳಿಗೆ ಮೀಸಲಾಗಿವೆ’ ಎಂದು ಮಂಜುನಾಥ ಹೇಳಿದರು.
‘ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಕೇಂದ್ರದ ಸುತ್ತ ನಿಷೇಧಾಜ್ಞೆ, ಪೊಲೀಸ್ ಬಂದೋಬಸ್ತ್ ಹಾಕಲು ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ನಿರ್ವಹಣೆ: ಸೂರ್ಯನಾರಾಯಣ ವಿ.
ಚಿತ್ರ: ಸಿ.ಆರ್.ವೆಂಕಟರಾಮು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.