ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಫೀನಿಕ್ಸ್‌ ಹಕ್ಕಿಯಾಗುವುದೇ ಗುಂಡ್ಲುಪೇಟೆ?

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ, ಜಿಲ್ಲೆಯಲ್ಲೇ ಕೊನೆಯ ಸ್ಥಾನ, ಫಲಿತಾಂಶ ಹೆಚ್ಚಿಸಲು ಪಣ
Last Updated 17 ಮಾರ್ಚ್ 2022, 4:24 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಕಾರಣಕ್ಕೆ ಸತತವಾಗಿ ಜಿಲ್ಲೆಯಲ್ಲಿ ಕೊನೆ ಸ್ಥಾನವನ್ನೇ ಗಳಿಸುತ್ತಿರುವ ಗುಂಡ್ಲುಪೇಟೆ ಶೈ‌ಕ್ಷಣಿಕ ವಲಯವು ಈ ಬಾರಿ ಫಲಿತಾಂಶದಲ್ಲಿ ಫೀನಿಕ್ಸ್‌ ಹಕ್ಕಿಯಂತೆ ಮೇಲೆದ್ದು ಬರುವ ನಿರೀಕ್ಷೆ ಹೊಂದಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಫಲಿತಾಂಶ ಸುಧಾರಣೆಗಾಗಿ ಇನ್ನಿಲ್ಲದ ಶ್ರಮ ವಹಿಸುತ್ತಿದ್ದು, ಹಲವು ವಿನೂತನ ಕ್ರಮ ರೂಪಿಸಿದ್ದಾರೆ.

ಕಳೆದ ವರ್ಷದ ಫಲಿತಾಂಶ ಬಿಟ್ಟು (ಶೇ 74.50ರಷ್ಟು) ಅದರ ಹಿಂದಿನ ವರ್ಷಗಳೆಲ್ಲಾ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಬಂದಿಲ್ಲ. ತಾಲ್ಲೂಕಿನ ಕಳಪೆ ಪ್ರದರ್ಶನ ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಸ್ಥಾನ ಕಡಿಮೆಯಾಗುತ್ತಿದೆ.

ತಾಲ್ಲೂಕಿನಲ್ಲಿ 27 ಸರ್ಕಾರಿ ಪ್ರೌಢಶಾಲೆ, 14 ಅನುದಾನಿತ ಶಾಲೆ, ಎಂಟು ಖಾಸಗಿ ಶಾಲೆಗಳಿವೆ. ಸಾಮಾನ್ಯವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಅನುದಾನಿತ ಶಾಲೆಗಳಲ್ಲಿ ಕಡಿಮೆ ಮಕ್ಕಳು ತೇರ್ಗಡೆ ಹೊಂದುತ್ತಿದ್ದಾರೆ. ಇದು ತಾಲ್ಲೂಕಿನ ಫಲಿತಾಂಶ ಕುಸಿಯುವಂತೆ ಮಾಡುತ್ತಿದೆ ಎಂಬುದು ಅಧಿಕಾರಿಗಳ ಹೇಳಿಕೆ.

ಎರಡು ವರ್ಷಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಅನುದಾನಿತ ಶಾಲೆಗಳ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಕಳೆದ ವರ್ಷ ಅದರಲ್ಲಿ ಕೊಂಚ ಯಶಸ್ವಿಯೂ ಆಗಿದ್ದಾರೆ. ಈ ಬಾರಿ ಇನ್ನಷ್ಟು ಯಶಸ್ವಿಯಾಗುವ ನಿರೀಕ್ಷೆ ಅಧಿಕಾರಿಗಳದ್ದಾಗಿದೆ.

ಅಧಿಕಾರಿಗಳು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಶೈಕ್ಷಣಿಕ ಚಟುವಟಿಕೆ ಬಗ್ಗೆ ಗಮನ ಹರಿಸುತ್ತಿದ್ದಾರೆ. ಉತ್ತಮ ಫಲಿತಾಂಶಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಹಲವು ಕ್ರಮ: ಎಲ್ಲ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷೆ ಭಯ ನಿವಾರಣೆಗಾಗಿ ವಿಶೇಷ ಕಾರ್ಯಕ್ರಮ ನಡೆಸಲಾಗಿದೆ. ಆತ್ಮಸ್ಥೈರ್ಯ ತುಂಬುವಂ ತಹ ಚಟುವಟಿಕೆಗೆ ಒತ್ತು ನೀಡಲಾಗಿದೆ. ಬೇರೆ ಶಾಲೆಯ ನುರಿತ ಶಿಕ್ಷಕರನ್ನು ಕರೆಸಿ ಬೋಧನೆ ಮಾಡಿಸುವಂತಹ ಕ್ರಮ ತೆಗೆದುಕೊಳ್ಳಲಾಗಿದೆ.

‘ಶಾಲೆಗಳಲ್ಲಿ ತಾಯಂದಿರ ಸಭೆ ಕರೆದು, ಮನೆಯಲ್ಲಿ ಮಕ್ಕಳಿಗೆ ಓದಲು ಸಮಯ ನೀಡಬೇಕು. ಪರೀಕ್ಷೆ ಮುಕ್ತಾಯವಾಗುವವರೆಗೂ ಕೆಲಸ ಮಾಡಿಸಬೇಡಿ. ಬೆಳಿಗ್ಗೆ ಬೇಗ ಎದ್ದು ಅಭ್ಯಾಸ ಮಾಡುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಸೂಚಿಸಲಾಗಿದೆ’ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ.

ತೇರ್ಗಡೆ ಅಂಕ ಗಳಿಸುವುದು ಹೇಗೆ?

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ಉತ್ತೀರ್ಣವಾಗುವುದಕ್ಕೆ ಬೇಕಾದಷ್ಟು ಅಂಕಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಹೇಳಿಕೊಡಲಾಗುತ್ತಿದೆ.

ಉತ್ತಮವಾಗಿ ಅಭ್ಯಾಸ ಮಾಡುವವರಿಗೆ, ಹೆಚ್ಚು ಅಂಕ ಗಳಿಸುವ ಮಾರ್ಗ ಯಾವುದು? ಹೇಗೆ ಬರೆಯಬೇಕು? ಎಷ್ಟು ಬರೆಯಬೇಕು ಎಂಬುದರ ಬಗ್ಗೆ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ.

‘ಈಗಾಗಲೇ ತಾಲ್ಲೂಕಿನ ಶಾಲೆಗಳಲ್ಲಿ ಕಲಿಕಾ ಖಾತರಿ ಪರೀಕ್ಷೆ ಮಾಡಲಾಗಿದೆ. ಪಾಠಗಳ ಪುನರ್‌ ಮನನ ಮಾಡಲಾಗುತ್ತಿದೆ. ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಕಾರ್ಯಾಗಾರ ನಡೆಸಲಾಗಿದೆ. ಮಕ್ಕಳಿಗೆ ಅನುಕೂಲ ಆಗುವಂತೆ ಸಹಾಯ ವಾಣಿ ಆರಂಭಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳ ಪೋನ್ ನಂಬರ್ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅವರು ಯಾವುದೇ ಸಮಯದಲ್ಲಿ ಕರೆ ಮಾಡಿ ಮಾಹಿತಿ ಕೇಳಬಹುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT