ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹೆಚ್ಚು ಸಾಲ ನೀಡಲು ತೀರ್ಮಾನ: ಸಚಿವ ಎಸ್‌.ಟಿ.ಸೋಮಶೇಖರ್

Last Updated 22 ಏಪ್ರಿಲ್ 2020, 15:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಹಕಾರ ಸಂಘಗಳ ಮೂಲಕ ಕಳೆದ ವರ್ಷ ರಾಜ್ಯದ ರೈತರಿಗೆ ₹13 ಸಾವಿರ ಕೋಟಿ ಸಾಲ ನೀಡಲಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚು ಸಾಲ ನೀಡಲು ತೀರ್ಮಾನಿಸಲಾಗಿದೆ’ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಬುಧವಾರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಹಳೆಯ ಸಾಲ ನವೀಕರಣ ಮತ್ತು ಹೊಸ ಸಾಲ ನೀಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳೊಂದಿಗೆ ಎರಡು ಮೂರು ಸಭೆಗಳನ್ನು ಮಾಡಲಾಗಿದೆ. ಆರ್‌ಬಿಐ ಹಾಗೂ ನಬಾರ್ಡ್‌ನೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವ ಹಾಗೆ ಮಾಡುತ್ತೇವೆ’ ಎಂದರು.

‘ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಇದುವರೆಗೆ ಸಹಕಾರ ಸಂಘಗಳಲ್ಲಿ 29.07 ಲಕ್ಷ ರೈತರು ಮಾಡಿದ್ದ ಸಾಲ ಮನ್ನಾ ಮಾಡಲಾಗಿದೆ. 1.40 ಲಕ್ಷ ರೈತರದ್ದು ಬಾಕಿ ಇದೆ. ದಾಖಲೆಗಳು ಇಲ್ಲದ ಕಾರಣಕ್ಕೆ ಆಗಿಲ್ಲ. ಕೋವಿಡ್‌–19ರ ಪರಿಸ್ಥಿತಿ ತಿಳಿಗೊಂಡ ನಂತರ ಅದನ್ನೂ ಮನ್ನಾ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಯಡಿಯೂರಪ್ಪ ಅವರು ₹466 ಕೋಟಿ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನು ಜೂನ್‌ ತಿಂಗಳವರೆಗೂ ವಿಸ್ತರಿಸಲಾಗಿದ್ದು, ಈ ಅವಧಿಯ ಹೆಚ್ಚುವರಿ ₹14 ಕೋಟಿಯನ್ನೂ ಸರ್ಕಾರ ಭರಿಸಲಿದೆ’ ಎಂದರು.

‘ಖಾಸಗಿ ಲೇವಾದೇವಿಗಾರರು, ಫೈನಾನ್ಸ್‌ ಕಂಪೆನಿಗಳು ಜನರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹಾಕುತ್ತಿವೆ, ವಾಹನಗಳನ್ನು ಜಪ್ತಿ ಮಾಡುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೂರು ತಿಂಗಳು ಯಾರಿಗೂ ತೊಂದರೆ ಕೊಡಬೇಡಿ ಎಂದು ಅವರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ’ ಎಂದು ಸಚಿವರು ಹೇಳಿದರು.

ರೈತರಿಗೆ ತೊಂದರೆಯಾಗಬಾರದು: ‘ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಎಪಿಎಂಸಿಗೆ ಭೇಟಿ ನೀಡಿದಾಗ, ಹೊಲದಿಂದ ಎಪಿಎಂಸಿಗೆ ಉತ್ಪನ್ನಗಳನ್ನು ತರಲು ತೊಂದರೆಯಾಗುತ್ತಿದೆ ಎಂದು ರೈತರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಸಮಸ್ಯೆಯಾಗಬಾರದು. ಅವರು ತಮ್ಮ ತರಕಾರಿ, ಹಣ್ಣುಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು’ ಎಂದು ಅವರು ತಿಳಿಸಿದರು.

1 ಲಕ್ಷ ಟನ್‌ ಖರೀದಿ: ‘ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರೊಬ್ಬರಿಂದ 10 ಕ್ವಿಂಟಲ್‌ ತೊಗರಿಯನ್ನು ಖರೀದಿಸಲಾಗುತ್ತಿತ್ತು. ಇದನ್ನು 20 ಕ್ವಿಂಟಲ್‌ಗೆ ಹೆಚ್ಚಿಸಬೇಕು ಎಂದು ರೈತರ ಒತ್ತಾಯ ಇತ್ತು. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಈಗ 1 ಲಕ್ಷ ಟನ್‌ಗಳಷ್ಟು ಖರೀದಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಪ್ರತಿ ಕ್ವಿಂಟಲ್‌ಗೆ ₹6,100 (ಕೇಂದ್ರ ₹5,800 ಮತ್ತು ರಾಜ್ಯ ಸರ್ಕಾರ ₹300) ದರದಲ್ಲಿ ಖರೀದಿ ಮಾಡಲಾಗುವುದು’ ಎಂದರು.

ಮುಖ್ಯಮಂತ್ರಿಗಳ ವಿವೇಚನೆಗೆ:ಚಾಮರಾಜನಗರ ಸೇರಿದಂತೆ ಕೋವಿಡ್‌–19 ಮುಕ್ತವಾಗಿರುವ 9 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ಸಭೆ ನೀಡಿದೆ. ಎರಡು ಮೂರು ದಿನಗಳಲ್ಲಿ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ.

‘ಈ ವಿಚಾರ ಮುಖ್ಯಮಂತ್ರಿ ಅವರ ಮನಸ್ಸಿನಲ್ಲಿದೆ,ಆಯಾ ಜಿಲ್ಲೆಗಳ ಶಾಸಕರು ಹಾಗೂ ಸಂಸದರ ಮನಸ್ಸಿನಲ್ಲೂ ಇದೆ’ ಎಂದು ಹೇಳಿದರು.

ಯಾರೆಲ್ಲಾ ಬಂದಿದ್ದರು? ಇನ್ನೂ ನಿಗೂಢ
ನಂಜನಗೂಡಿನ ಜ್ಯುಬಿಲಿಯೆಂಟ್‌ ಕಾರ್ಖಾನೆಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ತನಿಖೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್‌ ಅವರು, ‘ತನಿಖೆ ನಡೆಯುತ್ತಿದೆ. ಕಾರ್ಖಾನೆಗೆ ಯಾರ‍್ಯಾರು ಬಂದಿದ್ದರು ಎಂಬುದು ಇನ್ನೂ ನಿಗೂಢವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸಂಸ್ಥೆಯ ಆಡಳಿತ ಮಂಡಳಿಗೆ ಪತ್ರ ಬರೆದು, ಐದು ತಿಂಗಳ ಅವಧಿಯಲ್ಲಿ ವಿದೇಶದಿಂದ ಯಾರೆಲ್ಲ ಬಂದಿದ್ದಾರೆ ಎಂಬ ಮಾಹಿತಿ ನೀಡುವಂತೆ ಕೇಳಿದ್ದಾರೆ. ಚೀನಾದಿಂದ ಬಂದ ಕಂಟೈನರ್‌ನಲ್ಲಿ ಸೋಂಕು ಇರಲಿಲ್ಲ ಎಂಬುದು ದೃಢಪಟ್ಟಿದೆ’ ಎಂದರು.

‘ಕಾರ್ಖಾನೆಯ ಎಲ್ಲ 1,550 ಸಿಬ್ಬಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನು ಕೆಲವರದ್ದಷ್ಟೇ ಬರುವುದಕ್ಕೆ ಬಾಕಿ ಇದೆ’ ಎಂದರು.

‘ರಾಜ್ಯದಲ್ಲಿ ಜ್ಯುಬಿಲಿಯೆಂಟ್‌ ಹಾಗೂ ತಬ್ಲೀಗ್‌ ಜಮಾತ್‌ನ ಕಾರಣಕ್ಕೆ ಕೋವಿಡ್‌–19 ಪ್ರಕರಣಗಳು ಜಾಸ್ತಿ ಆಯಿತು. ಇಲ್ಲದಿದ್ದರೆ ಇಷ್ಟು ಆಗುತ್ತಿರಲಿಲ್ಲ’ ಎಂದರು.

‘ರೌಡಿಸಂ ಮಾಡಿದರೆ ಆಗುವುದಿಲ್ಲ’
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಜಮೀರ್‌ ಅಹ್ಮದ್‌ ಅವರು ಮಾಡಿದ್ದು ಅಕ್ಷಮ್ಯ ಅಪರಾಧ. ನಾನು ಶಾಸಕ, ಉಸ್ತುವಾರಿ ಸಚಿವ ಆಗಿದ್ದೇನೆ. ನನ್ನನ್ನು ಕೇಳಿ ಬರಬೇಕು ಎಂದರೆ ಆಗುತ್ತದೆಯೇ? ಎಲ್ಲ ಕಡೆಯೂ ಕೋವಿಡ್‌–19 ಇದೆ. ರೌಡಿಸಂ ಮಾಡಿದರೆ ಆಗುವುದಿಲ್ಲ’ ಎಂದರು.

‘ಆಶಾ ಕಾರ್ಯಕರ್ತೆಯರು, ವೈದ್ಯರು ಪೊಲೀಸರು ಎಲ್ಲ‌ರೂ ಮಾನವೀಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮಾಡಿದರೆ ಯಾರಿಗಾದರೂ ಕೆಲಸ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ‘ಸುಗ್ರೀವಾಜ್ಞೆ ತರಲಾಗಿದೆ.ತನಿಖೆ ನಡೆಯುತ್ತಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT