ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ನಿಯಂತ್ರಣ: ರಾಜ್ಯ ಸರ್ಕಾರ ವಿಫಲ

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಮಹಮದ್‌ ಆರೋಪ
Last Updated 27 ಮೇ 2020, 16:35 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೋವಿಡ್ -19 ಪರಿಸ್ಥಿತಿ ಎದುರಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಬುಧವಾರ ಆರೋಪಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿತ್ತು. ಎಲ್ಲ ಕಾರ್ಯಕ್ರಮಗಳಿಗೂ ಬೆಂಬಲ ನೀಡುವ ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕೂರದೆ ಸರ್ಕಾರದೊಂದಿಗೆ ಕೈಜೋಡಿಸುವ ಚಿಂತನೆಯನ್ನು ನಮ್ಮ ಪಕ್ಷ ಮಾಡಿ, ನೊಂದವರಿಗೆ ನೆರವು ನೀಡುವ ಕಾರ್ಯಕ್ರಮವನ್ನು ಮಾಡಿತ್ತು. ಆದರೆ ಕೇಂದ್ರ ಸರ್ಕಾರ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ನೆಪದಲ್ಲಿ ಜನರನ್ನು ಮರಳು ಮಾಡುವ ಕೆಲಸದಲ್ಲಿ ನಿರತವಾಗಿ ಮಾಡಿತ್ತು’ ಎಂದು ದೂರಿದರು.

‘ಲಾಕ್‌ಡೌನ್ ಮಾಡಿದ ಬಳಿಕ ಮೋದಿ ಅವರು ಮಹಿಳೆಯರ ಬ್ಯಾಂಕ್ ಖಾತೆಗೆ ₹500 ಹಾಕಿ ಅವರನ್ನು ಬೀದಿಗೆ ಬಂದು ನಿಲ್ಲಿಸಿದ್ದರು. ₹20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆಯಾಗಿ ಉಳಿದು ಕೊಂಡಿದೆ. ಶ್ರಮಿಕರಿಗೆ ತಲುಪುವ ಯಾವುದೇ ಕಾರ್ಯಯೋಜನೆ ರೂಪಿಸಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಘೋಷಣೆ ಮಾಡಿದ ಶ್ರಮಿಕರ ಪ್ಯಾಕೇಜ್ ಕೂಡ ಬಡವರಿಗೆ ತಲುಪಿಲ್ಲ. ಇಂತಹ ನಿಷ್ಕ್ರಿಯ ಸರ್ಕಾರದ ವಿರುದ್ಧ ಪಕ್ಷವು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಿದೆ’ ಎಂದರು.

ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿ, ದಲ್ಲಾಳಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈಗ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಪೂರ್ಣಗೊಂಡು ಚುನಾವಣೆ ಮಾಡುವ ಬದಲು ಕೋವಿಡ್ -19 ನೆಪ ಮಾಡಿಕೊಂಡು ಅವರ ಪಕ್ಷದ ಕಾರ್ಯಕರ್ತರನ್ನು ಪಂಚಾಯಿತಿಗೆ ನೇಮಕ ಮಾಡಲು ಮುಂದಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಉಗ್ರ ಹೋರಾಟ ಮಾಡುವ ಜೊತೆಗೆ ಸರ್ಕಾರದ ವಿರುದ್ದ ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಲೀಂ ಅವರು ಹೇಳಿದರು.

ಕೆಪಿಸಿಸಿ ವಕ್ತಾರ ಆರ್. ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮುಖಂಡರಾದ ಎಂ.ಶಿವಣ್ಣ, ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು ಮತ್ತಿತರರು ಇದ್ದರು.

ಡಿಕೆಶಿ ಪದಗ್ರಹಣ: ಮುಖಂಡರ ಸಭೆ
ಇದಕ್ಕೂ ಮೊದಲು ಸಲೀಂ ಅಹಮದ್‌ ಅವರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ, ಜೂನ್‌ 7ರಂದು ನಡೆಯಲಿರುವ ಕೆಪಿಸಿಸಿ ಅಧ್ಯಕ್ಷ ಡಿ.‌ಕೆ.ಶಿವಕುಮಾರ್‌ ಅವರ ಪದಗ್ರಹಣ ಸಮಾರಂಭಕ್ಕೆ ಸಂಬಂಧಿಸಿದಂತೆ ಮುಖಂಡರೊಂದಿಗೆ ‌ಸಭೆ ನಡೆಸಿದರು.

‘ಕೋವಿಡ್‌–19 ಕಾರಣದಿಂದ ಸರಳವಾಗಿ ಕಾರ್ಯಕ್ರಮ ನಡೆಯಲಿದ್ದು, ಬೂತ್‌ ಮಟ್ಟದಲ್ಲಿ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಆನ್‌ಲೈನ್‌ ಮೂಲಕ ಕಾರ್ಯಕ್ರಮಕ್ಕೆ ವೀಕ್ಷಿಸಬಹುದು’ ಎಂದು ಸಲೀಂ ಅವರು ಹೇಳಿದರು.

‘ಡಿ.ಕೆ.ಶಿವಕುಮಾರ್‌ ಅವರು ಅಧ್ಯಕ್ಷರಾಗಿ ನೇಮಕವಾದ ಬಳಿಕ ಪಕ್ಷ ಸಂಘಟನೆಯಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಅಧ್ಯಕ್ಷರು ಚಿಂತನೆ ಮಾಡುತ್ತಿದ್ದು, ಸಕ್ರಿಯವಾಗಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT