ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಚೆಸ್‌ ಚಾಂಪಿಯನ್‌ಶಿಪ್‌ಗೆ ತೆರೆ

ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಮೊದಲ ಟೂರ್ನಿ, ನಾಲ್ವರು ರಾಜ್ಯ ಮಟ್ಟಕ್ಕೆ ಆಯ್ಕೆ
Last Updated 25 ಸೆಪ್ಟೆಂಬರ್ 2022, 16:34 IST
ಅಕ್ಷರ ಗಾತ್ರ

ಚಾಮರಾಜನಗರ:ಜಿಲ್ಲಾ ಚೆಸ್ ಅಸೋಸಿಯೇಷನ್, ಬೆಂಗಳೂರಿನ ಬನಶಂಕರಿ ಸಮೂಹ ಸಂಸ್ಥೆ ಹಾಗೂ ಎಲ್‌ಐಸಿ ಮೈಸೂರು ವಿಭಾಗದ ಜಂಟಿ ಆಶ್ರಯದಲ್ಲಿ ನಗರದಲ್ಲಿ ಮೂರು ದಿನಗಳ ಕಾಲ ನಡೆದರಾಜ್ಯ ಮಟ್ಟದ ಫಿಡೆ ಶ್ರೇಯಾಂಕದ 11 ವರ್ಷದೊಳಗಿನ ಮುಕ್ತ (ಓಪನ್‌) ಮತ್ತು ಬಾಲಕಿಯರ ಚೆಸ್ ಪಂದ್ಯಾವಳಿಗೆ ಭಾನುವಾರ ತೆರೆ ಬಿದ್ದಿತು.

ಬೆಂಗಳೂರಿನ 11 ವರ್ಷದ ಚಿನ್ಮಯ್‌ ಕೌಶಿಕ್‌ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರೆ, ಬಾಲಕಿಯರ ವಿಭಾಗದಲ್ಲಿ 19 ವರ್ಷ ವಯಸ್ಸಿನ ಬೆಂಗಳೂರಿನ ಸಿದ್ಧಿ ರಾವ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದರು.

ಎಂಟು ಸುತ್ತುಗಳಲ್ಲಿ ನಡೆದ ಪಂದ್ಯಾವಳಿಯ ಮುಕ್ತ ವಿಭಾಗದಲ್ಲಿಹೊಸಪೇಟೆಯ ಸೈಯದ್‌ ಅಬ್ದುಲ್‌ ಖಾದರ್‌ (10) ಹಾಗೂ ಬೆಂಗಳೂರಿನ ಪ್ರಥಮೇಶ್‌ ಶಶಿಕಾಂತ ದೇಶಮುಖ್‌ (11) ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು.

ಬಾಲಕಿಯರ ಮಂಗಳೂರಿನ ರುದ್ರ ರಾಜೀವ್‌ (11) ಎರಡನೇ ಸ್ಥಾನ ಹಾಗೂ ಬೆಂಗಳೂರಿನ ಶ್ರೇಯ ರಾಜೇಶ್‌ ಮೂರನೇ ಸ್ಥಾನ ಗಳಿಸಿದರು.

ವಿಜೇತರಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ರಾಷ್ಟ್ರಮಟ್ಟಕ್ಕೆ ಆಯ್ಕೆ: ಚಿನ್ಮಯ ಕೌಶಿಕ್‌, ಸಿದ್ಧಿರಾವ್‌, ಅಬ್ದುಲ್‌ ಖಾದರ್‌ ಮತ್ತು ರುದ್ರ ರಾಜೀವ್‌ ಅವರು 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ವಿಭಾಗ ರಾಷ್ಟ್ರಪಟ್ಟದ ಚಾಂಪಿಯನ್‌ ಶಿಪ್‌ಗೆ ಆಯ್ಕೆಯಾದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕದ ಮೊದಲ ಗ್ರ್ಯಾಂಡ್‌ ಮಾಸ್ಟರ್‌ ಮೈಸೂರಿನ ತೇಜ್‌ಕುಮಾರ್‌ ಅವರು, ‘ಚಾಮರಾಜನಗರದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಟೂರ್ನಿ ನಡೆದಿದೆ. ಅತ್ಯಂತ ವ್ಯವಸ್ಥಿತವಾಗಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಎಲ್ಲ ಮಕ್ಕಳು ಈ ಟೂರ್ನಿಯನ್ನು ಆನಂದಿಸಿದ್ದಾರೆ’ ಎಂದರು.

‘ಚದುರಂಗ ಆಡುವಾಗ ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಗುರುತಿಸಿ, ಮುಂದೆ ಆ ತಪ್ಪುಗಳನ್ನು ಸರಿ ಪಡಿಸಲು ಗಮನಕೊಡಬೇಕು’ ಎಂದು ಮಕ್ಕಳಿಗೆ ಅವರು ಸಲಹೆ ನೀಡಿದರು.

ಎಲ್ಐಸಿಯ ಮೈಸೂರು ವಿಭಾಗದ ಮಾರ್ಕೆಟಿಂಗ್‌ ವಿಭಾಗದ ವ್ಯವಸ್ಥಾಪಕ ನಾಗೇಶ್ವರ ರಾವ್‌ ಮಾತನಾಡಿ, ‘ಚೆಸ್‌ ಕೇವಲ ಒಂದು ಕ್ರೀಡೆ ಅಲ್ಲ. ಅದು ನಮ್ಮಲ್ಲಿರುವ ಗುಣಗಳನ್ನು ಹೊರ ಹಾಕುತ್ತದೆ. ಇದು ಮನಸ್ಸಿನ ಆಟ. ಏಕಾಗ್ರತೆ, ಬುದ್ಧಿಮತ್ತೆಯನ್ನು ಹೆಚ್ಚು ಮಾಡುತ್ತದೆ’ ಎಂದರು.

ಕಾಡಾ ಅಧ್ಯಕ್ಷ ನಿಜಗುಣರಾಜು ಮಾತನಾಡಿ, ‘ನಮ್ಮ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಟೂರ್ನಿ ನಡೆದಿರುವುದು ಹೆಮ್ಮೆಯ ಸಂಗತಿ. ಮುಂದೆಯೂ ಇಂತಹ ಪಂದ್ಯಾವಳಿಗಳು ನಡೆಯಬೇಕು. ಅದಕ್ಕೆ ಬೇಕಾದ ಬೆಂಬಲ ನೀಡುತ್ತೇವೆ’ ಎಂದರು.

ರಾಜ್ಯ ಚೆಸ್‌ ಅಸೋಸಿಯೇಷನ್‌ ಉಪಾಧ್ಯಕ್ಷ ನಾಗೇಂದ್ರ ಮಾತನಾಡಿ, ‘ಜಿಲ್ಲೆಯ ಮಕ್ಕಳಿಗೆ ಒಕ್ಕೂಟದ ವತಿಯಿಂದ ಎರಡು ದಿನಗಳ ಕಾಲ ಉಚಿತವಾಗಿ ಚೆಸ್‌ ತರಬೇತಿ ನೀಡಲು ಸಿದ್ಧ. ಜಿಲ್ಲಾ ಅಸೋಸಿಯೇಷನ್‌ ಇದಕ್ಕೆ ಸಹಕಾರ ನೀಡಬೇಕು’ ಎಂದರು.

ಜಿಲ್ಲಾ ಚೆಸ್‌ ಅಸೋಸಿಯೇಷನ್‌ ಅಧ್ಯಕ್ಷ ಜೆ.ಸುರೇಶ್‌ ಪ್ರಸ್ತಾವಿಕವಾಗಿ ಮಾತನಾಡಿದರು.

ಎಲ್‌ಐಸಿ ಮೈಸೂರು ವಿಭಾಗದ ಮಾರಾಟ ವಿಭಾಗದ ಶ್ರೀಕಾಂತ್‌, ಮೈಸೂರು ಈಶ್ವರೀಸ್‌ ಇನ್‌ಸ್ಟಿಟ್ಯೂಟ್‌ನ ಕಾರ್ಯದರ್ಶಿ ಶ್ರೀಧರ್‌, ಕಿಂಗ್‌ ರೆಸಾರ್ಟ್‌ನ ಅಭಿಷೇಕ್‌, ತೀರ್ಪುಗಾರರಾಗಿದ್ದ ಪ್ರಮೋದ್‌ ಮೋರೆ, ಪ್ರಶಾಂತ್‌, ಸಂಜನಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT