ಭಾನುವಾರ, ಸೆಪ್ಟೆಂಬರ್ 20, 2020
21 °C
ಶೇ 75ರಷ್ಟು ಪುಸ್ತಕ ಸರಬರಾಜು, ಐದು ಬ್ಲಾಕ್‌ಗಳಲ್ಲೂ ಮಕ್ಕಳಿಗೆ ವಿತರಣೆ

ಚಾಮರಾಜನಗರ | ಶಾಲಾ ಆರಂಭಕ್ಕೂ ಮುನ್ನ ಪಠ್ಯ ಪುಸ್ತಕ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಯಳಂದೂರು: ಕೋವಿಡ್‌–19 ಕಾರಣದಿಂದ ಶಾಲೆ ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳದೇ ಇದ್ದರೂ, ಮಕ್ಕಳಿಗೆ 2020–21ನೇ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ವಿತರಣೆ ಆರಂಭವಾಗಿದೆ.

ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಶಾಲೆ ಆರಂಭವಾಗುವ ಹೊತ್ತಿಗೆ ಸಂಪೂರ್ಣವಾಗಿ ಪಠ್ಯಪುಸ್ತಕ ವಿತರಣೆ ಆಗುತ್ತಿರಲಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಶಿಕ್ಷಕರು ಕೂಡ ಪಠ್ಯಪುಸ್ತಕಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಿತ್ತು. ಈ ಬಾರಿ, ಕೋವಿಡ್‌–19 ಭೀತಿಯಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಪೂರೈಸುತ್ತಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಮನೆಗೆ ಪಠ್ಯಪುಸ್ತಕಗಳನ್ನು ತಲುಪಿಸುತ್ತಿದೆ. 

ಜಿಲ್ಲೆಗೆ ಶೇ 75ರಷ್ಟು ಪಠ್ಯಪುಸ್ತಕಗಳು ಬಂದಿವೆ. ಎಲ್ಲ ಐದೂ ಶೈಕ್ಷಣಿಕ ವಲಯಗಳಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಶೇ 99ರಷ್ಟು ವಿತರಣೆ: ಯಳಂದೂರು ತಾಲ್ಲೂಕು ಶೈಕ್ಷಣಿಕ ವಲಯದಲ್ಲಿ ಶೇ 99ರಷ್ಟು ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆ ಆಗಿದೆ. 

ಶೈಕ್ಷಣಿಕ ವಲಯದಲ್ಲಿ 90ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. 9,000 ಮಕ್ಕಳಿಗೆ ಪಠ್ಯ ಪೂರೈಸಲಾಗಿದೆ. ಶೇ 99 ಶಾಲೆಗಳಿಗೆ ವಿತರಣೆ ಆಗಿದೆ. ಇವುಗಳಲ್ಲಿ ಉಚಿತ ಮತ್ತು ಮಾರಾಟ ಪುಸ್ತಕಗಳು ಸೇರಿವೆ. 96,267 ಉಚಿತ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, 91,852 ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. 14,427 ಪಠ್ಯ ಪುಸ್ತಕಗಳನ್ನು ಖಾಸಗಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. 

‘ಈಗಾಗಲೇ ಎಲ್ಲ ಶಾಲೆಗಳಿಗೂ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಆಯಾ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ತಮ್ಮ ಬೇಡಿಕೆಗೆ ಅನುಸಾರವಾಗಿ ಪುಸ್ತಕಗಳನ್ನು ಶಾಲೆಗಳಿಗೆ ಕೊಂಡೊಯ್ದು ಹಂಚುತ್ತಿದ್ದಾರೆ. ಕೆಲವೆಡೆ ಶಿಕ್ಷಕರೇ ಮನೆಗಳಿಗೆ ತೆರಳಿ ಪಠ್ಯ ಪುಸ್ತಕ ತಲುಪಿಸಲು ಮುಂದಾಗಿದ್ದಾರೆ’ ಎಂದು ಶಿಕ್ಷಣ ಸಂಯೋಜಕ ಶಿವಾಲಂ‌‌ಕಾರ್ ಅವರು ‘ಪ್ರಜಾವಾಣಿ’ಗೆ‌ ತಿಳಿಸಿದರು. 

ಮಕ್ಕಳ ಮೇಲೆ ನಿಗಾ: ‘ವರ್ಕ್‌ ಫ್ರಂ ಹೋಮ್ ಕಾರ್ಯಕ್ರಮಗಳು ಮುಗಿಯಲಿದ್ದು, ಈಗ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಪರಿಶೀಲನೆಗೆ ಶಿಕ್ಷಕರೇ ಮನೆಗೆ ಭೇಟಿ ನೀಡುತ್ತಿದ್ದಾರೆ. ಮಕ್ಕಳಲ್ಲಿ ಸ್ವಯಂ ಕಲಿಕೆ ಪ್ರೇರೇಪಿಸಲು ಪಠ್ಯಪುಸ್ತಕ ಮತ್ತು ಅಭ್ಯಾಸ ಪುಸ್ತಕಗಳನ್ನು ಮಕ್ಕಳ ಮನೆಗಳಿಗೆ ಪೂರೈಸಲಾಗುತ್ತದೆ. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಗ್ರಾಮೀಣ ಮಕ್ಕಳು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಹೆಚ್ಚಿನ ಅಭ್ಯಾಸ ಮಾಡಲಿದ್ದಾರೆ’ ಎಂದು ವಲಯ ಶಿಕ್ಷಣ ಅಧಿಕಾರಿ ವಿ. ತಿರುಮಲಾಚಾರಿ ಅವರು ಹೇಳಿದರು. 

ಬೋಧಕರು, ಪೋಷಕರ ಸಂತಸ

ಶಾಲೆಗಳು ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಮಕ್ಕಳ ಕೈ ಸೇರಿರುವುದರಿಂದ ಪೋಷಕರು, ಶಿಕ್ಷಕರು ಸಂತಸಗೊಂಡಿದ್ದಾರೆ. 

‘ಬೇಗ ಪಠ್ಯಪುಸ್ತಕಗಳು ಸಿಕ್ಕಿರುವುದು ಕಲಿಕೆಗೆ ಪೂರಕ ಆಗಲಿದೆ. ಮನೆಯಲ್ಲಿ ಓದಲು, ಕಲಿಯಲು ಹೆಚ್ಚಿನ ಸಮಯಾವಕಾಶ ಸಿಗಲಿದೆ. ನಂತರ ಶಿಕ್ಷಕರು ಅದೇ ವಿಷಯ ಬೋಧನೆ ಮಾಡುವುದರಿಂದ ಮತ್ತಷ್ಟು ಪರಿಪಕ್ವ ಕಲಿಕೆ ಉಂಟಾಗಲಿದೆ. ಶೈಕ್ಷಣಿಕ ಪ್ರಗತಿಗೂ ಇದು ಸಹಕಾರಿ’ ಎಂದು ಬಾಲಕಿಯರ ಸರ್ಕಾರಿ ಶಾಲೆಯ ಶಿಕ್ಷಕ ರವಿ ಮತ್ತು ಲಕ್ಷ್ಮಿ ಅವರು ಹೇಳಿದರು. 

‘ಮಕ್ಕಳು ಶಾಲೆಯಿಂದ ಹೊರಗಿದ್ದು, ಏನು ಕಲಿಯುತ್ತಾರೆ ಎಂಬುದೇ ಯೋಚನೆ ಆಗಿತ್ತು. ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಣೆ ಮಾಡಿರುವುದರಿಂದ ನೆಮ್ಮದಿಯಾಗಿದೆ. ಪ್ರತಿದಿನ ದೂರದರ್ಶನ ಕಲಿಕೆ ಮತ್ತು ಶಿಕ್ಷಕರ ಕಣ್ಗಾವಲು
ಇರುವುದರಿಂದ ವಿದ್ಯಾರ್ಥಿಗಳು ಬರವಣಿಗೆ, ಓದು ಮತ್ತಿತರ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗಿದೆ’ ಎಂದು ಪೋಷಕರಾದ ಸಂತೇಮರಹಳ್ಳಿ ದಾಮೋದರ ಆಚಾರ್ಯ ಸಂತಸ ವ್ಯಕ್ತಪಡಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು