ಶನಿವಾರ, ಮೇ 28, 2022
31 °C
ತೆರಕಣಾಂಬಿ ಪದವಿ ಕಾಲೇಜು ಸ್ಥಳಾಂತರದ ವಿರುದ್ಧ ವಿದ್ಯಾರ್ಥಿಗಳ ಅಭಿಯಾನ

ಗುಂಡ್ಲುಪೇಟೆ | ಕಾಲೇಜು ಉಳಿಸಿಕೊಳ್ಳಲು ಮನೆ ಮನೆಗೆ ಭೇಟಿ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿಗೆ ವರ್ಗಾವಣೆಯಾಗಿರುವ ತಾಲ್ಲೂಕಿನ ತೆರಕಣಾಂಬಿ ಪದವಿ ಕಾಲೇಜನ್ನು ಉಳಿಸಿಕೊಳ್ಳಲು ಅಲ್ಲಿನ ವಿದ್ಯಾರ್ಥಿಗಳು ಅಭಿಯಾನ ಆರಂಭಿಸಿದ್ದು, ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ತಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. 

‘ಕಾಲೇಜಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಅದಿನ್ನೂ ಉದ್ಘಾಟನೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಕಾಲೇಜು ಸ್ಥಳಾಂತರ ಮಾಡಲಾಗುತ್ತಿದೆ. ಇದನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕು’ ಬೆಂಗಲ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.

ಹೊಸ ಕಟ್ಟಡ ಆಗಿರುವುದರಿಂದ ಕಾಲೇಜಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಹುದು. ಈ ಕಾಲೇಜು ಇಲ್ಲಿಯೇ ಉಳಿದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ. ಸ್ಥಳಾಂತರ ಮಾಡಿದರೆ, ಕಾಲೇಜಿನಲ್ಲಿ ಈಗ ಓದುತ್ತಿರುವ ವಿದ್ಯಾರ್ಥಿಗಳು ದೂರದ ಊರಿಗೆ ಹೋಗಬೇಕಾಗುತ್ತದೆ. ಹಾಗಾಗಿ, ಪೋಷಕರು, ತೆರಕಣಾಂಬಿಯ ವರ್ತಕರು, ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂಬುದು ವಿದ್ಯಾರ್ಥಿಗಳ ಕೋರಿಕೆ. 

‘ತೆರಕಣಾಂಬಿಯಲ್ಲಿ ಪದವಿ ಕಾಲೇಜು ಇದೆ ಎಂಬ ಕಾರಣಕ್ಕೆ ಈ ಭಾಗದ ಸುತ್ತಮುತ್ತಲಿನ ಜನ ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಕಾಲೇಜು ಸ್ಥಳಾಂತರಗೊಂಡರೆ ಈಗಿರುವ ಬಹುತೇಕ ವಿದ್ಯಾರ್ಥಿನಿಯರು ವ್ಯಾಸಂಗ ಮೊಟಕುಗೊಳಿಸುತ್ತಾರೆ. ಬಡತನದಲ್ಲಿ ಇದ್ದರೂ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಅವರ ಕನಸು ನುಚ್ಚು ನೂರು ಆಗುತ್ತದೆ’ ಎಂದು ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾಲೇಜು ಸ್ಥಳಾಂತರವಾದರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಸಂಗ ಮಾಡುವಷ್ಟು ಅನುಕೂಲ ನಮಗೆ ಇಲ್ಲ. ಉನ್ನತ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಗುತ್ತದೆ. ಮನೆಯಲ್ಲಿ ಮದುವೆ ಮಾಡುತ್ತಾರೆ’ ಎಂದು ವಿದ್ಯಾರ್ಥಿನಿಯರು ನೋವು ತೋಡಿಕೊಂಡರು.

ವಿದ್ಯಾರ್ಥಿನಿಯರಾದ ದೇವಿಕಾ, ಅನುಷಾ, ರಕ್ಷಿತಾ, ನಾಗರತ್ನ , ಶ್ವೇತಾ ಹಾಗೂ ಸ್ನೇಹಿತರು ತಂಡ ಕಟ್ಟಿಕೊಂಡು ಜನರನ್ನು ಭೇಟಿ ಮಾಡುತ್ತಿದ್ದು, ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು