ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಜಮೀನಿನಲ್ಲೇ ಬಾಡುತ್ತಿದೆ ಸುಗಂಧರಾಜ

ದಿಗ್ಬಂಧನ: ಜಿಲ್ಲೆಯ ಪುಷ್ಪೋದ್ಯಮಕ್ಕೆ ಭಾರಿ ಪೆಟ್ಟು, ರೈತರಿಗೆ ಕಷ್ಟ
Last Updated 11 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಕೊರೊನಾ ವೈರಸ್ ಸೋಂಕು ತಡೆಗೆ ಜಿಲ್ಲೆಯಾದ್ಯಂತ ನಿರ್ಬಂಧ ಹೇರಿರುವುದರಿಂದ ಹೂವುಗಳ ಮಾರಾಟ ‌‌ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಇಡೀ ಪುಷ್ಪೋದ್ಯಮವೇ ಕುಸಿದಿದೆ. ಇದರಿಂದಾಗಿ ಹೂವುಗಳನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

ಸದಾ ಕಾಲ ಬೇಡಿಕೆ ಇರುವ ಸುಂಗಧರಾಜ ಹೂವನ್ನು ಈಗ ಕೇಳುವವರಿಲ್ಲ. ದೇವಸ್ಥಾನಗಳು ಮುಚ್ಚಿರುವುದರಿಂದ, ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯದಿರುವುದರಿಂದ ಈ ಹೂವನ್ನು ಈಗ ಕೇಳುವವರೇ ಇಲ್ಲ. ಹೂವುಗಳು ಜಮೀನಲ್ಲಿ ಬಾಡಲು ಆರಂಭಿಸಿವೆ. ಸಾಮಾನ್ಯವಾಗಿ ಈ ಸಮಯದಲ್ಲಿ ಈ ಹೂವಿಗೆ ಉತ್ತಮ ಬೇಡಿಕೆ ಇರುತ್ತದೆ. ಒಳ್ಳೆಯ ಬೆಲೆಯೂ ಇರುತ್ತದೆ. ಈ ವರ್ಷ ಎರಡೂ ಇಲ್ಲದೇ ಬಹುತೇಕ ರೈತರು ಹೂವನ್ನು ಕೊಯ್ಯದೆ ಜಮೀನಿನಲ್ಲಿ ಹಾಗೆಯೇ ಬಿಟ್ಟಿದ್ದಾರೆ.

35 ವರ್ಷಗಳಿಂದ ಸುಗಂಧರಾಜ ಹೂ ಬಳೆಯುತ್ತಿರುವ ಹೆಗ್ಗವಾಡಿಪುರ ಗ್ರಾಮದ ರೈತ, ರೈತ ಸಂಘದ ಮುಖಂಡ ಎಚ್‌.ಸಿ.ಮಹೇಶ್‌ ಕುಮಾರ್‌ ಅವರು ಎರಡು ಎಕರೆಯಲ್ಲಿ ಬೆಳೆದಿರುವ ಹೂವನ್ನು ಮಾರಾಟವಾಗದ ಕಾರಣ ಹಾಗೆಯೇ ಬಿಟ್ಟಿದ್ದಾರೆ. ಅರಳಿದ ಹೂವುಗಳು ಬಾಡಿ ಹೋಗಿ ಜಮೀನಿನಲ್ಲಿಯೇ ಉದುರುತ್ತಿವೆ.

‘ಈಗ ಸುಗಂಧರಾಜ ಹೂಗಳಗೆ ಭಾರಿ ಬೇಡಿಕೆ ಇರುವ ಸಮಯ. ಮದುವೆ, ಶುಭ ಸಮಾರಂಭ ಹಾಗೂ ದೇವಸ್ಥಾನಗಳಿಗೆ ಹೆಚ್ಚಾಗಿ ಹಾರಗಳನ್ನು ಉಪಯೋಗಿಸುವ ಸಮಯವಾಗಿತ್ತು. ಪ್ರತಿ ಕೆಜಿಗೆ ₹ 100 ರಿಂದ ₹ 200ರವರೆಗೂ ವ್ಯಾಪಾರ ನಡೆಯುತ್ತಿತ್ತು. ಈ ಬಾರಿ ಕೊರೊನಾ ಕಾರಣಕ್ಕೆ ವ್ಯಾಪಾರವೇ ಸ್ಥಗಿತಗೊಂಡಿದೆ’ ಎಂದು ಮಹೇಶ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಜಮೀನಿನಲ್ಲಿ ಪ್ರತಿದಿನ 20 ಕೆ.ಜಿ ವರೆಗೂ ಹೂ ಬಿಡುತ್ತಿದೆ. ಹೂಗಳನ್ನು ಬಿಡಿಸಿ ಚಾಮರಾಜನಗರದ ಚೆನ್ನೀಪುರದ ಮೋಳೆಗೆ ಕಳುಹಿಸುತ್ತಿದ್ದೆ. ಅಲ್ಲಿ ಹೂಗಳನ್ನು ಖರೀದಿಸಿ ಮಾರಾಟ ಮಾಡುವುದು ಈಗ ನಿಂತಿರುವುದರಿಂದ ಪ್ರತಿದಿನ ₹ 2,000, ₹ 3,000 ನಷ್ಟ ಉಂಟಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಗಿಡಗಳನ್ನು ನಾಟಿ ಮಾಡಿ ವ್ಯವಸಾಯ ಆರಂಭಿಸಿ ಹೂ ಬಿಡುವವರೆಗೆ ₹ 80 ಸಾವಿರ ಖರ್ಚಾಗಿದೆ. ಇದೀಗ ಹೂ ಚೆನ್ನಾಗಿ ಬಿಟ್ಟು ಬೇಡಿಕೆ ಸಮಯವಾಗಿದೆ. ಹೂವು ಕೇಳುವವರೇ ಇಲ್ಲದಂತಾಗಿದೆ. ಹೂ ಬಿಡಿಸಲು ಕೂಲಿ ಆಳುಗಳಿಗೆ ದಿನಕ್ಕೆ ₹ 500 ಖರ್ಚಾಗುತ್ತದೆ. ಕೂಲಿ ನೀಡುವ ಬದಲು ಹೂವುಗಳನ್ನು ಕೀಳುವುದೇ ಬೇಡ ಎಂದು ನಿರ್ಧರಿಸಿದ್ದೇನೆ’ ಎಂದರು.

‘ಹೂಗಳ ವ್ಯವಸಾಯ ನಂಬಿ ಜೀವನ ನಡೆಸುತ್ತಿದ್ದೆವು. ಇದೀಗ ಹೂ ಮಾರಾಟವಾಗದೇ ನಷ್ಟವಾಗುತ್ತಿದೆ. ಖರ್ಚಾಗಿರುವ ಹಣವು ಸಿಗುತ್ತಿಲ್ಲ. ಹೂಗಳನ್ನು ಕೇಳುವವರೇ ದಿಕ್ಕಿಲ್ಲ. ಆದ್ದರಿಂದ ತೋಟಗಾರಿಕೆ ಇಲಾಖೆಯವರು ಮಧ್ಯೆ ಪ್ರವೇಶಿಸಿ ಹೂಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೇ ಆಗಿರುವ ನಷ್ಟವನ್ನು ಭರಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT