ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಹುಲಿಯ ಸಾವಿನ ಸುತ್ತ ಅನುಮಾನ

ಕಾಲು ಮತ್ತು ಕೊರಳಿಗೆ ತಂತಿ ಕಟ್ಟಿ, ಭಾರವಾದ ಕಲ್ಲು ಕಟ್ಟಿ ನೀರಿಗೆ ಹಾಕಿರುವ ದುಷ್ಕರ್ಮಿಗಳು
Last Updated 8 ಫೆಬ್ರುವರಿ 2023, 14:46 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರದ ಕುಂದುಕೆರೆ ವಲಯದ ಕೆಬ್ಬೇಪುರ ಗ್ರಾಮದ ಮಲ್ಲಯ್ಯಕಟ್ಟೆಯ ಕೆರೆಯಲ್ಲಿ ಮಂಗಳವಾರ ಹುಲಿಯ ಮೃತದೇಹ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಹುಲಿಯು ಗಂಡಾಗಿದ್ದು, ನಾಲ್ಕರಿಂದ ಐದು ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದೆ. ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಕೆರೆಗೆ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೇರೆ ಕಡೆ ಸತ್ತಿರುವ ಹುಲಿಯನ್ನು ದುಷ್ಕರ್ಮಿಗಳು ಇಲ್ಲಿಗೆ ತಂದು ಹಾಕಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬಂಡೀಪುರದ ಪಶುವೈದ್ಯ ಡಾ. ವಾಸೀಂ ಮಿರ್ಜಾ ಅವರ ತಂಡ ಬುಧವಾರ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದೆ. ಹುಲಿಯ ದೇಹ ನೀರಿನಲ್ಲಿ ಕೊಳೆತಿರುವುದರಿಂದ ಸಾವಿನ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ. ಅಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಹುಲಿಯು ಉರುಳಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಉರುಳಿಗೆ ಸಿಲುಕಿ ಹುಲಿ ಸತ್ತಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್‌ ಹೇಳಿದ್ದಾರೆ.

ಕೆಬ್ಬೇಪುರ ಭಾಗದಲ್ಲಿ ಇತ್ತೀಚೆಗೆ ಹುಲಿಯ ಉಪಟಳ ಹೆಚ್ಚಾಗಿತ್ತು. ಹುಲಿ ಜಮೀನುಗಳಿಗೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದರು.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಲಿಯಾಗಿರುವುದರಿಂದ ವಯಸ್ಸಿನ ಕಾರಣಕ್ಕೆ ಅದು ಮೃತಪಟ್ಟಿರುವ ಸಾಧ್ಯತೆ ಇಲ್ಲ. ಹುಲಿಯ ಕಾಲು, ಕುತ್ತಿಗೆಗೆ ತಂತಿ ಕಟ್ಟಿರುವುದರಿಂದ ಹುಲಿಯನ್ನು ಹತ್ಯೆ ಮಾಡಿರುವ ಸಾಧ್ಯತೆಯೇ ಹೆಚ್ಚಿದೆ ಇದೆ ಎಂಬ ಅಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ.

‘ದೂರದಲ್ಲೆಲ್ಲೋ ಹುಲಿಯನ್ನು ಕೊಂದು ಯಾರಿಗೂ ಗೊತ್ತಾಗಬಾರದು ಎಂದು ಕೆಬ್ಬೇಪುರಕ್ಕೆ ತಂದು ಕೆರೆಗೆ ಹಾಕಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ಸ್ಪಷ್ಟ ಮಾಹಿತಿ ತಿಳಿಯಲಿದೆ’ ಎಂದು ಅವರು ಹೇಳಿದ್ದಾರೆ.

ತನಿಖೆ: ಘಟನೆ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು. ಆರೋಪಿಗಳನ್ನು ಪತ್ತೆಗೆ ವಿಶೇಷ ತಂಡ ರಚಿಸಲಾಗುವುದು ಎಂದು ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್‌ ಹೇಳಿದ್ದಾರೆ.

ಎಸಿಎಫ್‌ಗಳಾದ ನವೀನ್‌, ರವೀಂದ್ರ, ಎನ್‌ಟಿಸಿವೆ ಪ್ರತಿನಿಧಿ ಕೃತಿಕಾ ಆಲನಹಳ್ಳಿ, ಎನ್‌ಜಿಒ ಪ್ರತಿನಿಧಿ ರಘುರಾಂ, ಕುಂದುಕೆರೆ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್‌ ಸೇರಿದಂತೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT