ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಋಣ ತೀರಿಸಲು ಸಿಕ್ಕ ಅವಕಾಶ: ಸುರೇಶ್‌ ಕುಮಾರ್‌

Last Updated 25 ಜುಲೈ 2020, 14:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನನಗೆ ಸಿಕ್ಕಿದ್ದು ಸಮಾಧಾನ ತಂದಿದೆ. ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ ಆಗಿದ್ದರು. ಅವರ ಋಣ ತೀರಿಸುವ ಅವಕಾಶ ಸಿಕ್ಕಿದ ಅವಕಾಶ’ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನೇಕ ಸವಾಲುಗಳು ಇರುವ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ. ಶಿಕ್ಷಕರ ಕಡ್ಡಾಯ ವರ್ಗಾವಣೆ ನನ್ನ ಮುಂದಿದ್ದ ಸವಾಲು. ವರ್ಗಾವಣೆ ಪ್ರಕ್ರಿಯೆಯಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿ ವರ್ಗಾವಣೆಗಾಗಿ ಪ್ರತ್ಯೇಕ ಕಾಯ್ದೆ ತಂದಿದ್ದು ದೊಡ್ಡ ಸಾಧನೆ. ಬಹಳ ವರ್ಷಗಳಿಂದ ಆಗಬೇಕಾದ ಕೆಲಸ ಕಳೆದ ವರ್ಷ ಆಯಿತು’ ಎಂದರು.

‘ಶಾಲಾ ವಾಸ್ತವ್ಯದ ಮೂಲಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ್ದೇನೆ. ನಿರಂತರವಾಗಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೋ ಪೋಷಕರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ಹೇಳಿದರು.

‘ಕೋವಿಡ್‌–19 ಭೀತಿಯ ನಡುವೆಯೇ, ದೇಶವೇ ತಿರುಗಿ ನೋಡುವಂತೆ ಮಾಡಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು ಮತ್ತೊಂದು ಸಾಧನೆ. 8.5 ಲಕ್ಷ ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ನಡೆಯುತ್ತದೆಯೇ ಇಲ್ಲವೇ, ನಡೆಸಬೇಕೇ ಬೇಡವೇ ಎಂಬ ಗೊಂದಲ ಇತ್ತು. ಇದರೊಂದಿಗೆ ಕೋವಿಡ್‌ನಿಂದಾಗಿ ಆತಂಕದ ವಾತಾವರಣ ಇತ್ತು. ಇವೆಲ್ಲದರ ನಡುವೆಯೇ ಶೇ 98 ಮಕ್ಕಳು ಪರೀಕ್ಷೆ ಹಾಜರಾಗಿದ್ದರು’ ಎಂದು ವಿವರಿಸಿದರು.

‘ಮಕ್ಕಳಿಗೆ ಇದು ಪರೀಕ್ಷೆಯಾಗದೆ ನಾಡಹಬ್ಬವಾಯಿತು. ಎಲ್ಲರೂ ಲವಲವಿಕೆಯಿಂದ ಪರೀಕ್ಷೆ ಬರೆದರು. ಕೋವಿಡ್‌ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಪಾಲಿಸಬೇಕು ಎಂಬುದನ್ನೂ ತೋರಿಸಿಕೊಟ್ಟರು’ ಎಂದು ಹೇಳಿದರು.

ಮುಖ್ಯಮಂತ್ರಿಗೆ ಶ್ಲಾಘನೆ: ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಾಧನೆಯನ್ನೂ ಪಟ್ಟಿ ಮಾಡಿದ ಅವರು, ಸರ್ಕಾರ ರಚನೆಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಕಾಂಗಿ ಮಾಡಿದ ಕೆಲಸ ಹಾಗೂ ಕೋವಿಡ್‌–19ನಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ವಿವಿಧ ಸಮುದಾಯಗಳಿಗೆ ಆರ್ಥಿಕ ಪ್ಯಾಕೇಜ್‌ ಅನ್ನು ಪ್ರಸ್ತಾಪಿಸಿದರು.

ಶಿಕ್ಷಕರಿಗಾಗಿ ಶಿಕ್ಷಕ ಮಿತ್ರ ಆ್ಯಪ್‌

‘ಶಿಕ್ಷಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡುವುದಕ್ಕಾಗಿ ಅಥವಾ ಅದರ ಪರಿಹಾರಕ್ಕಾಗಿ ಡಿಡಿಪಿಐ ಹಾಗೂ ಬಿಇಒ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿ ಶಿಕ್ಷಕ ಮಿತ್ರ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ತಾವು ಕಲಿತ ಶಾಲೆಗಳಿಗೆ ಕೊಡುಗೆ ನೀಡುವ ದಾನಿಗಳಿಗಾಗಿ ‘ನನ್ನ ಶಾಲೆ, ನನ್ನ ಕೊಡುಗೆ’ ಎಂಬ ಆ್ಯಪ್‌ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಸುರೇಶ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT