ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಹೊಣೆಗಾರಿಕೆಯಿಂದ ವರ್ತಿಸಲು ಅಧಿಕಾರಿಗಳಿಗೆ ತಾಕೀತು

ಜಿಲ್ಲಾ ಉಸ್ತುವಾರು ಸಚಿವ ಎಸ್.ಸುರೇಶ್‌ಕುಮಾರ್‌ ಅವರಿಂದ ಸಭೆ
Last Updated 6 ಮೇ 2021, 4:45 IST
ಅಕ್ಷರ ಗಾತ್ರ

ಚಾಮರಾಜನಗರ: ಅಧಿಕಾರಿಗಳು ಕೋವಿಡ್ ನಿಯಂತ್ರಣದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೇ ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಅವರು ಬುಧವಾರ ಕೋವಿಡ್ ತಡೆಗೆ ವಹಿಸಲಾಗಿರುವ ಕ್ರಮಗಳು ಹಾಗೂ ಸೋಂಕಿತರಿಗೆ ಒದಗಿಸಲಾಗುತ್ತಿರುವ ಚಿಕಿತ್ಸೆ ಇನ್ನಿತರ ಆರೋಗ್ಯ ಸೌಲಭ್ಯಗಳ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸೋಂಕಿತರ ಚಿಕಿತ್ಸೆಗೆ ಅತ್ಯಂತ ಹೊಣೆಗಾರಿಕೆಯಿಂದ ತೊಡಗಿಸಿಕೊಳ್ಳಬೇಕು. ಚಿಕಿತ್ಸಾ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಯಾವುದೇ ಲೋಪಗಳಿಗೂ ಅವಕಾಶವಾಗದಂತೆ ನಿಗಾವಹಿಸಬೇಕು ಎಂದು ಅವರು ಸೂಚಿಸಿದರು.

ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಬೇಕು. ಆಸ್ಪತ್ರೆಯ ಪ್ರವೇಶದಲ್ಲಿಯೇ ಸೋಂಕಿತರಿಗೆ ಹಾಗೂ ಅವರ ಕುಟುಂಬದವರಿಗೆ ನೆರವಾಗುವ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ವೈದ್ಯರು ಪರೀಕ್ಷಿಸಿ ಆಸ್ಪತ್ರೆ, ಕೋವಿಡ್ ಕೇರ್, ಹೋಂ ಐಸೋಲೇಷನ್ ಗಳ ಬಗ್ಗೆ ನಿರ್ಧರಿಸಿ ವಿಳಂಬ ಮಾಡದೇ ತುರ್ತಾಗಿ ದಾಖಲು ಮಾಡಲು ಕ್ರಮವಹಿಸಲು ಇಂದು ಸಭೆ ನಡೆಸಿ ಸೂಚನೆ ನೀಡಲಾಗಿದೆ. ಪಟ್ಟಣ ಹಾಗೂ ಗ್ರಾಮಗಳಲ್ಲಿ ಕೋವಿಡ್ ಸಂಬಂಧಿಸಿದಂತೆ ಮಾಹಿತಿ ನೆರವು ನೀಡುವ ಕಿಯಾಸ್ಕ್ ಗಳನ್ನು ಆರಂಭಿಸುವಂತೆ ತಿಳಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ಮಾತನಾಡಿ ಕೋವಿಡ್ ನಿಯಂತ್ರಣ ಸಂಬಂಧ ಜನರ ದಟ್ಟಣೆ ನಿಯಂತ್ರಣ ಹಾಗೂ ಜಾಗೃತಿಗೆ ಅವಶ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗುಂಪು ಗೂಡುವಿಕೆಗೆ ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷಲ್ ಭೋಯರ್ ನಾರಾಯಣ್ ರಾವ್ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆಗಳನ್ನು ಸಕ್ರಿಯಗೊಳಿಸುವ ದಿಸೆಯಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಸೋಂಕಿತರ ಸಂಪರ್ಕಿತರ ಪತ್ತೆ ಹಾಗೂ ಕೋವಿಡ್ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕರಾದ ಡಾ. ಸಂಜೀವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹಿರಿಯ ಅರಣ್ಯಾಧಿಕಾರಿ ಏಡುಕೊಂಡಲು, ಬಂಡೀಪುರ ವಿಭಾಗದ ಹಿರಿಯ ಅರಣ್ಯಾಧಿಕಾರಿ ನಟೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್. ಹೊನ್ನೇಗೌಡ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಭೆಯ ಬಳಿಕ ಯಡಪುರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಕಟ್ಟಡದಲ್ಲಿ ತೆರೆಯಲಿರುವ ಕೋವಿಡ್ ಕೇರ್ ಕೇಂದ್ರ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT