ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಸ್ವಚ್ಛ ಸರ್ವೇಕ್ಷಣೆ: ಸುಧಾರಣೆ ಕಂಡ ರ‍್ಯಾಂಕ್‌

ಕಳೆದ ವರ್ಷದ ಸ್ಥಾನಮಾನಕ್ಕೆ ಹೋಲಿಸಿದರೆ, ಈ ಬಾರಿ ಗಣನೀಯ ಸಾಧನೆ, ಶೌಚಾಲಯಗಳಿಗೆ ನೀಡಬೇಕಿದೆ ಒತ್ತು
Last Updated 26 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ರ‍್ಯಾಂಕ್‌ ಈ ವರ್ಷ ಸುಧಾರಣೆ ಕಂಡಿದೆ.ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಆಗಿದ್ದರೆ, ಗುಂಡ್ಲುಪೇಟೆ ಪುರಸಭೆಯಾಗಿದೆ. ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿಗಳಾಗಿವೆ.

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸ್ಥಳೀಯ ಆಡಳಿತಗಳು ಕೈಗೊಳ್ಳುತ್ತಿರುವ ಕ್ರಮಗಳು ರ‍್ಯಾಂಕ್‌ ಪಟ್ಟಿಯ ಸ್ಥಾನದಲ್ಲಿ ಗಣನೀಯ ಸುಧಾರಣೆ ತಂದಿದೆ.

50 ಸಾವಿರದಿಂದ ಒಂದು ಲಕ್ಷದವರೆಗಿನ ಜನಸಂಖ್ಯೆ ಇರುವ ನಗರ ಸಂಸ್ಥೆಗಳ ಪೈಕಿ, ದಕ್ಷಿಣ ವಲಯ ವಿಭಾಗದಲ್ಲಿ ಕೊಳ್ಳೇಗಾಲ ನಗರಸಭೆ 62ನೇ ರ‍್ಯಾಂಕ್‌ ಹಾಗೂ ಚಾಮರಾಜನಗರ 72ನೇ ರ‍್ಯಾಂಕ್‌ ಗಳಿಸಿದೆ. 6,000 ಅಂಕಗಳಿಗೆ ಕೊಳ್ಳೇಗಾಲ ನಗರಸಭೆ 2,188.28 ಹಾಗೂ ಚಾಮರಾಜನಗರ ನಗರ ಸಭೆಯು2,098.89 ಅಂಕಗಳನ್ನು ಗಳಿಸಿವೆ.

ಕಳೆದ ವರ್ಷದ ಸಮೀಕ್ಷೆಯಲ್ಲಿ ಕೊಳ್ಳೇಗಾಲ 498ನೇ ಸ್ಥಾನ ಹಾಗೂ ಚಾಮರಾಜನಗರ 225ನೇ ಸ್ಥಾನ ಪಡೆದಿತ್ತು. 2018ರಲ್ಲಿ ಕೊಳ್ಳೇಗಾಲ 526 ಹಾಗೂ ಚಾಮರಾಜನಗರ129ನೇ ರ‍್ಯಾಂಕ್‌ ಹೊಂದಿತ್ತು. ರಾಜ್ಯ ಮಟ್ಟದಲ್ಲಿ ಈ ವರ್ಷ ಕೊಳ್ಳೇಗಾಲ ನಗರಸಭೆ 12ನೇ ಹಾಗೂ ಚಾಮರಾಜನಗರ ನಗರಸಭೆ 15ನೇ ಸ್ಥಾನಗಳಿಸಿದೆ.

ಗುಂಡ್ಲುಪೇಟೆ ಪುರಸಭೆಯು 25 ಸಾವಿರದಂತೆ 50 ಸಾವಿರ ಜನಸಂಖ್ಯೆ ಇರುವು ಪಟ್ಟಣದ ವ್ಯಾಪ್ತಿಗೆ ಬರುತ್ತಿದ್ದು, ದಕ್ಷಿಣ ವಲಯ ವಿಭಾಗದಲ್ಲಿ 53ನೇ ಸ್ಥಾನಗಳಿಸಿದೆ. 6,000ಕ್ಕೆ 2,210 ಅಂಕಗಳನ್ನು ಗಳಿಸಿದೆ. ಕಳೆದ ವರ್ಷ 193ನೇ ಹಾಗೂ 2018ರ ಸಮೀಕ್ಷೆಯಲ್ಲಿ 329ನೇ ಸ್ಥಾನ ಪಡೆದಿತ್ತು.

ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿಗಳು 25 ಸಾವಿರಕ್ಕೂ ಕಡಿಮೆ ಜನಸಂಖ್ಯೆ ಇರುವ ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತವೆ. ದಕ್ಷಿಣ ವಲಯ ವಿಭಾಗದಲ್ಲಿ ಕ್ರಮವಾಗಿ 161 ಮತ್ತು 595ನೇ ರ‍್ಯಾಂಕ್‌ ಗಳಿಸಿವೆ. ಯಳಂದೂರು 1,868.97 ಅಂಕಗಳನ್ನು ಗಳಿಸಿದರೆ, ಹನೂರು 1,135 ಅಂಕಗಳನ್ನು ಪಡೆದಿದೆ.

ಯಳಂದೂರು ಪಟ್ಟಣ ಪಂಚಾಯಿತಿಯು 2019ರಲ್ಲಿ 734 ಹಾಗೂ 2018ರಲ್ಲಿ 572ನೇ ರ‍್ಯಾಂಕ್‌ ಗಳಿಸಿತ್ತು. ಹನೂರು ಪಟ್ಟಣ ಪಂಚಾಯಿತಿ ಕ್ರಮವಾಗಿ 1,014 ಮತ್ತು 406ನೇ ರ‍್ಯಾಂಕ್‌ ಪ‍ಡೆದಿತ್ತು.

6,000 ಅಂಕ: ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛತಾ ಮಟ್ಟವನ್ನು ಒಟ್ಟಾರೆಯಾಗಿ 6,000 ಸಾವಿರ ಅಂಕಗಳಲ್ಲಿ ಅಳೆಯಲಾಗುತ್ತದೆ. ನೇರ ಪರಿಶೀಲನೆ, ಸ್ವಚ್ಛ ಸರ್ವೇಕ್ಷಣ್ ಪ್ರಮಾಣಪತ್ರ (ಬಯಲು ಶೌಚ ಮುಕ್ತ), ಸೇವಾಮಟ್ಟದಲ್ಲಿ ಪ್ರಗತಿ ಹಾಗೂ ಜನಾಭಿಪ್ರಾಯ ಎಂಬ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು, ಪ್ರತಿ ವಿಭಾಗಕ್ಕೂ 1,500 ಅಂಕ ನಿಗದಿಪಡಿಸಲಾಗಿತ್ತು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ, ಸಂಗ್ರಹಣೆ, ಶೌಚಾಲಯಗಳ ಲಭ್ಯತೆ, ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಸೇರಿದಂತೆ ಸ್ವಚ್ಛತೆಗೆ ಸಂಬಂಧಿಸಿದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಂಕಗಳನ್ನು ನೀಡಲಾಗುತ್ತದೆ.

ಮೂರ್ನಾಲ್ಕು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ, ಇತ್ತೀಚೆಗೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸ್ವಚ್ಛತೆಗೆ ಹೆಚ್ಚು ಗಮನ ನೀಡುತ್ತಿದ್ದು, ಮೂಲದಲ್ಲೇ ಹಸಿ ಹಾಗೂ ಒಣಕಸ ಪ್ರತ್ಯೇಕಿಸಿ ಸಂಗ್ರಹಿಸಲು ಗಮನ ನೀಡುತ್ತಿದೆ. ಘನ ತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಿವೆ.

ಶೌಚಾ‌ಲಯಗಳ ಬಳಕೆ ಹೆಚ್ಚಬೇಕು: ‘ಐದೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಕುಟುಂಬಗಳಿಗೆ ಇನ್ನೂ ಶೌಚಾಲಯಗಳಿಲ್ಲ. ಇನ್ನೂ ಪೂರ್ಣ ಪ್ರಮಾಣದಲ್ಲಿ ಬಯಲು ಶೌಚಾಲಯ ಮುಕ್ತ ಆಗಿಲ್ಲ. ಜನರು ಈಗಲೂ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸುತ್ತಿದ್ದಾರೆ. ಎಲ್ಲ ಕುಟುಂಬಗಳೂ ಶೌಚಾಲಯ ಬಳಸುವಂತಾದರೆ, ನಮ್ಮ ರ‍್ಯಾಂಕ್‌ ಇನ್ನಷ್ಟು ಹೆಚ್ಚಲಿದೆ ಎಂದು ಹೇಳುತ್ತಾರೆ’ ಅಧಿಕಾರಿಗಳು.

‘ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು’

‘ಸ್ವಚ್ಛ ಭಾರತ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಗಮನಾರ್ಹ ಸಾಧನೆ ಮಾಡಿವೆ. ನಗರ, ಪಟ್ಟಣ ಪ್ರದೇಶಗಳ ಸ್ವಚ್ಛತೆ ಕಾಪಾಡಲು ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ 31 ವಾರ್ಡ್‌ಗಳ ಪೈಕಿ 23 ವಾರ್ಡ್‌ಗಳಲ್ಲಿ ಮೂಲದಲ್ಲಿ ಹಸಿ ಕಸ, ಒಣಕಸ ಬೇರ್ಪಡಿಸಲಾಗುತ್ತಿದೆ. ಇದನ್ನು ಇನ್ನಷ್ಟು ವಾರ್ಡ್‌ಗಳಿಗೆ ವಿಸ್ತರಿಸಲಾಗುವುದು. ಮುಂದಿನ ವರ್ಷ ದಕ್ಷಿಣ ವಲಯದಲ್ಲಿ 10ನೇ ರ‍್ಯಾಂಕ್‌ ಒಳಗಿನ ಸ್ಥಾನ ಹೊಂದುವ ಗುರಿಯೊಂದಿಗೆ ಕೆಲಸ ಮಾಡುತ್ತೇವೆ’ ಎಂದು ಚಾಮರಾಜನಗರ ನಗರಸಭಾ ಆಯುಕ್ತ ಎಂ.ರಾಜಣ್ಣ ಅವರು ತಿಳಿಸಿದರು.

‘ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಈ ವರ್ಷ ಹೆಚ್ಚು ಶ್ರಮ ಹಾಕಿದ್ದೇವೆ. ಮುಂದಿನ ವರ್ಷವೂ ಇದೇ ರೀತಿ ಕೆಲಸ ಮಾಡುತ್ತೇವೆ. ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜನರ ಸಹಕಾರವೂ ಮುಖ್ಯ’ ಎಂದು ಕೊಳ್ಳೇಗಾಲ ನಗರಸಭೆಯ ಆಯುಕ್ತ ನಾಗಶೆಟ್ಟಿ ಅವರು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT