ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ದಾಳಿ; 23 ಟ್ರ್ಯಾಕ್ಟರ್‌ ಲೋಡ್‌ ಮರಳು ವಶ

ಕೊಳ್ಳೇಗಾಲ: ಕಾವೇರಿ ನದಿ ತೀರದಲ್ಲಿ ಹೆಚ್ಚಿದ ಅಕ್ರಮ ಮರಳು ದಂಧೆ
Last Updated 29 ಮೇ 2022, 16:01 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದ ಕಾವೇರಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಶೇಖರಣೆ ಮಾಡಿ ಇಟ್ಟಿದ್ದ ಸ್ಥಳಕ್ಕೆ ತಹಶೀಲ್ದಾರ್ ಮಂಜುಳ ನೇತೃತ್ವದ ತಂಡ ಭಾನುವಾರ ಮುಂಜಾನೆ ದಾಳಿ ನಡೆಸಿ 23 ಟ್ರ್ಯಾಕ್ಟರ್‌ ಲೋಡ್‌ಗಳಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ.

ಕಾವೇರಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸುವ, ಹೊರಗಡೆ ಮಾರಾಟ ಮಾಡುವ ದಂಧೆ ಸಕ್ರಿಯವಾಗಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಭಾರಿ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ನೇತೃತ್ವದ ತಂಡ ದಾಳಿ ನಡೆಸಿದೆ.

ಭಾನುವಾರ ಬೆಳಿಗ್ಗೆ 5 ಗಂಟೆಗೆ ತಹಶೀಲ್ದಾರ್ ನೇತೃತ್ವದ ತಂಡ ನದಿತೀರಕ್ಕೆ ಭೇಟಿ ನೀಡಿದಾಗ ಕೆಲವರು ನದಿಯಿಂದ ಮರಳನ್ನು ಎತ್ತಿ ನದಿ ತೀರದಲ್ಲಿ ಶೇಖರಣೆ ಮಾಡುತ್ತಿದ್ದರು.

ತಹಶೀಲ್ದಾರ್ ಅವರನ್ನು ಕಂಡ ಕೂಡಲೇ ಮರಳು ಕಳ್ಳರು ನದಿಯಲ್ಲಿ ಈಜಿ ಪರಾರಿಯಾಗಿದ್ದಾರೆ. ನಂತರ ತಹಶೀಲ್ದಾರ್ ಅವರು ಜೆ.ಸಿ.ಬಿ ಯಂತ್ರವನ್ನು ತರಿಸಿ ಶೇಖರಣೆ ಮಾಡಿ ಇಟ್ಟಿದ್ದ ಮರಳನ್ನು ತಾಲ್ಲೂಕು ಕಚೇರಿ ಆವರಣಕ್ಕೆ ಸಾಗಿಸಿದರು.

ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನಿರಂತರ ದಂಧೆ: ಕಾವೇರಿ ನದಿಯಿಂದ ಮರಳು ಸಂಗ್ರಹಿಸುವುದಕ್ಕೆ ಗಣಿ ಇಲಾಖೆ ಅನುಮತಿ ಕೊಟ್ಟಿಲ್ಲ. ಹಾಗಿದ್ದರೂ ಕೆಲವರು ರಾತ್ರಿ ಹೊತ್ತು ನದಿಯಿಂದ ಮರಳು ಎತ್ತಿ ಎತ್ತಿನ ಗಾಡಿ, ಸಣ್ಣ ವಾಹನಗಳಲ್ಲಿ ಹೊರಗಡೆ ಸಾಗಿಸುತ್ತಿದ್ದಾರೆ. ಪೊಲೀಸರು, ಗಣಿ ಇಲಾಖೆಯ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ನದಿಯಿಂದ ದಿನಕ್ಕೆ ಕನಿಷ್ಠ 50 ಎತ್ತಿನ ಗಾಡಿಗಳಷ್ಟು ಮರಳನ್ನು ಸಂಗ್ರಹಿಸಲಾಗುತ್ತಿದೆ. ಪೊಲೀಸರು, ತಾಲ್ಲೂಕು ಆಡಳಿತದ ಗಮನಕ್ಕೆ ಬಂದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ನದಿ ತೀರದ ಗ್ರಾಮದವರಿಗೆ ಮರಳು ಸಿಕ್ಕುತ್ತಿಲ್ಲ; ಆದರೆ ನಗರ ಪ್ರದೇಶಕ್ಕೆ ಮಾತ್ರ ಮರಳು ಎಗ್ಗಿಲ್ಲದೆ ಹೋಗುತ್ತಿದೆ. ಕೇಳಿದರೆ, ‘ನಮ್ಮನ್ನು ತಡೆಯುವರು ಯಾರು ಇಲ್ಲ’ ಎಂದು ಸಬೂಬು ಹೇಳುತ್ತಾರೆ’ ಎಂದು ಗ್ರಾಮದ ನಂಜಪ್ಪ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT