ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಬೆಳೆಗಾರರಿಗೆ ಸಿಹಿ ತಾರದ ಹುಣಸೆಹಣ್ಣು!

ಕ್ವಿಂಟಲ್‌ಗೆ ₹2,000 ಕುಸಿತ ಕಂಡ
Last Updated 4 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಅರೆ ನೀರಾವರಿ ಪ್ರದೇಶ, ತೋಪು ಮತ್ತು ಬಿಡಿ ಮರಗಳಲ್ಲಿ ಬೆಳೆದ ಹುಣಸೆಉತ್ತಮ ಫಸಲು ನೀಡಿದೆ. ನಿಧಾನಕ್ಕೆ ವ್ಯಾಪಾರ ವಹಿವಾಟು ಕುದುರುತ್ತಿದೆ. ಆದರೆ, ಕಳೆದವರ್ಷದ ಧಾರಣೆ ರೈತರಿಗೆ ಸಿಗುತ್ತಿಲ್ಲ. ಬೇಡಿಕೆಯೂ ನಿರೀಕ್ಷಿಸಿದಂತೆ ಇಲ್ಲ.

ಹಾಗಾಗಿ, ಹಬ್ಬಗಳ ಸಾಲು ಆರಂಭವಾದರೂ, ಹುಣಸೆ ಬೆಳೆಗಾರರಿಗೆ ಶುಭ ಸೂಚನೆ ತರುವ ಲಕ್ಷಣ ಗೋಚರಿಸುತ್ತಿಲ್ಲ. ಬೆಲೆ ಕುಸಿತ ರೀತಿಗೆ ದಲ್ಲಾಳಿಗಳು ಹುಣಸೆ ಖರೀದಿಯನ್ನು ಮತ್ತೊಂದು ತಿಂಗಳು ಮುಂದೂಡಿದ್ದಾರೆ.

’ಸಂಕ್ರಾಂತಿ ವೇಳೆಗೆ ಮೊದಲ ಹುಣಸೆ ವಹಿವಾಟು ಆರಂಭ ಆಗುತ್ತಿತ್ತು. ಕರಿಪುಳಿ ಹುಣಸೆ ಕಳೆದ ವರ್ಷ ಕ್ವಿಂಟಲ್‌ಗೆ ಬೆಲೆ ₹4000 ಇತ್ತು. ಈ ಬಾರಿ ಫೆಬ್ರುವರಿ ತಿಂಗಳು ಕಂಡರೂ ಧಾರಣೆ ₹2000 ದಾಟಿಲ್ಲ. ಸೇಲಂ, ಕೊಚ್ಚಿ ಮೊದಲಾದ ಮಾರುಕಟ್ಟೆಗಳಲ್ಲಿ ಕೋವಿಡ್ ಸಮಯದಲ್ಲಿ ಸಂಗ್ರಹವಾದ ಹುಣಸೆ ಆವಕ ಧಾರಣೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.ಹಾಗಾಗಿ, ಹೊಸ ಉತ್ಪನ್ನಗಳನ್ನು ಕೇಳುವವರಿಲ್ಲ‘ ಎಂದು ಮಂಡಿ ವರ್ತಕರು ಹೇಳುತ್ತಾರೆ.

’ಈ ಬಾರಿ ಸತತವಾಗಿ ಮಳೆ ಸುರಿಯಿತು. ತೇವಾಂಶ ಏರಿಕೆಯಿಂದ ಹುಣಸೆ ಮಾಗುವ ಸಮಯ 1 ತಿಂಗಳು ಮುಂದೆ ಹೋಯಿತು. ಇಳುವರಿ ಪ್ರಮಾಣದಲ್ಲೂ ಏರಿದೆ. ಆದರೆ, ಮೊದಲು ದಲ್ಲಾಳಿಗಳು ಹುಣಸೆಫಲಕ್ಕೆ ಬೆಲೆ ನಿರ್ಧರಿಸಿ ಮುಂಗಡ ನೀಡುತ್ತಿದ್ದರು. ಮಾಲು ಸಂಗ್ರಹಿಸುವ ವೇಳೆ ಉಳಿದಹಣವನ್ನು ನೀಡುತ್ತಿದ್ದರು. ಆದರೆ, ಈ ಬಾರಿ ಕೊಳ್ಳುವವರು ಬಂದಿಲ್ಲ. ಬೇಡಿಕೆ ಮೊದಲೇಇಲ್ಲ. ಮಧ್ಯವರ್ತಿಗಳನ್ನು ಒತ್ತಾಯಿಸಿದರೆ ಕ್ವಿಂಟಲ್ ₹1000–₹2000 ಕಡಿಮೆಬೆಲೆಗೆ ಕೇಳುತ್ತಾರೆ‘ ಎಂದು ರೈತ ಮಾಂಬಳ್ಳಿ ಮೂರ್ತಿ ಅಸಹಯಾಕತೆ ವ್ಯಕ್ತಪಡಿಸಿದರು.

’ಬಹಳಷ್ಟು ವ್ಯಾಪಾರಿಗಳು ಗಿಡದಿಂದ ಕೊಯ್ಲು ಮಾಡಿ, ಹುಣಸೆಯನ್ನು ರೇಖುಗಳಾಗಿ ತಯಾರಿಸಿ,ಲಾರಿ ಮೂಲಕ ತಮಿಳುನಾಡು ಮಾರುಕಟ್ಟೆಗೆ ಸಾಗಣೆ ಮಾಡುತ್ತಿದ್ದರು. ಲಾಕ್‌ಡೌನ್‌ಅವಧಿಯಲ್ಲಿ ಹೆಚ್ಚಿನ ಹುಣಸೆ ಪೂರೈಕೆ ಆಗಿತ್ತು. ಈ ಉತ್ಪನ್ನ ಇನ್ನೂ ಮಾರಾಟವಾಗಿಲ್ಲ.ಹೊಸ ಹುಣಸೆಹಣ್ಣನ್ನು ವರ್ತಕರು ಕೊಳ್ಳುತ್ತಿಲ್ಲ. ಇದರಿಂದ ಹುಣಸೆಗೆ ಬೆಲೆ ಕುಸಿದರೂ,ಬೇಡಿಕೆ ಹೆಚ್ಚಾಗುತ್ತಿಲ್ಲ‘ ಎಂದು ಬಳೇಪೇಟೆ ವರ್ತಕ ನಸ್ರುಲ್ಲ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಈ ಬಾರಿ ಸಮೃದ್ಧ ಇಳುವರಿ
‘ಕಳೆದ ವರ್ಷ ನೀರಿನ ಕೊರತೆಯಿಂದ ಹುಣಸೆ ಉತ್ಪಾದನೆಯಲ್ಲಿ ಕುಸಿತವಾಗಿತ್ತು. ಗ್ರಾಮೀಣ ಭಾಗದಲ್ಲಿ ಸಗಟು ಬೆಲೆಗೆ ಮರದ ಫಸಲು ಕೊಳ್ಳುವವ್ಯಾಪಾರಿಗಳು ಕೃಷಿಕರಿಗೆ ಕ್ವಿಂಟಲ್‌ಗೆ ಸರಾಸರಿ ₹ 2000 ಮುಂಗಡ ಪಾವತಿಸಿದ್ದರು.ಈ ಸಲ ಕ್ವಿಂಟಲ್‌ ಧಾರಣೆ ₹ 2000ಕ್ಕೆ ದರ ಕುಸಿದಿದೆ. ಹುಣಸೆ ಫಲಹೆಚ್ಚಿದ್ದರೂ, ಲಾಭ ನಿರೀಕ್ಷಿಸದಂತೆ ಆಗಿದೆ’ ಎಂದು ಪಟ್ಟಣದ ನಾಗಣ್ಣ ಹೇಳುತ್ತಾರೆ.

‘ಸಂಸ್ಕರಿಸಿದ ಹುಣಸೆ ಕೆ.ಜಿ.ಗೆ ₹ 180ರಿಂದ ₹ 200 ಇತ್ತು. ಈ ಬಾರಿ ಕೆ.ಜಿ.ಗೆ ₹ 100ರಿಂದ ₹ 120ಕ್ಕೆ ಇಳಿದಿದೆ. ಜನವರಿ-ಏಪ್ರಿಲ್ ನಡುವೆ ಮಹಿಳೆಯರಿಗೆ ಪರ್ಯಾಯ ಉದ್ಯೋಗ ನೀಡುತ್ತಿದ್ದ ಹುಣಸೆ ಸಂಸ್ಕರಣೆ ಕೆಲಸವೂ ಕೈಬಿಟ್ಟಿದೆ. ಶಿವರಾತ್ರಿ ಹಬ್ಬದ ನಂತರವ್ಯಾಪಾರ ಕಳೆಗಟ್ಟುವ ನಿರೀಕ್ಷೆ ಇದೆ. ಕರ್ಫ್ಯೂ ನಿರ್ಬಂಧ ತೆರವುಗೊಳಿಸಿರುವುದರಿಂದಮುಂದಿನ ದಿನಗಳಲ್ಲಿ ಹುಣಸೆಗೆ ಬೆಲೆ ಮತ್ತು ಬೇಡಿಕೆ ಏರಬಹುದು’ ಎಂದು ಪಟ್ಟಣದ ಸುಫಿಯಾ ಬೇಗಂ, ಮಾದಮ್ಮ ಆಶಾ ಭಾವನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT